ಬಸವಕಲ್ಯಾಣ:
ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಅವರೊಂದಿನ ಸಂವಾದ ಸಮಾರಂಭದಲ್ಲಿ ಮಾತನಾಡಿದರು.
ಪಠ್ಯದ ಮೂಲಕ ಲೋಕವನ್ನು ಗ್ರಹಿಸುವುದಾದರೆ, ವಚನಗಳು ಲೋಕ ಮೀಮಾಂಸೆಯ ಕುರಿತು ಮಾತನಾಡಿದ ಪಠ್ಯ ಎಂದು ಹೇಳಿದರು.

ಗ್ರಂಥಾಲಯಗಳು, ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಓದುವ, ಓದಿದದನ್ನು ಲೋಕದ ಮೂಲಕ ಗ್ರಹಿಸುವುದು ಮಾಡಬೇಕು ಎಂದರು.
ಪಠ್ಯದ ಓದಿನ ಜೊತೆಗೆ ಸಾಹಿತ್ಯ, ಕಲೆ, ಸಂಗೀತ ಮೊದಲಾದ ಸೃಜನಶೀಲತೆಯಲ್ಲಿ ತೊಡಗಿದರೆ ಬದುಕಿಗೆ ಹೊಸ ಉತ್ಸಾಹ ಹಾಗೂ ಚೈತನ್ಯ ದೊರಕುತ್ತದೆ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮಾನವಿಕ ಮತ್ತು ಭಾಷಾ ನಿಕಾಯದ ಡೀನರಾದ ಪ್ರೊ. ವಿಕ್ರಮ ವಿಸಾಜಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ಅನೇಕ ಅನುವಾದಕರು ಮಾಡಿದ್ದಾರೆ. ವಚನಗಳು, ಕಾವ್ಯ, ಕತೆಗಳು, ಕಾದಂಬರಿ ಬೇರೆ ಬೇರೆ ಭಾಷೆಗಳಲ್ಲಿ ಭಾಷಾಂತರಗೊಳ್ಳುವ ಮೂಲಕ ಕನ್ನಡ ಪರಂಪರೆ ಹೊರ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯ ಎಂದರು.
ದೇಶದ ಬೌದ್ಧಿಕ, ಅಕಾಡೆಮಿಕ್ ವಲಯದಲ್ಲಿ ಏನೆಲ್ಲಾ ಅಧ್ಯಯನಗಳು ನಡೆಯುತ್ತಿವೆ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಮಾನವಿಕ ಮೊದಲಾದ ಕ್ಷೇತ್ರಗಳಲ್ಲಿ ನಡೆಯುವ ಅನುಸಂಧಾನದ ಕುರಿತು, ಶ್ರೇಷ್ಠ ಬರಹಗಾರರ ಜೊತೆಗಿನ ಚರ್ಚೆಗಳ ಮೂಲಕ ಹೊಸ ಅರಿವು ಪಡೆಯಬೇಕು. ಈ ಕಾಲೇಜು ತಮ್ಮ ವಿದ್ಯಾರ್ಥಿಗಳನ್ನು ಸಮಕಾಲೀನ ಸಾಂಸ್ಕೃತಿಕ ಸಂದರ್ಭದ ಅರಿವನ್ನು ಈ ತರದ ಉಪನ್ಯಾಸಗಳ ಮೂಲಕ ಮಾಡಿಕೊಡುತ್ತಿದೆ ಎಂದರು.

ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಕನ್ನಡ ಸಾಹಿತ್ಯವನ್ನು ವಿಶ್ವದ ಸಾಹಿತ್ಯ ಸಂದರ್ಭದಲ್ಲಿ ನಿಲ್ಲಿಸಿದ ಹೆಗ್ಗಳಿಕೆ ದೀಪಾ ಭಾಸ್ತಿ ಅವರದು. ಭಾಷಾಂತರದ ಹೊಸ ಹಾದಿಯಲ್ಲಿಯೂ ವಿನೂತನ ಲೋಕವನ್ನು ಕಾಣಿಸಲು ಸಾಧ್ಯ ಎಂಬುದು ಅವರ ಹಾರ್ಟ್ ಲ್ಯಾಂಪ್ ಕೃತಿ ನಿದರ್ಶನ ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ ಬಾಳಿಕಾಯಿ, ಒರಿಸ್ಸಾದ ಶುಭಾಂಗಿ ಪಾತ್ರಾ, ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ, ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಕಲಬುರಗಿ ಎನ್. ವಿ. ಕಾಲೇಜು ಉಪನ್ಯಾಸಕ ಡಾ. ಶಿವಾಜಿ ಮೇತ್ರೆ, ಸರ್ವಮಂಗಳಾ ವಿಸಾಜಿ, ಉಪನ್ಯಾಸಕರಾದ ವಿವೇಕಾನಂದ ಶಿಂಧೆ, ಅಶೋಕ ರೆಡ್ಡಿ ಗದಲೇಗಾವ, ಡಾ. ಬಸವರಾಜ ಖಂಡಾಳೆ, ಗಂಗಾಧರ ಸಾಲಿಮಠ, ರೋಶನ್ ಬೀ, ಶೀತಲ್ ರೆಡ್ಡಿ, ಪ್ರಿಯಾ ಚೌಹಾಣ್ ಮೊದಲಾದವರಿದ್ದರು.

ಸಂಗೀತಾ ಮಹಾಗಾವೆ ನಿರೂಪಿಸಿದರು. ಚೆನ್ನಬಸಪ್ಪ ಗೌರ ಸ್ವಾಗತಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.
