ಶರಣ ಸಂಗಮದಲ್ಲಿ ಮಹತ್ವದ ‘ನೊಳಂಬ ಲಿಂಗಾಯತರು’ ಕೃತಿ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ತುಮಕೂರು:

ಬಸವ ಪೂರ್ವದ ಇತಿಹಾಸವುಳ್ಳ ನೊಳಂಬ ಲಿಂಗಾಯತ ಸಮುದಾಯವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಡಾ.ಡಿ.ಎನ್.ಯೋಗೀಶ್ವರಪ್ಪ ‘ನೊಳಂಬ ಲಿಂಗಾಯತರು’ ಎಂಬ ಕೃತಿಯನ್ನು ರಚಿಸಿದ್ದಾರೆ ಎಂದು ಶರಣತತ್ವ ಸಾಹಿತಿ ವೆಂಕಟಾಪುರ ಬಸವರಾಜಪ್ಪ ಹೇಳಿದರು.

ಬಸವ ಕೇಂದ್ರ ಹಾಗೂ ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ನಗರದ ಶ್ರೀ ಮುರುಘರಾಜೇಂದ್ರ ಸಭಾಂಗಣದಲ್ಲಿ ‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ಡಾ. ಡಿ.ಎನ್. ಯೋಗೀಶ್ವರಪ್ಪನವರ “ನೊಳಂಬ ಲಿಂಗಾಯತರು”ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕೃತಿಯ ಕುರಿತು ಸಾಹಿತಿ ಸುಶೀಲಾ ಸದಾಶಿವಯ್ಯ ಮಾತನಾಡಿ, ಬಸವಾದಿ ಶರಣರು ಸ್ಥಾಪಿಸಿದ್ದ ಜಾತ್ಯಾತೀತ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡು ಬಂದಿದ್ದ ಅನೇಕ ಸಮುದಾಯಗಳು ತಮ್ಮ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಂಡರೂ ತಮ್ಮ ಮತಾಂತರ ಪೂರ್ವದ ವಾಸನೆಯನ್ನು ಬಿಡದೆ ಅತ್ತ ಪೂರ್ವ ಪರಂಪರೆಯನ್ನೂ ಇತ್ತ ಬಸವಾದಿ ಶರಣರ ಆಚರಣೆಯನ್ನೂ ಪಾಲಿಸುತ್ತಾ ಬಂದಿರುವುದು ನೊಳಂಬ ಲಿಂಗಾಯತ ಸಮಾಜದಲ್ಲಿ ಹಾಸುಹೊಕ್ಕಾಗಿರುವುದನ್ನು ಲೇಖಕರು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ ಎಂದರು.

ಮೈಸೂರು ಭಾಗದಲ್ಲಿ ಲಿಂಗಾಯತ ಸಮುದಾಯವನ್ನು ಜನಗಣತಿ ಕಾಲಕ್ಕೆ ಶೂದ್ರ ಸಮೂಹಕ್ಕೆ ಸೇರಿಸಿದಾಗ ರೊಚ್ಚಿಗೆದ್ದ ಲಿಂಗಾಯತ ಹಿರಿಯರು ಪ್ರತಿಭಟನೆಗೆ ಮುಂದಾಗಿ ತಮ್ಮನ್ನು ಲಿಂಗಿ ಬ್ರಾಹ್ಮಣರೆಂದು ದಾಖಲಿಸಬೇಕೆಂದು ಒತ್ತಾಯಿಸಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಅನುಮತಿ ಪಡೆದ ಹೋರಾಟಗಳನ್ನು ಈ ಕೃತಿ ಒಳಗೊಂಡಿದೆ.

ಲಿಂಗಾಯತರಲ್ಲಿ 98 ಒಳಪಂಗಡಗಳು ಇದ್ದು ಅವುಗಳಲ್ಲೇ ತಾರತಮ್ಯವಿದ್ದುದನ್ನು ಈ ಕೃತಿ ದಾಖಲಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ ಮಾತನಾಡಿ, ಗುರು ಸಿದ್ಧರಾಮೇಶ್ವರರ ಆರಾಧಕರಾದ ನೊಳಂಬ ಲಿಂಗಾಯತರು ಪ್ರತಿವರ್ಷ ಬೃಹತ್ ಪ್ರಮಾಣದಲ್ಲಿ ಸಿದ್ಧರಾಮೇಶ್ವರರ ಜಯಂತಿ ಆಚರಿಸುವುದರ ಮೂಲಕ ಸಮಾಜವನ್ನು ಸಂಘಟಿಸುತ್ತಾ ನೊಳಂಬ ಲಿಂಗಾಯತ ಸಂಘವನ್ನು ಸ್ಥಾಪಿಸಿ ಆ ಮೂಲಕ ಜನಮುಖಿ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಕೃತಿಯ ಲೇಖಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಲಿಂಗಾಯತರಲ್ಲಿ 98 ಒಳಪಂಗಡಗಳಿದ್ದು ಅವುಗಳಲ್ಲಿ ನೊಳಂಬ ಲಿಂಗಾಯತರು ಎಂಟು ಜಿಲ್ಲೆಗಳಲ್ಲಿ ಗಣನೀಯವಾಗಿ ನೆಲೆಸಿದ್ದು, ಕೆಲ ಜಿಲ್ಲೆಗಳಲ್ಲಿ ರಾಜಕೀಯವಾಗಿ ಪ್ರಭಾವಶಾಲಿಗಳಾಗಿದ್ದಾರೆ.

ಬಹುಮುಖಿ ಸಂಸ್ಕೃತಿಯ ಆರಾಧಕರಾಗಿದ್ದ ನೊಳಂಬರ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಅಳಿಸಿಹೋಗುತ್ತಿರುವುದನ್ನು ಗಮನಿಸಿದ ನಾನು ಆ ಸಂಸ್ಕೃತಿಯನ್ನು ದಾಖಲಿಸುವ ಉದ್ದೇಶದಿಂದ ಈ ಕೃತಿ ರಚನೆ ಮಾಡಿದ್ದೇನೆ ಎಂದರು.

ಪ್ರಾಧ್ಯಾಪಕರಾದ ಡಾ.ಎಂ.ಗೋವಿಂದರಾಯ ಮಾತನಾಡಿ, ನೊಳಂಬ ಲಿಂಗಾಯತ ಸಮಾಜದ ಮೇಲೆ ಬೆಳಕನ್ನು ಚೆಲ್ಲುವ ಈ ಕೃತಿ ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದ್ದು, ಇದು ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದರು.

ವೇದಿಕೆಯಲ್ಲಿ ಕಲಾಶ್ರೀ ಡಾ.ಲಕ್ಷ್ಮಣದಾಸ್, ಪ್ರಕಾಶಕ ಸತೀಶ್ ಹೆಬ್ಬಾಕ ಹಾಜರಿದ್ದರು. ಬಸವ ಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು.

ಬಸವ ಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ ನಿರೂಪಿಸಿದರು. ಕಲ್ಪನಾ ಉಮೇಶ ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಬಿ.ನಾಗಭೂಷಣ ಶರಣು ಸಮರ್ಪಿಸಿದರು. ಕುಸುಮಾ ಪ್ರಾರ್ಥಿಸಿದರು. ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *