ನಿಮ್ಮಿಂದ ಲಿಂಗದೀಕ್ಷೆ ಪಡೆದು ಶಂಕರಾಚಾರ್ಯರು ತಮ್ಮ ಗ್ರಂಥಗಳಲ್ಲಿ ನಿಮ್ಮನ್ನು ಏಕೆ ಸ್ಮರಿಸಲಿಲ್ಲ?
ದಾವಣಗೆರೆ
ಮಾನ್ಯ ರೇಣುಕಾಚಾರ್ಯರೇ ನೀವು ಹುಟ್ಟಿದ್ದೀರ ಎಂದು ಕೆಲವರು ಹುಟ್ಟಿಲ್ಲ ಎಂದು ಕೆಲವರು ನಂಬಿದ್ದಾರೆ ಅವರವರ ನಂಬಿಕೆ ಅವರಿಗೆ ಆದರೆ ಅದು ಮೂಢನಂಬಿಕೆ ಆಗಿ ಇನ್ನೊಬ್ಬರ ಮೇಲೆ ಹೇರಬಾರದು ಅಲ್ಲವೇ.
ರೇಣುಕಾಚಾರ್ಯರೇ ನಾನು ನಿಮಗೆ ಬಹಿರಂಗ ಪತ್ರ ಬರೆಯಲು ಮುಖ್ಯ ಕಾರಣ ನಿಮ್ಮ ವಿಳಾಸ ಗೊತ್ತಿಲ್ಲ. ಎರಡನೆಯದು ನೀವು ಹುಟ್ಟಿದ್ಧೀರಿ ಎಂಬ ನಂಬಿಕೆ ಮೇಲೆ. ಮೂರನೆಯದು ನಿಮ್ಮ ಹುಟ್ಟು ಮತ್ತು ಜೀವನದ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.
ಹಾಗಾಗಿ ನಿಮಗೆ ಬಹಿರಂಗ ಪತ್ರ ಬರೆಯುತ್ತಿದ್ದೇನೆ.
ತಂದೆ ತಾಯಿಗಳು ಇಲ್ಲದೆ ಹುಟ್ಟಿದ ನೀವು ಹುಟ್ಟಿದ ತಕ್ಷಣ ಆಕಾಶ ಮಾರ್ಗದಲ್ಲಿ ಹೋಗಿ ಅಗಸ್ತ್ಯ ವಿಭೀಷಣ ರಾವಣ ಶಂಕರಾಚಾರ್ಯ ಅವರಂತರಿಗೆ ಲಿಂಗ ದೀಕ್ಷೆ ನೀಡಿದ ಬಗ್ಗೆ ನಿಮ್ಮ ಕಥೆಯಲ್ಲಿ ಬರುತ್ತದೆ. ನಂತರ ನೀವು ಮಠವನ್ನು ಕಟ್ಟಿದ್ದಿರಿ.
ನನ್ನ ಪ್ರಶ್ನೆ ಏನೆಂದರೆ ನೀವು ಮಾತ್ರ ಏಕೆ ಲಿಂಗದಲ್ಲಿ ಹುಟ್ಟಿದಿರೀ? ನಿಮ್ಮ ಮಠದ ಉತ್ತರಾಧಿಕಾರಿಗಳೆಲ್ಲರೂ ಲಿಂಗದಲ್ಲಿಯೇ ಹುಟ್ಟಿ ಮಠದ ಅಧಿಕಾರ ಪಡೆಯುವಂತೆ ಮಾಡುವ ಅದ್ಭುತ ಶಕ್ತಿ ನಿಮಗೆ ಇರಲಿಲ್ಲವೇ?
ಹುಟ್ಟಿದ ತಕ್ಷಣ ಆಕಾಶ ಮಾರ್ಗದಲ್ಲಿ ಹೋಗುವ ವಿದ್ಯೆ ಗೊತ್ತಿದ್ದ ನೀವು ಜನ ಸಾಮಾನ್ಯರಿಗೆ ವಿದ್ಯೆ ಕಲಿಸಿದ್ದರೆ ನಾಡಿಗೆ ಉಪಕಾರ ಆಗುತ್ತಿರಲಿಲ್ಲವೇ? ಕೊನೆಯ ಪಕ್ಷ ನಿಮ್ಮ ಮಠದ ಉತ್ತರಾಧಿಕಾರಿಗಳಿಗೆ ಆದರೂ ಕಲಿಸಿದ್ದರೆ ನಿಮ್ಮ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರುತ್ತಿತ್ತು ಅಲ್ಲವೇ?
ಅಗಸ್ತ್ಯ ವಿಭೀಷಣ ರಾವಣ ಶಂಕರಾಚಾರ್ಯ ಇವರಿಗೆ ನೀವು ಲಿಂಗದೀಕ್ಷೆ ಮಾಡಿರುವ ಬಗ್ಗೆ ಅವರ ಬಗ್ಗೆ ಇರುವ ಯಾವುದೇ ಪುಸ್ತಕಗಳಲ್ಲಿ ಉಲ್ಲೇಖಗಳು ಇಲ್ಲ ಏಕೆ?
ನಿಮ್ಮಿಂದ ಲಿಂಗದೀಕ್ಷೆ ಪಡೆದು ಶಂಕರಾಚಾರ್ಯರು ತಮ್ಮ ಗ್ರಂಥಗಳಲ್ಲಿ ನಿಮ್ಮನ್ನು ಏಕೆ ಸ್ಮರಿಸಲಿಲ್ಲ?
ನೀವು ಲಿಂಗದೀಕ್ಷೆಯನ್ನು ಕೇವಲ ಸಾಧನೆ ಮಾಡಿದ ಪ್ರಸಿದ್ಧರಾದ ವ್ಯಕ್ತಿಗಳಿಗೆ ಮಾತ್ರ ಏಕೆ ನೀಡಿದಿರಿ, ಜನ ಸಾಮಾನ್ಯರಿಗೆ ಲಿಂಗದೀಕ್ಷೆ ನೀಡಿದ ಬಗ್ಗೆ ಉಲ್ಲೇಖ ಇಲ್ಲ.
ಇದರಿಂದ ನೀವು ಕೇವಲ ಪ್ರಸಿದ್ಧರಾದ ವ್ಯಕ್ತಿಗಳ ಪರವಾಗಿ ಇರುವವರು ಎಂದಾಗುತ್ತದೆ ಅಲ್ಲವೇ?
ಈ ಪತ್ರ ನಿಮ್ಮ ಶಿಷ್ಯರ ಮೂಲಕ ತಲುಪಿದ ಮೇಲೆ ಸವಾಧಾನವಾಗಿ ತಿಳಿಸುವಿರೆಂದು ಭಾವಿಸುತ್ತೇನೆ.
ಶರಣು ಶರಣಾರ್ಥಿ ಗಳೊಂದಿಗೆ
ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು