ಬೆಂಗಳೂರು
ತತ್ವಪದಗಳು ಮತ್ತು ವಚನ ಸಾಹಿತ್ಯವು ನನ್ನ ವ್ಯಕ್ತಿತ್ವದ ಮಜಲನ್ನು ಪೂರ್ಣವಾಗಿ ಬದಲಾಯಿಸುವುದರ ಜೊತೆಗೆ ಒಟ್ಟಾರೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದು ಜನಮುಖಿ ಲೇಖಕಿ ಡಾ.ಮೀನಾಕ್ಷಿ ಬಾಳಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಸಮಾರಂಭದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ಬಾಲ್ಯದಿಂದಲೇ ತತ್ವ್ವಪದಕಾರರ, ಶರಣ ಸಂಸ್ಕೃತಿ ಗಾಢ ಪ್ರಭಾವ ಬೀರಿತು ಎಂದು ಹೇಳಿದರು.
ಶಾಲಾ ವ್ಯಾಸಂಗ ಸಮಯದಲ್ಲಿಯೇ ಭಾಷಣ ಮಾಡಲು ಪ್ರಾರಂಭಿಸಿದೆ. ಭಜನೆ, ಮಠಗಳಲ್ಲಿ ಹಿತವಚನಗಳನ್ನು ಕೇಳುತ್ತಾ ಹಲವು ಬಗೆಯಲ್ಲಿ ಚಿಂತನೆ ಮಾಡುವುದನ್ನು ಪ್ರಯತ್ನಿಸಿದೆ.
ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳು, ಬೈನೂರು ಕೃಷ್ಣನವರ ಪದಗಳು, ನಿಂಬರಗಿ ಮಹಾರಾಜರು ಹೀಗೆ ತತ್ವಪದಕಾರರ ಹಾಡುಗಳನ್ನು ಪುಸ್ತಕ ರೂಪದಲ್ಲಿ ತರಬೇಕೆಂಬ ಹಲವು ವರ್ಷಗಳು ಪ್ರಯತ್ನಿಸಿದೆ. ನಂತರ ಕೆಲವರ ಸಹಕಾರದಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಲು ಮುಂದಾದೆವು ಎಂದರು.
ಹುಟ್ಟಿದ್ದು ವಿಜಯಪುರ ಜಿಲ್ಲೆ ಸಿಂದಗಿಯಾದರೂ, ನೆಲೆ ನಿಂತು ಬದುಕು ರೂಪಿಸಿಕೊಂಡಿದ್ದು ಬಿಸಿಲೂರು ಕಲಬುರಗಿಯಲ್ಲಿ. ಹೆಣ್ಣಾಗಿ ನಾನು ಹಲವು ಸಂಕೋಲೆಗಳ ನಡುವೆಯೇ ಶಿಕ್ಷಣ ಹಠದಿಂದ ಪಡೆದೆ.
ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಲೇ ಬಂದಿದೆ. ಇದುವರೆಗೂ ಈ ಭಾಗದ ಜಿಲ್ಲೆಗಳಲ್ಲಿ ಯಾವುದೇ ಸರಕಾರಗಳು ವಲಸೆ ತಡೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇಂದಿಗೂ ನನ್ನಲ್ಲಿದೆ ಎಂದು ಮೀನಾಕ್ಷಿ ಬಾಳಿ ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಭಾಗವಹಿಸಿದ್ದರು.