ಬಾಗಲಕೋಟೆ
‘ಪಂಚಮಸಾಲಿಗಳು ಬಹಳ ದೊಡ್ಡ ಸಮಾಜವಾದ್ದರಿಂದ ಐದು ಪೀಠಗಳ ಅವಶ್ಯವಿದೆ. ಬೀದರಿನಿಂದ ಗುಂಡ್ಲುಪೇಟೆಯವರೆಗೆ ಭಕ್ತಾದಿಗಳಿಗೆ ಸಮೀಪದಲ್ಲಿಯೇ ಗುರುಗಳ ದರ್ಶನವಾಗಬೇಕು. 2008ರಲ್ಲೇ ಐದು ಪೀಠಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ನಾಲ್ಕು ಪುರುಷ ಪೀಠ, ಒಂದು ಮಹಿಳಾ ಪೀಠ ಮಾಡಬೇಕು,’ ಎಂದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಬಾಗಲಕೋಟೆಯಲ್ಲಿ ಶನಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯ ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪೀಠಕ್ಕೆ ಮತ್ತೊಬ್ಬರನ್ನು ಕೂಡಿಸುವ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವಲ್ವ ಭಿನ್ನಾಭಿಪ್ರಾಯ ಬಂದಿದ್ದರಿಂದ ಸಮಸ್ಯೆಯಾಗಿದೆ. ನಮ್ಮ ಹಿರಿಯರು ಕುಳಿತು ಸಮಸ್ಯೆ ಬಗೆಹರಿಸುತ್ತಾರೆ’ ಎಂದರು.
ಅವರು, ‘ಸಮಾಜಕ್ಕೆ ಹಿರಿಯರಾದ ಎಸ್.ಅರ್. ಕಾಶಪ್ಪನವರ ಅವರಿಂದ ಹಿಡಿದು ಬಹಳಷ್ಟು ಹಿರಿಯರು ದುಡಿದಿದ್ದಾರೆ’ ಎಂದರು.
‘ಮನಸ್ಸಿಗೆ ಹಚ್ಚಿಕೊಳ್ಳದಂತೆ ಶ್ರೀಗಳಿಗೆ ಹೇಳಿದ್ದೇವೆ. ಸೂರ್ಯ, ಚಂದ್ರರಿಗೆ ಗ್ರಹಣ ಹಿಡಿಯುತ್ತದೆ. ಅದು ಶಾಶ್ವತ ಅಲ್ಲ. ಶ್ರೀರಾಮನೇ ಹದಿನಾಲ್ಕು ವರ್ಷ ವನವಾಸ ಮಾಡಿದ್ದರು. ಯಾವುದೂ ಶಾಶ್ವತವಲ್ಲ. ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿಸಿದ್ದೇವೆ’ ಎಂದು ಹೇಳಿದರು.