ಹುಬ್ಬಳ್ಳಿ
‘ಸಾಕಷ್ಟು ದೇವಾಲಯ, ಚರ್ಚು, ಮಸೀದಿಗಳಿದ್ದರೂ ಯಾರ ಮನಸ್ಸಿಗೂ ನೆಮ್ಮದಿ ಸಿಗುತ್ತಿಲ್ಲ. ದಾರ್ಶನಿಕರ ಮಾತುಗಳು ಊಟದಲ್ಲಿ ಸಿಗುವ ಕರಿಬೇವಿನ ಎಲೆಗಳಂತಾಗಿವೆ, ಅದು ಸಲ್ಲದು. ದಾರ್ಶನಿಕರ ನುಡಿಗಳು ನಮಗೆಲ್ಲ ಅನ್ನವಾಗಬೇಕು’ ಎಂದು ಬೈಲೂರು-ಮುಂಡರಗಿ ತೋಂಟದಾರ್ಯ ಮಠದ ಪೂಜ್ಯ ನಿಜಗುಣಪ್ರಭು ಮಹಾಸ್ವಾಮಿಗಳು ಹೇಳಿದರು.
ಭಾನುವಾರ ಸಂಜೆ ಇಲ್ಲಿನ ಉಣಕಲ್ಲ ಹೊಸಮಠದ ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿರುವ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಅನುಭಾವ ನೀಡಿದರು.
ಸಮಯದ ಕಲ್ಪನೆ ನಮಗೆ ಅಷ್ಟೊಂದಿಲ್ಲ. ಆದರೆ, ಸಮಯವೇ ದೇವರಾಗಬೇಕು. ಅಂದಾಗ ಮಾತ್ರ ಮಾಡುವ ಪೂಜೆ, ಪುನಸ್ಕಾರ, ಪಾದಯಾತ್ರೆಗಳು ದೇವರಿಗೆ ಸಲ್ಲುತ್ತವೆ. ನಾವು ಕೂಡಿಟ್ಟ ಸಂಪತ್ತಿಗೂ ಸಮಯವೇ ಕಾರಣ. ಸಮಯಕ್ಕೆ ಸರಿಯಾಗಿ ಮಾಡಿದ ಪ್ರಯತ್ನಕ್ಕೆ ದೇವರು ಕೊಟ್ಟ ಫಲವದು. ಹಾಗಾಗಿ ಸಮಯವೇ ಶಕ್ತಿ ಮತ್ತು ಸಾವು ಎಂದರು.

ಹೊಟ್ಟೆಪಾಡಿನ ಶಿಕ್ಷಣ ನಮ್ಮಲ್ಲಿದೆ, ಆದರೆ ಅಂತರಂಗದಲ್ಲಿ ಅರಿವು ಮೂಡಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಸಹ ನಿಜಗುಣಪ್ರಭು ಶ್ರೀ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು ಮಾತನಾಡಿ, ಜೀವನ ಪಾವನವಾಗಬೇಕಾದರೆ, ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು. ಗುರುವಿನ ಮಕ್ಕಳಾಗದವರಿಗೆ ಮೋಕ್ಷ ಇಲ್ಲ ಎಂದರು.
ಶ್ರೀ ಸದ್ಗುರು ಸಿದ್ಧೇಶ್ವರ ಸ್ವಾಮಿಗಳು ಹೊಸಮಠ ಅಧ್ಯಕ್ಷ ಹಾಗೂ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ದೇಶಕಿ ದಯಾಶೀಲ್ ಮಾತನಾಡಿದರು. ಚೇತನ ಬಿಜಿನೆಸ್ ಸ್ಕೂಲ್‌ನ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಠದ ಅಭಿವೃದ್ಧಿಗೆ ಕೊಟ್ಟ ₹5 ಲಕ್ಷ ರೂ. ಚೆಕ್ ಅನ್ನು ದಯಾಶೀಲ್ ಅವರು ರಾಜಣ್ಣ ಕೊರವಿ ಅವರಿಗೆ ಹಸ್ತಾಂತರಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ದೇಶಕ ಪ್ರದೀಪ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯ ಮಾರುತಿ ಶೆಟ್ಟಿ, ಪ್ರಮುಖರಾದ ಸಿ.ಬಿ. ಮರಿಗೌಡರು, ರಾಮಣ್ಣ ಪದ್ಮಣ್ಣವರ, ಗುರುಸಿದ್ದಪ್ಪ ಬೆಂಗೇರಿ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಮೆಣಸಿನಕಾಯಿ, ಎಸ್.ಐ. ನೇಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.