ಬಸವ ತತ್ವದಂತೆ ನಡೆದ ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವ

ನಾಗರಾಜ ಗಂಟಿ
ನಾಗರಾಜ ಗಂಟಿ

ಹಗರಿಬೊಮ್ಮನಹಳ್ಳಿ

ತಾಲೂಕಿನ ಬಾಚಿಗೊಂಡನಹಳ್ಳಿಯಲ್ಲಿನ ತೊಂಟದಾರ್ಯ ಶಾಖಾಮಠ ಗ್ರಾಮದ ವತಿಯಿಂದ ಶುಕ್ರವಾರ ಬಸವ ತತ್ವ ಅನುಸಾರ ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.

ಲಿಂಗೈಕ್ಯ ಪೂಜ್ಯ ತೋಂಟದ ಕೌದಿ ಮಹಾಂತೇಶ್ವರ ಮಹಾಸ್ವಾಮಿಗಳ ಪರ್ವ ಕಾರ್ಯಕ್ರಮದ ಅಂಗವಾಗಿ ನಡೆದ ಕಲ್ಯಾಣ ಮಹೋತ್ಸವದಲ್ಲಿ ನಾಲ್ಕು ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.

ನೂತನ ವಧು-ವರರಿಗೆ ಪ್ರತಿಜ್ಞಾವಿಧಿ ಮತ್ತು ಬಸವ ತತ್ವ ಅನುಸಾರ ವಿವಾಹ ಕಾರ್ಯಕ್ರಮವನ್ನು ವಚನಮೂರ್ತಿಗಳಾದ ಚಿತ್ರದುರ್ಗದ ಜ್ಞಾನಮೂರ್ತಿ ಮತ್ತು ದಾವಣಗೆರೆಯ ಶಿವಕುಮಾರವರು ಅರ್ಥಪೂರ್ಣವಾಗಿ ನೆರವೇರಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪೂಜ್ಯ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ನೂತನ ವಧು-ವರರಿಗೆ ಬಸವಾದಿ ಶರಣರ ತತ್ವ ವಿಚಾರಗಳನ್ನು ಬೋಧಿಸಿ ಶುಭ ಹಾರೈಸಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಗೆ ಬಹಳ ಹಣ ಖರ್ಚು ಮಾಡಿ ಅದ್ದೂರಿ ಮದುವೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಬಡಜನತೆಗೆ ನೆರವಾಗ ಬೇಕಿದೆ. ಬಸವಣ್ಣನವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳು ಮಾನವ ಸಮಾಜಕ್ಕೆ ಮಾರ್ಗದರ್ಶಕವಾಗಿ ಬೆಳಕನ್ನು ಬೀರುವಂತಿವೆ ಎಂದು ಸಿದ್ದರಾಮ ಶ್ರೀಗಳು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಚಿಗೊಂಡನಹಳ್ಳಿ ಶಾಸಕ ಕೆ ನೇಮರಾಜ ನಾಯ್ಕ ಮಠಾಧೀಶರ ನೇತೃತ್ವದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಸತಿ-ಪತಿಯರಿಗೆ ಉತ್ತಮ ಸಂದೇಶ ನೀಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೊಂಡೂರಿನ ಪ್ರಭು ಮಹಾಸ್ವಾಮಿಗಳು, ಅರಸೀಕೆರೆಯ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು, ನಂದಿಪುರದ ಮಹೇಶ್ವರ ಮಹಾಸ್ವಾಮಿಗಳು, ಗದ್ದಿಕೇರಿಯ ಇಮ್ಮಡಿ ಮಹಾಂತ ಮಹಾಸ್ವಾಮಿಗಳು, ಹಾಲಸಿದ್ದೇಶ್ವರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ದಾಸೋಹಿಗಳಿಗೆ ಸನ್ಮಾನಿಸಲಾಯಿತು.

ಬಾಚಿಗೊಂಡನಹಳ್ಳಿ ಗ್ರಾಮದ ತೋಂಟದಾರ್ಯ ಮಠದ ಸದ್ಭಕ್ತರು, ಸುತ್ತಮುತ್ತಲಿನ ಭಾಗದ ಸದ್ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಗರಿಬೊಮ್ಮನಹಳ್ಳಿಯ ಪುರಸಭೆ ಅಧ್ಯಕ್ಷರಾದ ಮರಿರಾಮಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್. ಮೈಲಮ್ಮ, ಅಕ್ಕಿ ತೋಟೇಶ್, ಮುಂಡರಗಿ ಮಂಜುನಾಥ, ಸಾಹಿತಿ ಹುರುಕಡ್ಲಿ ಶಿವಕುಮಾರ, ಬಸವರಾಜ ಅಯ್ಯನಗೌಡ್ರು, ವಿಶ್ವನಾಥ್, ಮಹೇಶ್, ಸುರೇಶ್ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಮೇಶ ಪತ್ತಾರ ಹಾಗೂ ಸಂಗಡಿಗರು ವಚನ ಗಾಯನವನ್ನು ಪ್ರಸ್ತುತಪಡಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *