ನರಗುಂದ
ನಾನು ಜೀವನದುದ್ದಕ್ಕೂ ವಿದ್ಯಾರ್ಥಿ ಎಂಬ ಭಾವನೆ ಪ್ರತಿಯೊಬ್ಬ ಮಕ್ಕಳಲ್ಲಿ ಬಂದಾಗ ಮಾತ್ರ ಸಾಧನೆಯ ದಾರಿ ಸುಗಮವಾಗುತ್ತದೆ. ಅಂಕಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಇನ್ನೊಬ್ಬರ ಗೆಲುವನ್ನು ಸಂಭ್ರಮಿಸುವ ಭಾವನೆ ಮಕ್ಕಳಲ್ಲಿ ಮೂಡಬೇಕಾಗಿದೆ. ಜೀವನ ಮೌಲ್ಯ ತಿಳಿಸಿ ವ್ಯಕ್ತಿಯ ಸರ್ವತೋಮುಖ ಏಳ್ಗೆಯ ಒಂದು ಪ್ರಮುಖ ಸಾಧನ ಶಿಕ್ಷಣ, ಎಂದು ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್ ಆರ್ ನಿಡಗುಂದಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೭೦ ನೇ ಮಾಸಿಕ ಶಿವಾನುಭವ ಹಾಗೂ ೨೦೨೫ ನೇ ಸಾಲಿನ ಹತ್ತನೆ ತರಗತಿ ಹಾಗೂ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ಅವರ ಅಡಿಪಾಯ ಇದ್ದ ಹಾಗೆ ಹೀಗಾಗಿ ಪ್ರಾಥಮಿಕ ಶಿಕ್ಷಣವನ್ನು ನಿಷ್ಠೆ ಮತ್ತು ಶ್ರದ್ಧೆಯಿಂದ ಕಲಿಯಬೇಕು. ಅದು ಜೀವನದುದ್ದಕ್ಕೂ ನಮ್ಮ ಜೊತೆಗೆ ಬದುಕಿನ ಬೆಳಕಾಗಿ ಪರಿಣಮಿಸುತ್ತದೆ. ಪಠ್ಯಪುಸ್ತಕದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆರೆಸಿಕೊಂಡು ವಿವೇಕಯಕ್ತ ಜೀವನವನ್ನು ಸಾಗಿಸಬೇಕು, ಜಗತ್ತಿನಲ್ಲಿ ಯಾರು ಕದಿಯಲಾರದ ವಸ್ತು ಎಂದರೆ ವಿದ್ಯೆ ಹೀಗಾಗಿ ಅಂತಹ ವಿದ್ಯೆಯನ್ನು ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಂತವರಾಗಬೇಕು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ನರಗುಂದ ತಾಲೂಕ ಶಸಾಪ ಅಧ್ಯಕ್ಷ ಎಸ್ ಜಿ ಮಣ್ಣೂರಮಠ ಮಾತನಾಡಿ ವಿದ್ಯಾರ್ಥಿಗಳಾದವರು ವಿದ್ಯೆಯ ಜೊತೆಗೆ ವಿನಯತೆಯನ್ನು ಅಳವಡಿಸಿಕೊಂಡು ಸಮಾಜಬಾಹಿರ ಕೆಲಸವನ್ನು ಮಾಡದೆ ಸಚ್ಛಾರಿತ್ರ್ಯವಂತರಾಗಿ ಬದುಕಿ ಇತರರಿಗೆ ಮಾದರಿಯಾಗಬೇಕು. ಪಾಲಕರು ತಮ್ಮ ಮಕ್ಕಳ ಮೇಲೆ ನೀಗಾವಹಿಸಿ ಮಕ್ಕಳು ದುಶ್ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಅವರ ಮುಖ್ಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಾದ ಶಿವಲೀಲಾ ಜಾಲಪ್ಪನವರ, ಪುಷ್ಪಾ ಅಂಬಲಿ, ಸಂತೋಷ ಚಿಕ್ಕುಂಬಿ, ರಾಜೇಶ್ವರಿ ಗುರಪ್ಪಗೌಡ್ರ, ವಿದ್ಯಾ ವಡ್ಡಿಗೇರಿ, ನಂದಿನಿ ಮ್ಯಾಗೇರಿ, ಅಕ್ಷತಾ ನವಲಗುಂದ, ಸಹನಾ ನಾಗನೂರ, ಪೂಜಾ ಮಾಣಿಕ್ ಹಾಗೂ ಹತ್ತನೆ ತರಗತಿ ವಿದ್ಯಾರ್ಥಿಗಳಾದ ಯಶೋಧಾ ಮೋರೆ, ದೇವಕ್ಕ ಕಲಾರಿ, ಭಾವನಾ ಪಾಟೀಲ, ಸ್ಪಂದನಾ ಮಂಟೂರ, ಬಿಷ್ಮಿಲ್ಲಾ ಅತ್ತಾರ, ಶಂಕ್ರವ್ವ ನರಸಾಪೂರ ಶಾಂತಾ ಕೀಲಿಕೈ ಹಾಗೂ ಶ್ರೀಮಠದ ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳಾದ ರುದ್ರಯ್ಯ ಚ ಹಿರೇಮಠ, ವಿನಯ ಅಡಗಿಮನಿ, ಗುರುಬಸವ ಪ್ರೌಢಶಾಲೆಯ ಚಂದ್ರಶೇಖರಯ್ಯ ಅಂಕಲಿಮಠ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಪೂಜ್ಯ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಎಸ್ ಬಿ ಪಾಟೀಲ, ಸಿ ಆರ್ ಪಿ ಭೂಸರೆಡ್ಡಿ, ಚಂದ್ರು ಮಂಟೂರಮಠ, ವಿರಕ್ತಮಠ ಪ್ರಮುಖರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಈರಪ್ಪ ಐನಾಪೂರ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.