ಓಲೇಮಠಕ್ಕೆ ಆನಂದ ದೇವರು ನೂತನ ಪೀಠಾಧಿಕಾರಿ

ನವಂಬರ್ 19 ಶಿರೋವಸ್ತ್ರ, ರುದ್ರಾಕ್ಷಿಮಾಲೆ ಹಾಕಿ ಅಧಿಕೃತ ಘೋಷಣೆಯೊಂದಿಗೆ ಪೀಠಾರೋಹಣ

ಜಮಖಂಡಿ

ಓಲೇಮಠ ಅಭಿನವ ಚನ್ನಬಸವ ಸ್ವಾಮೀಜಿ ಲಿಂಗೈಕ್ಯರಾದ ನಂತರ ಶುಕ್ರವಾರ ಮಠದಲ್ಲಿ ನಡೆದ ಸಭೆಯಲ್ಲಿ ಹುಣಶ್ಯಾಳದ ಆನಂದ ದೇವರನ್ನು ಓಲೇಮಠದ ನೂತನ ಪೀಠಾಧಿಕಾರಿಯನ್ನಾಗಿ ನೇಮಕ ಮಾಡಲು ವಿವಿಧ ಮಠಾಧೀಶರು ಹಾಗೂ ಪ್ರಮುಖರು ನಿರ್ಧರಿಸಿದರು.

ಗದಗ ತೊಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ತೋಂಟದ ಸಿದ್ಧರಾಮ ಶ್ರೀ ಮಾತನಾಡಿ, ‘ಎಲ್ಲರ ಅಭಿಪ್ರಾಯದಂತೆ ಆನಂದ ದೇವರು ಬಸವಾನುಯಾಯಿಗಳು, ಲಿಂಗೈಕ್ಯ ಚನ್ನಬಸವ ಸ್ವಾಮಿಜಿ ಅವರ ಸೇವೆಯನ್ನು ಕೆಲಕಾಲ ಮಾಡಿದ್ದಾರೆ. ಅವರು ಈ ಮಠಕ್ಕೆ ಸೂಕ್ತರಾಗುತ್ತಾರೆ. ಅವರನ್ನೇ ಪೂಜ್ಯರ ಸ್ಮರಣೋತ್ಸವ ದಿನದಂದು ಅಧಿಕೃತವಾಗಿ ಘೋಷಣೆಯೊಂದಿಗೆ ಶಿರೋವಸ್ತ್ರ, ರುದ್ರಾಕ್ಷಿಮಾಲೆ ಹಾಕುವುದರೊಂದಿಗೆ ಜವಾಬ್ದಾರಿಯನ್ನು ನೀಡಲಾಗುವುದು’ ಎಂದರು.

ಮೊದಲು ಮಾತನಾಡಿದ ಹಂದಿಗುಂದದ ಶಿವಾನಂದ ಸ್ವಾಮೀಜಿ ‘ಲಿಂಗೈಕ್ಯ ಅಭಿನವ ಚನ್ನಬಸವ ಸ್ವಾಮೀಜಿ ಅವರು ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅವರು ಹಾಕಿಕೊಟ್ಟಂಥ ಓಲೇಮಠದ ಪರಂಪರೆ ಮುನ್ನಡೆಯಬೇಕು. ಆ ದಿಸೆಯಲ್ಲಿ ಮಠಕ್ಕೆ ನ. 19 ರಂದು ನಡೆಯುವ ಪೂಜ್ಯರ ಸ್ಮರಣೋತ್ಸವ-ನುಡಿನಮನ ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿಯನ್ನು ನೇಮಕ ಮಾಡಿಕೊಳ್ಳಲು ಅಭಿಪ್ರಾಯ ತಿಳಿಸಿ’ ಎಂದು ಸೂಚಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಅಶೋಕ ಬರಗುಂಡಿ, ಬಸವ ಕೇಂದ್ರದ ರವಿ ಯಡಹಳ್ಳಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಎನ್.ಎಸ್. ದೇವರವರ, ಬಿ.ಎಸ್. ಸಿಂಧೂರ, ಕಾಡು ಮಾಳಿ, ಕೆ.ಕೆ. ತುಪ್ಪದ, ಸಿ.ಎಸ್. ಬಾಂಗಿ, ಈಶ್ವರ ಕರಬಸನ್ನವರ, ಶಂಕರ ಹನಗಂಡಿ, ಅಪ್ಪಾಸಾಬ ದೇವರವರ, ಶಿವಾನಂದ ಕೊಣ್ಣೂರ ಮಾತನಾಡಿ ಸ್ಮರಣೋತ್ಸವದಂದೇ ಉತ್ತರಾಧಿಕಾರಿಗಳನ್ನು ನೇಮಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ‘ನಾಡಿನ ಶ್ರೇಷ್ಠ ಮಠಗಳಲ್ಲಿ ಓಲೇಮಠವೂ ಒಂದು. ಈ ಮಠದ ಪೀಠಾಧಿಪತಿಗಳಿಂದ ಈ ನಾಡು ಬೆಳಗುವಂತಾಗಲಿ’ ಎಂದರು.

ನಾಗನೂರ ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀ, ಉಗರಗೋಳದ ಮಹಾಂತ ಸ್ವಾಮೀಜಿ, ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀ, ಮುತ್ತಿನಕಂತಿಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಕೊಣ್ಣೂರಿನ ವಿಶ್ವ ಪ್ರಭುದೇವ ಶಿವಾಚಾರ್ಯ ಶ್ರೀ, ಕಂಕನವಾಡಿ, ಕಡಕೋಳ, ಜಮಖಂಡಿ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

Share This Article
2 Comments
  • ತಮಗೆ ಅಭಿನಂದನಗಳು ಬಸವ ತತ್ವವೆ ನಡೆ ನುಡಿಯಾಗಲಿ ಲಿಂಗಾಯತ ಧಮ೯ದ ಆಚರಗಳು ಮನೆ ಮನಕ್ಕೆ ತಲುಪಿಸುವ ಕಾಯ೯ ನಿಮ್ಮ ಯುವ ಮಠಾಧೀಶರ ಉಸಿರಾಗಲಿ.

  • ಶರಣು ಶರಣಾರ್ಥಿಗಳು ಹಾಗೂ ತಮಗೆ ಶ್ರೀ ಗುರು ಬಸವಾ ಭಿನಂದನೆಗಳು. ನಡೆಯಲ್ಲಿ ಬಸವ ತತ್ವ ನುಡಿಯಲ್ಲಿ ಬಸವ ತತ್ವ ನಡೆ-ನುಡಿ ಎರಡರಲ್ಲೂ ಪರಿಪೂರ್ಣ ಬಸವತತ್ವವ ಒಳಗೊಂಡ ಜಂಗಮರಾಗಿ ಸುಮಧುರ ಸುವಾಸನೆಯನ್ನು ಎಲ್ಲೆಡೆ ಪಸರಿಸುವ ಪರಿಪೂರ್ಣ ಜಂಗಮರಾಗಲು ಪ್ರಯತ್ನಿಸಲೆಂದು ಗುರುಬಸವಾದಿ ಶರಣರಲ್ಲಿ ಪ್ರಾರ್ಥಿಸುವೆ.

Leave a Reply

Your email address will not be published. Required fields are marked *