ಚೆನ್ನಬಸವಣ್ಣನಂತಹ ಮಗನನ್ನು ಕೊಡು ತಾಯಿ: ಬಸವ ತತ್ವದ ಸೀಮಂತ ಕಾರ್ಯಕ್ರಮ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಧಾರವಾಡ

ಬಸವ ಕೇಂದ್ರದ ಮಾಜಿ ಅಧ್ಯಕ್ಷರು ಹಾಗೂ ಪ್ರತಿಷ್ಠಿತ ಎಲ್.ಇ.ಎ. ಕ್ಯಾಂಟೀನ್ ಮಾಲಿಕರಾದ ರಾಜು ಮಾಳಪ್ಪನವರ ಅವರ ಸೊಸೆ ಸುಪ್ರೀತಾ ಅಭಿಲಾಷ ಮಾಳಪ್ಪನವರ ಅವರ ಸೀಮಂತ ಕಾರ್ಯಕ್ರಮವು ವಚನಾಧಾರಿತ, ಲಿಂಗಾಯತ ಧರ್ಮಾಚರಣೆಯಂತೆ ಧಾರವಾಡದ ಮರಾಠಗಲ್ಲಿಯಲ್ಲಿರುವ ಸರಸ್ವತಿನಿಕೇತನದಲ್ಲಿ ಈಚೆಗೆ ನಡೆಯಿತು.

ವಚನಮೂರ್ತಿಗಳಾದ ಬಿ.ಎಸ್. ತೋಟದ ನೇತೃತ್ವದಲ್ಲಿ, ಬಸವಕೇಂದ್ರದ ಸದಸ್ಯರಾದ ಸವಿತಾ ನಡಕಟ್ಟಿ, ಪ್ರಜ್ಞಾ ನಡಕಟ್ಟಿ, ಶೇಖರ ಕುಂದಗೋಳ, ಅನಿಲ ಅಂಗಡಿ, ಅಶೋಕ ಅಂಗಡಿ ಸೇರಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ಹಳಿಯಾಳದ ಮಹಾನಂದ ಅವರ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ, ಶರಣೆ ಸುಪ್ರೀತಾ ಹಾಗೂ ಶರಣ ಅಭಿಲಾಷ ಅವರಿಂದ ಎನ್ನ ವಾಮ ಕ್ಷೇಮ ನಿಮ್ಮದಯ್ಯ …. ಹಾಗೂ ತಂದೆ ನೀನು ತಾಯಿ ನೀನು … ಈ ಎರಡು ವಚನಗಳನ್ನು ಹೇಳಿಸಲಾಯಿತು. ನಂತರ ಅವರುಗಳು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಮಾಡಿದರು.

ಸುಪ್ರೀತಾ ಹಾಗೂ ಅಭಿಲಾಷ ಅವರನ್ನು ಕೂರಿಸಿ ಅವರಿಗೆ ಸಂಸ್ಕಾರಗಳನ್ನು ನೀಡಲಾಯಿತು. ನಂತರ ಭಾವೋದಕ ಸಿದ್ಧತೆ ಮಾಡಿಕೊಳ್ಳಲಾಯಿತು, ಮಾಡಿಕೊಳ್ಳುವಾಗ ಬಸವಂ ಭಕ್ತಿಗೆ ಮೂಲಂ …. ವಚನ ಹೇಳಲಾಯಿತು. ಸಿದ್ಧವಾದ ಭಾವೋದಕವನ್ನು ದಂಪತಿಗೆ ಸಿಂಪರಣೆ ಮಾಡಲಾಯಿತು. ಸಿಂಪರಣೆ ಮಾಡುವಾಗ ಸಜ್ಜನಳಾಗಿ ಮಜ್ಜನಕ್ಕೆರೆವೆ …. ಎಂಬ ವಚನ ಹೇಳಲಾಯಿತು.

ಸೋದರಮಾವ ಶರಣರಾದ ರಾಜಶೇಖರ ಹಾಗೂ ಅವರ ಧರ್ಮಪತ್ನಿ ಶರಣೆ ಜಯಶ್ರೀ ನಿಡೋಣಿ ಅವರುಗಳು ಕ್ರಿಯಾ ಮೂರ್ತಿಗಳಾಗಿ ಕಾರ್ಯನಿರ್ವಹಿಸಿದರು.

ಸುಪ್ರೀತಾಗೆ ದಂಡಿಮುಡಿಸಿ ಉಡಿತುಂಬಲಾಯಿತು ನಂತರ ದಂಪತಿ ಪರಸ್ಪರ ಹಾರ ವಿನಿಮಯ ಮಾಡಿಕೊಂಡರು, ಈ ಎಲ್ಲ ಸಂದರ್ಭಗಳಲ್ಲಿ ಹಾಲ ತೊರೆಗೆ ಬೆಲ್ಲದ ಕೆಸರು … ಎಂಬ ವಚನ ಗಾಯನ ಮಾಡಲಾಯಿತು.

ಸುಪ್ರೀತ ಅವರಿಗೆ ಎಲ್ಲರ ಪರವಾಗಿ ಹಾರೈಕೆಗಳನ್ನು ಮಾಡಲಾಯಿತು. ಸುಪ್ರೀತಾ ನೀನು ಚೆನ್ನಬಸವಣ್ಣನಂತಹ ಮಗನನ್ನು ಕೊಡು, ಸುಪ್ರೀತಾ ನೀನು ಈ ನಾಡಿಗೆ ಒಬ್ಬ ಶ್ರೇಷ್ಠ ವಿಜ್ಞಾನಿಯನ್ನು ಕೊಡು, ಸುಪ್ರೀತಾ ನೀನು ಈ ನಾಡಿಗೆ ಒಬ್ಬ ಜ್ಞಾನಿಯನ್ನು ಕೊಡು, ಸುಪ್ರೀತ ನೀನು ವೀರರಾಣಿ ಕಿತ್ತೂರು ಚೆನ್ನಮ್ಮನಂತಹ ಮಗಳನ್ನು ಕೊಡು, ….. ಹೀಗೆಂದು ಹಾರೈಸುತ್ತಾ ಮನೆಯವರ ಕಡೆಯಿಂದ ಆಕೆಯ ಮೇಲೆ ಪುಷ್ಪವೃಷ್ಟಿ ಮಾಡಿಸಲಾಯಿತು.

ಬಂಧುಗಳು, ಆಪ್ತರು-ಮಿತ್ರರು ಸೇರಿದ್ದರು. ರಾಜು ಮಾಳಪ್ಪನವರ ಅವರು ಶರಣು ಸಮರ್ಪಣೆ ಗೈದರು. ಬಂದವರಿಗೆಲ್ಲ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share This Article
2 Comments
  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಸಾತ್ವೀಕ ನೆಲೆಗಟ್ಟಿನ ಕಾರ್ಯಕ್ರಮಗಳು ಮೊಳಗಲಿ
    ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *