ನುಲಿಯ ಚಂದಯ್ಯ ಜಯಂತಿ: ಮೂರುಸಾವಿರ ಮಠದಲ್ಲಿ ಸಾಮೂಹಿಕ ವಚನ ಪಾರಾಯಣ

ಹುಬ್ಬಳ್ಳಿ:

ಶರಣ ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ನಗರದ ಶ್ರೀ ಜಗದ್ಗುರು ಮೂರುಸಾವಿರ ಮಠದಲ್ಲಿ ಬಸವಾದಿ ಶರಣರ ೧೦೮ ವಚನಗಳ ಸಾಮೂಹಿಕ ಪಾರಾಯಣ ಸೋಮವಾರ ನಡೆಯಿತು.

ಶ್ರೀಮಠದ ಪೂಜ್ಯ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ವಚನ ಪಾರಾಯಣ ಮಾಲಿಕೆ ೧ ಗ್ರಂಥವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ವಚನಗಳು ವಿಶ್ವದ ಶ್ರೇಷ್ಠ ಮೌಲ್ಯ ಸಾರುವ ಗ್ರಂಥಗಳಾಗಿವೆ. ಜಾತಿ, ಮತ, ಪಂಥ ಭೇದವನ್ನು ಮೀರಿ ಸಮಾನತೆ ಸಾರುವ ಸಾರ್ವಕಾಲಿಕ ಸತ್ಯ ಅವುಗಳಲ್ಲಿ ಅಡಗಿದೆ. ನಾನು ವಚನ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದೇನೆ ಎಂದರು.

ಪೂಜ್ಯರಾದ ಅಥಣಿ ಶಿವಯೋಗಿಗಳು, ಇಳಕಲ್ಲಿನ ವಿಜಯಮಹಾಂತಪ್ಪಗಳು, ಘನಮಠ ಶಿವಯೋಗಿಗಳು ವಚನ ಗ್ರಂಥಗಳನ್ನು ಬೆನ್ನಿಗೆ ಕಟ್ಟಿಕೊಂಡು ನಾಡಿನಾದ್ಯಂತ ಸಂಚರಿಸಿ ವಚನಗಳ ಪ್ರಸಾರ ಮಾಡಿದ್ದು ಈ ನಾಡಿನ ಇತಿಹಾಸದಲ್ಲಿರುವದನ್ನು ಸ್ಮರಿಸಿದರು.

ಲಿಂಗಾಯತ ಧರ್ಮಿಯರು ವಚನಗಳನ್ನೇ ನಿತ್ಯ ಪಾರಾಯಣ ಮಾಡಿ ಬದುಕನ್ನು ಹಸನುಗೊಳಿಸಿಕೊಳ್ಳುವ ಸಂದೇಶ ನೀಡಿದರು.

ಹಿರಿಯ ಅನುಭಾವಿ ಶರಣ ಪ್ರೊ. ಸಿದ್ದಣ್ಣ ಲಂಗೋಟಿ ಸಭೆಯಲ್ಲಿ ತಮ್ಮ ಅನುಭಾವ ನೀಡಿದರು. ಡಾ. ಸ್ನೇಹಾ ಭೂಸನೂರ ಹಾಗೂ ಸುಮಾರು ೨೦೦ಕ್ಕೂ ಅಧಿಕ ಶರಣೆಯರು ಏಕಕಾಲಕ್ಕೆ ಬಸವಾದಿ ಶರಣರ ೧೦೮ ವಚನಗಳನ್ನು ಅತ್ಯಂತ ಸುಶ್ರಾವ್ಯವಾಗಿ ಪಾರಾಯಣ ಮಾಡಿದರು.

ಶ್ರೀಮಠದ ದಾಸೋಹ ಭವನದಲ್ಲಿ ಎಲ್ಲ ಭಕ್ತರಿಗೂ ಅಚ್ಚುಕಟ್ಟಾದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಹಾಶರಣೆ ಗಂಗಾಂಬಿಕ ಬಳಗದ ನೇತೃತ್ವದಲ್ಲಿ, ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ೧೮ ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

Share This Article
Leave a comment

Leave a Reply

Your email address will not be published. Required fields are marked *