ಜಮಖಂಡಿ
ಇತ್ತೀಚೆಗೆ ಲಿಂಗೈಕ್ಯರಾದ ಜಮಖಂಡಿ ಓಲೆಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ವಿಡಿಯೋ ವೈರಲ್ ಆಗಿದೆ.
ಯಾವುದೋ ಭಾಷಣದ ತುಣುಕಾಗಿರುವ ಈ ವಿಡಿಯೋದಲ್ಲಿ ತಮ್ಮ ಮೃದುವಾದ ಮಾತಿನಲ್ಲಿ ನಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆಗಳನ್ನು ಪಟ್ಟಿ ಮಾಡುತ್ತಾರೆ.
‘ವಿದ್ಯೆ ಬಂದು ವಿನಯ ಹೋಯ್ತು, ಸಮೃದ್ಧಿ ಬಂದು ಸಂಸ್ಕೃತಿ ಹೋಯ್ತು, ಮಾತು ಬಂದು ಕೃತಿ ಹೋಯ್ತು, ಜಾತಿ ಬಂದು ಪ್ರೀತಿ ಹೋಯ್ತು…’
ಕೊನೆಯಲ್ಲಿ ‘ಮನುಷ್ಯ ಬಂದ ದೇವರೇ ಓಡಿ ಹೋದ’ ಎಂದು ಹೇಳಿದಾಗ ಜನರೆಲ್ಲಾ ಜೋರಾಗಿ ನಗುವುದೂ ಕೇಳಿಸುತ್ತದೆ.
ಶ್ರೀಗಳು ಅಪರೂಪದ ವಾಗ್ಮಿಗಳು, ಪಂಡಿತರೂ ಆಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಗ್ಗೆಯ ಮಾಯಿದೇವರ ಶಿವಾನುಭವ ಸೂತ್ರ ಒಂದು ಅಧ್ಯಯನ ಎಂಬ ಮಹಾಪ್ರಬಂಧ ಬರೆದು ಪಿಎಚ್.ಡಿ ಪದವಿ ಪಡೆದಿದ್ದರು.
ಅವರು ಬಯಲಾದ ಮೇಲೆ ಸಾಣೇಹಳ್ಳಿ ಶ್ರೀಗಳು “ಮೃದು ಸ್ವಭಾವ, ಮಕ್ಕಳ ಮನಸ್ಸಿನ, ತಮಾಷೆಯ ಮಾತುಗಳ ಮೂಲಕ ಕೇಳುಗರ ಮನಸ್ಸನ್ನು ಆವರಿಸುವ ಗುಣ ಅವರಲ್ಲಿತ್ತು,” ಎಂದು ಬಣ್ಣಿಸಿದ್ದರು.
ಅವರ ಸರಳ ಸ್ವಭಾವ ಮತ್ತು ಅವರನ್ನು ಕಳೆದುಕೊಂಡಿರುವುದರಿಂದ ನಮಗಾಗಿರುವ ನಷ್ಟ ಈ ಸಣ್ಣ ವಿಡಿಯೋದ ತುಣುಕಿನಿಂದಲೇ ಊಹಿಸಬಹುದು.