ಪಂಚಾಚಾರಗಳ ಪಾಲನೆಯಿಂದಲೇ ಲಿಂಗಾಯತ ಧರ್ಮದ ಉದ್ಧಾರ

ಸಾಣೇಹಳ್ಳಿ :

“ಮನುಷ್ಯನು ಕೇವಲ ಭೌತಿಕವಾಗಿ ಬದುಕುವುದಕ್ಕಿಂತ ಮೌಲ್ಯಯುತವಾಗಿ ಬದುಕಿದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ಲಭಿಸುತ್ತದೆ. ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳನ್ನು ಸನ್ಮಾರ್ಗದತ್ತ ತಿರುಗಿಸಿ ‘ಲಿಂಗೇಂದ್ರಿಯ’ಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು,” ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದೇವರು ಕೇವಲ ಗುಡಿ-ಗುಂಡಾರಗಳ ನಾಲ್ಕು ಗೋಡೆಗಳ ಮಧ್ಯೆ ಇಲ್ಲ. ಆತ ಹರಿಯುವ ನೀರು, ಬೀಸುವ ಗಾಳಿ ಹಾಗೂ ಮನುಷ್ಯನ ಅಂತರಾತ್ಮದಲ್ಲಿದ್ದಾನೆ. “ತನ್ನ ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಕೆಯಿಲ್ಲ” ಎಂಬಂತೆ ಸಂಸ್ಕಾರವಂತ ಮಾನವನೇ ಸಾಕ್ಷಾತ್ ದೇವರಾಗುತ್ತಾನೆ. ಅಹಂಕಾರ ಬಿಟ್ಟು ವಿನಯ ಮೈಗೂಡಿಸಿಕೊಂಡರೆ ‘ಸದುವಿನಯವೇ ಸದಾಶಿವನನ್ನು ಒಲಿಸುವ ದಾರಿ’ ಎಂಬುದು ಸತ್ಯವಾಗುತ್ತದೆ ಎಂದರು.

ಮನುಷ್ಯನು ಕೇವಲ ಭೌತಿಕವಾಗಿ ಬದುಕುವುದಕ್ಕಿಂತ ಮೌಲ್ಯಯುತವಾಗಿ ಬದುಕಿದಾಗ ಮಾತ್ರ ಆತನ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ. ಬಸವಣ್ಣನವರ ವಚನಗಳ ಸಾರವು ಮೌಲ್ಯಯುತ ಜೀವನಕ್ಕೆ ಸಹಕಾರಿಯಾಗಿ ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ.

ಮನುಷ್ಯನಿಗೂ ಮತ್ತು ಜಗತ್ತಿನ ಇತರ ಜೀವಿಗಳಿಗೂ ವ್ಯತ್ಯಾಸವಿದೆ. “ಶಿವಚಿಂತೆ, ಶಿವಜ್ಞಾನವಿಲ್ಲದ ಮನುಜರು ಸಗಣಿಯ ಹುಳುಗಳಿಗೆ ಸಮಾನ. ಮನುಷ್ಯನು ವಿಚಾರವಂತ, ನೀತಿವಂತ ಮತ್ತು ಪ್ರಾಮಾಣಿಕನಾಗದಿದ್ದರೆ ಆತನ ಜನ್ಮ ನಿರರ್ಥಕ.

ಶಿವ ಎಂದರೆ ಕೇವಲ ಪೌರಾಣಿಕ ದೇವರಲ್ಲ; ಅದು ಒಳಿತು, ಮಂಗಳ ಮತ್ತು ಅಭ್ಯುದಯದ ಸಂಕೇತ. ಇತರರ ಏಳಿಗೆಯನ್ನು ಬಯಸುವುದೇ ನಿಜವಾದ ಶಿವಚಿಂತೆ.

ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ, ಇಲ್ಲಸಲ್ಲದ ಆಪಾದನೆಗಳ ಮಾಡುವ, ಅಸಾಧ್ಯ ಎಂಬ  ನಕಾರಾತ್ಮಕ ಭಾವನೆಗಳನ್ನು ಬಿಟ್ಟು, ಪರರ ಬಗ್ಗೆ ಗೌರವದಿಂದ ಮಾತನಾಡುವ ಮತ್ತು ಸಮಾಜಕ್ಕೆ ಪೂರಕವಾಗಿ ಬದುಕುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು.

ದೇವರು ಕೇವಲ ಗುಡಿ, ಮಠ, ಚರ್ಚ್‌ಗಳ ನಾಲ್ಕು ಗೋಡೆಗಳ ಮಧ್ಯೆ ಇಲ್ಲ. ಆತ ಹರಿಯುವ ನೀರು, ಬೀಸುವ ಗಾಳಿ ಹಾಗೂ ಪ್ರತಿಯೊಬ್ಬ ಮನುಷ್ಯನ ಅಂತರಾತ್ಮದಲ್ಲಿದ್ದಾನೆ. “ತನ್ನ ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಕೆಯಿಲ್ಲ” ಎಂಬಂತೆ, ಸಂಸ್ಕಾರವಂತ ಮಾನವನೇ ಸಾಕ್ಷಾತ್ ದೇವರಾಗುವನು.

ಸಮಾಜ ದಾರಿ ತಪ್ಪಿದಾಗ ತಿದ್ದಿ ನಡೆಸುವ ಗುರುವಾಗಿ ತಂದೆ-ತಾಯಿಯಾಗಿ ಬಸವಣ್ಣನವರು ಇಡೀ ಜಗತ್ತಿಗೆ ಬೆಳಕಾಗಿದ್ದಾರೆ.

ಮನುಷ್ಯ ತನಗಾಗಿ, ತನ್ನ ಮನೆಗಾಗಿ ಹಾಗೂ ಈ ನಾಡಿಗಾಗಿ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದಾಗ ಮಾತ್ರ ಆತನ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ.

ಹೊರಗಿನ ದೇವರಿಗಿಂತ ನಮ್ಮೊಳಗಿನ ದೇವನನ್ನು ಕಾಣುವುದೇ ನಿಜವಾದ ಭಕ್ತಿ,” ನಮಗೆಲ್ಲರಿಗೂ ದೇವರನ್ನು ಹೊರಗಡೆ ಹುಡುಕುವ ಅಭ್ಯಾಸವಿದೆ. ಆದರೆ ಬಸವಣ್ಣನವರು ‘ನಿನ್ನ ಒಳಗಡೆಯೇ ದೇವನಿದ್ದಾನೆ’ ಎಂಬ ಸತ್ಯವನ್ನು ಇಷ್ಟಲಿಂಗದ ಮೂಲಕ ಜಗತ್ತಿಗೆ ಸಾರಿದರು.  “ಬಸವಣ್ಣ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಜಗತ್ತಿಗೆ ಬೆಳಕನ್ನು ತೋರಿದ ಪೂರ್ವಾಚಾರ್ಯರು.

ದೇವರು ಎಲ್ಲೋ ಹೊರಗಿದ್ದಾನೆ ಎಂದು ಹುಡುಕುವ ಬದಲು, ನಮ್ಮೊಳಗೆ ಇರುವ ದೈವತ್ವವನ್ನು ಗುರುತಿಸುವುದೇ ನಿಜವಾದ ಜ್ಞಾನ. ಲಿಂಗದ ಪರಿಚಯ ಮಾಡಿಕೊಡುವುದು ಕೇವಲ ಆಚರಣೆಯಲ್ಲ, ಅದು ಅರಿವಿನ ದೀಕ್ಷೆ. ಜಗತ್ತು ಮತ್ತು ಮನುಷ್ಯನ ಸಂಕೇತವಾಗಿ ಇಷ್ಟಲಿಂಗವು ಗೋಲಾಕಾರದಲ್ಲಿದ್ದು, ಅದನ್ನು ಧರಿಸುವುದು ಅಧ್ಯಾತ್ಮದ ಮೊದಲ ಹೆಜ್ಜೆ. ದೀಕ್ಷೆಯ ಮೂಲಕ ಮನುಷ್ಯನು ತನ್ನಲ್ಲಿ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಲಿಂಗಗಳೆಂಬ ಮೂರು‌ ರೀತಿಯ ಲಿಂಗಗಳನ್ನು ಆವಿರ್ಭವಿಸಿಕೊಳ್ಳಬೇಕು.

ತಾಯಿಯ ಗರ್ಭದಲ್ಲಿರುವ ಶಿಶುವನ್ನು ಹೇಗೆ ಹೆರಿಗೆಯ ನಂತರವಷ್ಟೇ ಮುದ್ದಾಡಲು ಸಾಧ್ಯವೋ, ಹಾಗೆಯೇ ನಮ್ಮೊಳಗಿರುವ ಶಿವ ಚೈತನ್ಯವನ್ನು ಪೂಜಿಸಲು ಗುರು ಅದನ್ನು ‘ಇಷ್ಟಲಿಂಗ’ದ ರೂಪದಲ್ಲಿ ನಮ್ಮ ಕೈಗೆ ಕೊಡುವರು.

ದೇಹ ಮತ್ತು ಬಾಯಿ ಶುಚಿಯಾಗಿದ್ದರೆ ಮಾತ್ರ ಸಮಾಜದಲ್ಲಿ ಗೌರವ ಸಿಗಲು ಸಾಧ್ಯ. ದೈಹಿಕ ಶುದ್ಧಿಯ ಜೊತೆಗೆ ಆಂತರಿಕ ಶುದ್ಧಿಯೂ ಅಷ್ಟೇ ಮುಖ್ಯ. ಇದಕ್ಕಾಗಿ ‘ಓಂ ಶ್ರೀ ಗುರು ಬಸವಲಿಂಗಾಯ ನಮಃ’ ಎಂಬ ಮಂತ್ರ ಪಠಣ ಮತ್ತು ಶರಣರ ವಚನಗಳು ಮನಸ್ಸನ್ನು ಶುದ್ಧೀಕರಿಸುವ ಸಾಧನಗಳಾಗಿವೆ.

ಮಾನವನ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳು ಮನುಷ್ಯನನ್ನು ಸನ್ಮಾರ್ಗಕ್ಕೂ ಒಯ್ಯಬಹುದು ಅಥವಾ ದುರ್ಮಾರ್ಗಕ್ಕೂ ತಳ್ಳಬಹುದು. ಈ ಪಂಚೇಂದ್ರಿಯಗಳನ್ನು  ‘ಲಿಂಗೇಂದ್ರಿಯ’ಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು.

ಕಣ್ಣುಗಳು ಶಿವನನ್ನು ನೋಡಲಿ. ನಾಲಿಗೆ ಶಿವನ ಗುಣಗಾನ ಮಾಡಲಿ.

ನಮ್ಮ ಕೆಲಸಗಳು ಶಿವಮಯವಾಗಲಿ. ಆಗ ಮಾತ್ರ ಮನುಷ್ಯ ತಪ್ಪು ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂದರು.

ಮನುಷ್ಯನು ದೈವತ್ವವನ್ನು ಏರಲು ಭಕ್ತಿ, ಜ್ಞಾನ ಮತ್ತು ಕ್ರಿಯಾ ದೀಕ್ಷೆಗಳು ಅನಿವಾರ್ಯ. ಈ ಮೂರು ದೀಕ್ಷೆಗಳ ಸಮಾಗಮದಿಂದ ಮಾತ್ರ ಪರಿಪೂರ್ಣ ಮನುಷ್ಯನಾಗಲು ಸಾಧ್ಯ.

ವಿಭೂತಿಯು ಅರಿವು ಮತ್ತು ಜ್ಞಾನದ ಸಂಕೇತವಾಗಿದೆ. ಹಣೆಯಲ್ಲಿ ಧರಿಸುವ ಮೂರು ಪಟ್ಟಿಗಳು ಭಕ್ತಿ, ಜ್ಞಾನ ಮತ್ತು ಕ್ರಿಯೆಯನ್ನು ಪ್ರತಿನಿಧಿಸುತ್ತವೆ. ಪೂಜೆಯ ಸಮಯದಲ್ಲಿ ಮನಸ್ಸು ಅತ್ತಿತ್ತ ಹರಿಯದಂತೆ ಏಕಾಗ್ರತೆ ವಹಿಸುವುದು ಮುಖ್ಯ. ಒಮ್ಮೆ ದೀಕ್ಷೆ ಪಡೆದ ಮೇಲೆ ಹೊರಗಿನ ಗುಡಿ-ಗುಂಡಾರಗಳ ಅಥವಾ ಪುರೋಹಿತರ ಅಗತ್ಯವಿಲ್ಲ. ಮನೆಯಲ್ಲೇ ಬಸವಣ್ಣನವರ ಭಾವಚಿತ್ರವಿಟ್ಟು, ವಚನಗಳನ್ನು ಹಾಡಿ ಸರಳವಾಗಿ ಶುಭಕಾರ್ಯಗಳನ್ನು ನೆರವೇರಿಸಬೇಕು.

ಲಿಂಗಾಯತ ಧರ್ಮದ ಮೂಲ ತತ್ವಗಳಾದ ಅಷ್ಟಾವರಣಗಳು (ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ) ನಮಗೆ ರಕ್ಷಣಾ ಕವಚಗಳಿದ್ದಂತೆ. ಇವುಗಳ ಜೊತೆಗೆ ಪಂಚಾಚಾರಗಳನ್ನು ಪಾಲಿಸುತ್ತಾ ಷಟ್‌ಸ್ಥಲ ಮಾರ್ಗದಲ್ಲಿ ಸಾಗಿದಾಗ ಮಾತ್ರ ಲಿಂಗಾಂಗ ಸಾಮರಸ್ಯ ಲಭ್ಯವಾಗುವುದು.

“ನಮ್ಮ ಭಾವನೆಗಳೇ ನಮಗೆ ವರ ಅಥವಾ ಶಾಪ. ಸದ್ಭಾವನೆಗಳಿದ್ದರೆ ಅದು ವರವಾಗುತ್ತದೆ. ದುರ್ಭಾವನೆಗಳಿದ್ದರೆ ಅದೇ ಶಾಪವಾಗುತ್ತದೆ. ಆಡಂಬರದ ಪೂಜೆಗಿಂತ ಅಂತರಂಗದ ಅರಿವು ಮುಖ್ಯ.”

ಲಿಂಗಾಯತ ಎಂಬುದು ಕೇವಲ ಒಂದು ಜಾತಿಯಲ್ಲ, ಅದೊಂದು ಶ್ರೇಷ್ಠ ಧರ್ಮ. ಪಂಚಾಚಾರಗಳನ್ನು ಮತ್ತು ಷಟ್ಸ್ಥಲಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಒಬ್ಬ ವ್ಯಕ್ತಿ ನಿಜವಾದ ಲಿಂಗಾಯತನಾಗಲು ಸಾಧ್ಯ.

ಇಷ್ಟಲಿಂಗವನ್ನೇ ಸರ್ವಸ್ವವೆಂದು ಭಾವಿಸಿ, ಅನ್ಯ ದೈವಗಳನ್ನು ಪೂಜಿಸದೆ ಲಿಂಗನಿಷ್ಠೆಯನ್ನು ಕಾಪಾಡಿಕೊಳ್ಳುವುದು. ಜಾತಿ ಭೇದವನ್ನು ಮರೆತು, ಲಿಂಗವಂತರಾದವರೆಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.  ನಾವೆಲ್ಲರೂ ಒಂದೇ ಎಂಬ ಜಾತಿತೀತ ಮನೋಭಾವವೇ ಶಿವಾಚಾರವೆಂದು‌ ಅರಿತುಕೊಳ್ಳಬೇಕು. ಕಾಯಕವೇ ಕೈಲಾಸ ಎಂಬ ತತ್ವದಡಿ ಸೋಮಾರಿಯಾಗದೆ, ಯಾವುದೇ ಕಾಯಮವನ್ನು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಸಂತೋಷದಿಂದ ಮಾಡಬೇಕು. ತಪ್ಪು ಮಾಡಿದವರಿಗೆ ಬುದ್ಧಿ ಹೇಳಿ ಸನ್ಮಾರ್ಗದಲ್ಲಿ ನಡೆದುಕೊಳ್ಳಬೇಕು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಅಹಂಕಾರ ಪಡದೆ, ವಿನಯವಂತರಾಗಿ ಬದುಕಿ ‘ಸದುವಿನಯವೇ ಸದಾಶಿವನನ್ನು ಒಲಿಸುವ ದಾರಿ’ ಎಂಬ ಮನೋಭಾವ ಬೆಳೆಸಿಕೊಂಡಾಗ ಮಾನವ ದೇವತ್ವಕ್ಕೇರಲು ಸಾಧ್ಯ.

ಮನುಷ್ಯನು ಭಕ್ತ ಹಂತದಿಂದ ಐಕ್ಯ ಸ್ಥಿತಿಯವರೆಗೆ ಏರಲು ಷಟ್ಸ್ಥಲಗಳ ಮಾರ್ಗ ಅತ್ಯಗತ್ಯ. ಶರಣರ ವಚನಗಳು ನಮ್ಮ ಬದುಕಿಗೆ ಬೆಳಕನ್ನು ನೀಡುತ್ತವೆ. ಪ್ರತಿನಿತ್ಯ ಪೂಜೆಯ ಸಂದರ್ಭದಲ್ಲಿ ವಚನಗಳನ್ನು ಓದಿ ಅರ್ಥೈಸಿಕೊಳ್ಳುವ ಮೂಲಕ ವ್ಯಕ್ತಿತ್ವ ಅರಳಿಸಿಕೊಳ್ಳಬೇಕು.

ಅಹಂಕಾರವನ್ನು ಬಿಟ್ಟು, ವಿನಯವನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಚಿಂತನೆಗೆ ಅವಕಾಶ ಇರಬೇಕು ಎಂದರು.

ಸಂಗೀತ ಶಿಕ್ಷಕ ನಾಗರಾಜ ದೀಕ್ಷಾರ್ಥಿಗಳಿಗೆ ವಚನಗೀತೆಗಳನ್ನು ಹೇಳಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *