ಬಸವತತ್ವಕ್ಕೆ ದ್ರೋಹ: ಪಂಚಪೀಠಗಳ ಹೇಳಿಕೆಗೆ ಒಕ್ಕೂಟದ ಖಂಡನೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಬಸವಸಂಸ್ಕೃತಿ ಜಾಗೃತಿಯ ಭಯದಿಂದ ಪಂಚಪೀಠಗಳ ಒಗ್ಗಟ್ಟು’

ಭಾಲ್ಕಿ

(ದಾವಣಗೆರೆಯಲ್ಲಿ ನಡೆದ ಪಂಚಾಚಾರ್ಯರ ಸಮ್ಮೇಳನಕ್ಕೆ ಲಿಂಗಾಯತ ಮಠಾಧೀಶರ ಒಕ್ಕೊಟದಿಂದ ಬಂದಿರುವ ಪ್ರತಿಕ್ರಿಯೆ.)

ದಾವಣಗೆರೆಯಲ್ಲಿ ೨೧ ಮತ್ತು ೨೨ ಜುಲೈ ೨೦೨೫ ರಂದು ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಕುರಿತು ದಿನಪತ್ರಿಕೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಅನೇಕ ವರದಿಗಳು ಪ್ರಚಾರವಾಗಿವೆ. ಅದರಲ್ಲಿ ಪಂಚಪೀಠದ ಆಚಾರ್ಯರ ಹಾಗೂ ಕೆಲವು ರಾಜಕೀಯ ಗಣ್ಯರ ಹೇಳಿಕೆಗಳು ಖಂಡನೀಯವಾಗಿವೆ.

೧) ವೀರಶೈವ ಲಿಂಗಾಯತ ಎರಡೂ ಒಂದೆ.
೨) ಸನಾತನ ಹಿಂದು ವೀರಶೈವ ಲಿಂಗಾಯತ ಧರ್ಮ.
೩) ಕೂಡಲಸಂಗಮದಲ್ಲಿ ಪಂಚಾಚಾರ್ಯರ ಅಡ್ಡಪಲ್ಲಕಿ

ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ನಂತರ ಬಸವತತ್ವ ವಿರೋಧಿ ಶಕ್ತಿಗಳು ಒಗ್ಗಟ್ಟಾಗಿ ಆಂತರಿಕ ಮತ್ತು ಬಹಿರಂಗವಾಗಿ ಅನೇಕ ಕುತಂತ್ರಗಳು ಹೆಣೆಯುವ ಶತಪ್ರಯತ್ನಗಳು ಮಾಡುತ್ತಿವೆ. ಬಸವಣ್ಣನವರ ಹೆಸರು ಹೇಳುತ್ತಲೇ ತಮ್ಮ ಗುಪ್ತ ಅಜೆಂಡಾಗಳು ಜಾರಿಗೆಗೊಳಿಸುವ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿವೆ. ಅದರ ಒಂದು ಭಾಗವೇ ದಾವಣಗೆರೆಯಲ್ಲಿ ನಡೆದ ವೀರಶೈವ ಪಂಚಾಚಾರ್ಯರ ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನವಾಗಿದೆ.

ಎರಡೂ ಒಂದೇಯಾದರೆ ಪ್ರತ್ಯೇಕ ಧರ್ಮಕ್ಕೆ ಪಂಚಪೀಠಗಳ ವಿರೋಧ ಏಕೆ?
ಶೃಂಗ ಸಮ್ಮೇಳನದ ಸಾನಿಧ್ಯ ವಹಿಸಿದ ರಂಭಾಪುರಿಯ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ‘ಬಸವಣ್ಣನವರ ಹೆಸರಿನಲ್ಲಿ ಕೆಲವರಿಂದ ಕಂದಕ ಸೃಷ್ಟಿಸಲಾಗುತ್ತಿದೆ’ ಎಂಬ ಮಾತು ಹೇಳಿದರು. ಜೊತೆಗೆ ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಎಂಬ ಹಳೆ ಚಾಳಿಯನ್ನು ಮತ್ತೆ ಮತ್ತೆ ಪುನರ್ ಉಚ್ಛರಿಸಿದ್ದಾರೆ.

ಜೊತೆಗೆ ‘ಪೂರ್ವ ಆಚಾರ್ಯರು ಅಸ್ಪೃಶ್ಯರ ಉದ್ದಾರ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಪೂರ್ವ ಆಚಾರ್ಯರ ಇಂತಹ ಕಾರ್ಯಗಳನ್ನು ಮರೆಯಲು ಸಾಧ್ಯವಿಲ್ಲ. ಈ ತತ್ವಗಳಿಗೆ ಮಾರುಹೋಗಿ ೧೨ನೇ ಶತಮಾನದಲ್ಲಿ ಬಸವಾದಿ ಶರಣ-ಶರಣೆಯರು ಈ ಧರ್ಮ ಸ್ವೀಕರಿಸಿದರು’ ಎಂದು ಪೂಜ್ಯರು ಮಾತನಾಡಿದ್ದಾರೆ. ಪೂಜ್ಯರ ಈ ಮಾತುಗಳು ಅನೈತಿಹಾಸಿಕವಾಗಿವೆ. ಇವುಗಳಿಗೆ ಯಾವುದೇ ಆಧಾರಗಳು ಇಲ್ಲ.

ಬಸವಾದಿ ಶರಣರು ಬಸವಪೂರ್ವದ ಯಾವುದೆ ಧರ್ಮ ಸ್ವೀಕರಿಸದೇ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂಬುದು ಐತಿಹಾಸಿಕ ಸತ್ಯವಾಗಿದೆ. ಇದಕ್ಕೆ ಬಸವಾದಿ ಶರಣರಿಂದ ಇತ್ತೀಚಿನ ಅನೇಕ ಸಂಶೋಧನೆಗಳು ಸಾಕ್ಷಿ ಆಧಾರಗಳು ನೀಡುತ್ತವೆ. ಆದರೂ ಅವರು ಸುಳ್ಳನ್ನೆ ಮತ್ತೆ ಮತ್ತೆ ಹೇಳುವ ಮೂಲಕ ಅದಕ್ಕೆ ಸತ್ಯದ ಲೇಪನ ಕೊಡುವ ಸಾವಿರ ಪ್ರಯತ್ನಗಳು ಮಾಡುತ್ತಿದ್ದಾರೆ.

೧೨ನೇ ಶತಮಾನಕ್ಕಿಂತ ಪೂರ್ವದಲ್ಲಿ ಯಾವ ಆಚಾರ್ಯರು ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಶ್ಯರ ಉದ್ಧಾರ ಮಾಡಿದ್ದಾರೆಂದು ಶ್ರೀಗಳು ಸಿದ್ಧಪಡಿಸಬೇಕು. ಪಂಚಪೀಠಗಳು ತಮ್ಮ ಪ್ರಾಚೀನತೆ, ಶ್ರೇಷ್ಠತೆ ಎಷ್ಟು ಹೇಳಿಕೊಂಡರು ಅವರಿಗೆ ಸ್ವತಂತ್ರವಾದ ಇತಿಹಾಸ, ಸಿದ್ಧಾಂತ ಮತ್ತು ಸಾಮಾಜಿಕ ಬದ್ಧತೆ ಇಲ್ಲವೆಂಬುದು ಬೇರೆ ಹೇಳಬೇಕಾಗಿಲ್ಲ. ಅವರು ಇಲ್ಲಿಯವರೆಗೆ ಬಸವಾದಿ ಶರಣರ ತತ್ವಗಳನ್ನೆ ಹೈಜಾಕ್ ಮಾಡಿಕೊಂಡು ಕಪೋಲಕಲ್ಪಿತ ಆಚಾರ್ಯರ ಹೆಸರಿನಲ್ಲಿ ಹೇಳುವುದು ರೂಢಿ ಮಾಡಿಕೊಂಡಿದ್ದಾರೆ. ಬಸವಣ್ಣನವರ ಕುರಿತು ಮಾತನಾಡುವ ಪಂಚಪೀಠಗಳು ಬಸವಣ್ಣನವರಿಗೆ ಗುರು ಎಂದು ಎಂದಿಗೂ ಒಪ್ಪಿಕೊಂಡಿಲ್ಲ. ಅವರಿಗೆ ಬಸವತತ್ವಗಳಲ್ಲಿ ನಂಬಿಕೆ ಇಲ್ಲ. ಅವರ ನಡೆ-ನುಡಿ ಬಸವತತ್ವಕ್ಕೆ ವಿರುದ್ಧವಾಗಿಯೇ ಇರುತ್ತದೆ. ಆದರೆ ಬಸವಣ್ಣನ ಹೆಸರು ಚಾಲ್ತಿ ನಾಣ್ಯ ಇರುವ ಕಾರಣ ಅದನ್ನೆ ಬಳಸಿಕೊಂಡು ಬಸವತತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ.

ವೀರಶೈವ ಲಿಂಗಾಯತ ಎರಡು ಒಂದೇ ಎಂದು ಜಪ ಮಾಡುತ್ತಿರುವ ಪಂಚಪೀಠಗಳು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಏಕೆ ವಿರೋಧ ಮಾಡಿದವು? ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಏಕೆ ತಪ್ಪಿಸಿದರು? ಕೇದಾರದ ಶ್ರೀಗಳು ಪ್ರಧಾನಮಂತ್ರಿಗಳಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಕೊಡಬಾರದೆಂದು ಏಕೆ ಫೋನ್ ಮಾಡಿ ತಿಳಿಸಿದರು? ಶೃಂಗ ಸಮ್ಮೇಳನದ ಆಮಂತ್ರಣ ಪತ್ರಿಕೆ, ವೇದಿಕೆಯಲ್ಲಿ ವಿಶ್ವಗುರು ಬಸವಣ್ಣನವರ ಫೋಟೊ ಏಕೆ ಇಲ್ಲ? ಜೊತೆಗೆ ಲಿಂಗಾಯತ ಶಬ್ದ ಏಕೆ ಕೈಬಿಡಲಾಗಿದೆ? ಮುಂತಾದ ಪ್ರಶ್ನೆಗಳಿಗೆ ಪಂಚಪೀಠಗಳು ಉತ್ತರಿಸಬಹುದೆ.

ವೀರಶೈವ ಮಹಾಸಭೆಯ ದ್ವಂದ್ವ ನಿಲವು

ಡಿಸೆಂಬರ್ ತಿಂಗಳಲ್ಲಿ ದಾವಣಗೆರೆಯಲ್ಲಿಯೇ ನಡೆದ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆ `ನಾವು ಹಿಂದುಗಳಲ್ಲ’ ಎಂದು ತಮ್ಮ ನಿಲವು ಸ್ಪಷ್ಟಪಡಿಸಿತು. ಈ ನಿರ್ಣಯ ತೆಗೆದುಕೊಂಡಾಗ ಆ ವೇದಿಕೆಯ ಮೇಲೆ ಪಂಚಪೀಠದ ಅನೇಕ ಆಚಾರ್ಯರು ಹಾಗೂ ಶೃಂಗ ಸಮ್ಮೇಳನದಲ್ಲಿ ಭಾಗಿಯಾದ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ಇದೀಗ ಅದೇ ಪಂಚಪೀಠದ ಆಚಾರ್ಯರು ಅದೇ ವೀರಶೈವ ಮಹಾಸಭೆಯ ಅಧ್ಯಕ್ಷರನ್ನು ಪಕ್ಕದಲ್ಲಿಯೇ ಕೂಡಿಸಿಕೊಂಡು ನಾವು `ಸನಾತನ ಹಿಂದು ವೀರಶೈವ ಲಿಂಗಾಯತ’ ಧರ್ಮದವರು ಎಂದು ಹೇಳುತ್ತಿದ್ದಾರೆ. ಅದಕ್ಕೆ ಪಂಚಪೀಠಗಳು ಹಾಗೂ ಮಹಾಸಭೆ ಮೊದಲು ತಮ್ಮ ಒಂದು ನಿಲುವನ್ನು ಸ್ಪಷ್ಟಪಡಿಸಬೇಕು. ವೀರಶೈವ ಲಿಂಗಾಯತ ಎರಡು ಒಂದೇ ಎಂದು ಕೇವಲ ಬಾಯಿ ಮಾತಾಗಿಸಿಕೊಂಡ ಪಂಚಪೀಠಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವೀರಶೈವ ಮಹಾಸಭೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಮಹಾಸಭೆಯ ಪ್ರಜ್ಞಾವಂತರು ಆಲೋಚಿಸಬೇಕಾಗಿದೆ.

ಬಸವಸಂಸ್ಕೃತಿ ಜಾಗೃತಿಯ ಭಯದಿಂದ ಪಂಚಪೀಠಗಳ ಒಗ್ಗಟ್ಟು:

ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಮಾನತೆಯ ಮೌಲ್ಯಗಳನ್ನು ಯುವಕರ ಮನಭಾವದಲ್ಲಿ ಬಿತ್ತುವ ಸದುದ್ದೇಶದಿಂದ ಬಸವಪ್ರಣಿತ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಪ್ಟೆಂಬರ್ ೧ ರಿಂದ ಅಕ್ಟೋಬರ್ ೦೫ ರವರೆಗೆ ರಾಜ್ಯಾದ್ಯಂತ `ಬಸವಸಂಸ್ಕೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.

ಪೂರ್ವಭಾವಿ ಸಿದ್ಧತೆಗಾಗಿ ಧಾರವಾಡದಲ್ಲಿ ಜೂನ ೩೦, ೨೦೨೫ ರಂದು ಬಸವಪ್ರಣೀತ ಲಿಂಗಾಯತ ಮಠಾಧಿಪತಿಗಳ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ೩೦೦ ಕ್ಕಿಂತ ಹೆಚ್ಚಿನ ಮಠಾಧೀಶರು ಭಾಗಿಯಾಗಿ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸುವ ಪ್ರತಿಜ್ಞೆ ಮಾಡಿದರು. ಬಸವಪರಂಪರೆಯ ಮಠಾಧಿಶರ ಒಗ್ಗಟ್ಟಿನಿಂದ ಭಯಭಿತಗೊಂಡ ಪಂಚಪೀಠಗಳು ಶೃಂಗ ಸಮ್ಮೇಳನ ಮಾಡಿದೆ ವಿನಃ ಇದರ ಹಿಂದೆ ಸಮಾಜಹಿತ ಅಥವಾ ಸಮಾಜ ಒಗ್ಗಟ್ಟಿನ ಯಾವ ಉದ್ದೇಶವು ಸ್ಪಷ್ಟ ಕಾಣಬಂದಿಲ್ಲ. ಜನಮನದಲ್ಲಿ ಬಸವಪ್ರಜ್ಞೆ ಬೆಳೆದರೆ ನಮ್ಮ ಪೀಠ ಮತ್ತು ಮಠಗಳು ಮೂಲೆ ಗುಂಪು ಆಗುತ್ತವೆ ಎಂಬ ಭಯ ಪಂಚಪೀಠಗಳಿಗೆ ಕಾಡುತ್ತಿವೆ.

ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ನುಡಿದ ಮೇಲಿನ ಈ ಹೇಳಿಕೆಗಳು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಒಗ್ಗಟ್ಟಿನಿಂದ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
9 Comments
  • ನೀವು ಕೇಳಿದ ಯಾವುದೇ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ .ಅವರು ಬರೀ ಅಧಾರರಹಿತ ವಿಷಯಗಳನ್ನು ಹೇಳುತ್ತಾ ಬಂದಿದ್ದಾರೆ ಅಷ್ಟೆ.ಒಂದುವೇಳೆ ನೀವು ಚರ್ಚಿಗೆ ಕರೆದರೂ ಅವರು ಬರುವುದಿಲ್ಲ.

  • ದಾವಣಗೆರೆ ಶೃಂಗ ಸಭೆಯ ಕುರಿತ ಪೂಜ್ಯರ ಪ್ರತಿಕ್ರಿಯೆ ಸೂಕ್ತವಾಗಿದ್ದು ಸಭೆಯ ನಡಾವಳಿಗಳ ಬಗ್ಗೆ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಇದಕ್ಕೆ ಉತ್ತರಿಸುವರೇ?

    • ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು, ವೀರಶೈವ ವಾದಿಯ ಪಂಚ ಪೀಠ ಪಂಚಾರ್ಯ ರ ದಾವಣಗೆರೆಯ ಕಾರ್ಯಕ್ರಮದಲ್ಲಿ ,ಬಸವಾದಿ ಶರಣರ ತತ್ವ ಸಿದ್ಧಾಂತ ವಚನ ಸಾಹಿತ್ಯದ ಲಿಂಗಾಯತ ಧರ್ಮಕ್ಕೆ ವಿರುದ್ದ ವಾಗಿ , ಹೇಳಿದ ಹೇಳಿಕೆ ಗೆ ,ಖಂಡಿಸಿ ,ಸೂಕ್ತ ಹೇಳಿಕೆ ಕೊಟ್ಟಿದಾರೆ , ಅನಂತ ಧನ್ಯವಾದಗಳೊಂದಿಗೆ ಶರಣು ಶರಣಾರ್ಥಿ. ಭಾಲ್ಕಿಯ ಶ್ರೀಗಳಾದ ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರಿಗೆ

  • ಲಿಂಗಾಯತ ಧರ್ಮಕ್ಕೆ ಇನ್ನೊಂದು ಹೆಸರಿದೆ: ಅದೇ “ಬಸವ ಧರ್ಮ”. ಇಂದಿನ ಈ ಪರಿಸ್ಥಿತಿಗಳಲ್ಲಿ”ಬಸವ ಧರ್ಮ ಅರ್ಥಾತ್ ಲಿಂಗಾಯತ ” ಎಂದೇ ಹೇಳಿ! ಕೂಗಿ ಕೂಗಿ ಅದನ್ನೇ ಹೇಳಿ. ಆಗ ಬಸವಣ್ಣನವರನ್ನು ಒಪ್ಪುವವರು ಒಂದೆಡೆ ಸೇರುತ್ತಾರೆ. ನಮಗೆ ಬಸವಣ್ಣನೇ ಗುರು, ಬಸವಣ್ಣನೇ ದೈವ, ಬಸವಣ್ಣನೇ ನಮ್ಮ ಮಾರ್ಗದರ್ಶಕ ಆಗಿರುವಾಗ ಬೇರೆಯವರು ಬಸವಣ್ಣನವರನ್ನು ಒಪ್ಪಬೇಕೆಂದು ನಾವೇಕೆ ನಿರೀಕ್ಷಿಸಬೇಕು . ಬಸವಣ್ಣ ಕೇವಲ ಯಾವುದಾದರೂ ಒಂದು ಜನಾಂಗಕ್ಕೆ, ಒಂದು ಪ್ರಾಂತ್ಯಕ್ಕೆ ಸೀಮಿತನಾದ ಗುರುವಲ್ಲ: ಬಸವಣ್ಣನೆಂದರೆ ಜಗದ ಬೆಳಕು, ಅವರ ಕೀರುತಿಯೋ ಜಗದಗಲ, ಮುಗಿಲಗಲ, ಮಿಗೆಯಗಲ… ಅವರಿಗೆ ಯಾರ ಹಂಗು? ಆ ಹಂಗು ನಮಗೂ ಇರಬಾರದು. ಅವರು ಸಾಮಾಜಿಕ ಐಕ್ಯತೆಗಾಗಿ ಸರ್ವ ಜನಾಂಗದ ಶಾಂತಿಯ ತೋಟವನ್ನುಕಟ್ಟಿದವರು; ಸಿದ್ದಿ ಪ್ರಸಿದ್ದಿಗಾಗಿ ಅಡ್ಡ ಪಲ್ಲಕ್ಕಿಯಲ್ಲಿ ಮೆರೆದವರಲ್ಲ!

    ಬಸವಣ್ಣ ಯಾರ ಶಿಷ್ಯನೂ ಅಲ್ಲ. ಪಾಶುಪತ, ನಾಥ, ಕಾಶ್ಮೀರ ಶೈವ ಮುಂತಾದ ಶೈವ ಪರಂಪರೆಯ ಭಕ್ತರು ಮತ್ತು ಗುರುಗಳು ಹನ್ನೆರಡನೆಯ ಶತಮಾನದಲ್ಲಿ ಬಸವಧರ್ಮವನ್ನು ಸೇರಿದರು. ನೀವು ಲಿಂಗಾಯತ ಎನ್ನಿ ಅಥವಾ ಬಸವ ಧರ್ಮ ಎನ್ನಿ ಇದು ಕರ್ನಾಟಕದಲ್ಲಿ ಜನಿಸಿದ ವೈಚಾರಿಕ ತಳಹದಿಯ ಧರ್ಮ. ವೇದ, ಉಪನಿಷತ್ತುಗಳನ್ನು ನಂಬುವ, ಹೋಮ ಹವನಗಳನ್ನು ಆಚರಿಸುವ ಮುಗುದೊಂದು ಧರ್ಮವೇ ವೀರಶೈವ. ಹಾಗಾಗಿ ಬಸವ ಧರ್ಮವೇ ಬೇರೆ; ವಿರಶೈವವೇ ಬೇರೆ! — ಜಿ.ಪಿ.

    ಬಸವ ಧರ್ಮವೇ ಬೇರೆ; ಈ ಆಚಾರ್ಯರ ವಿರಶೈವವೇ ಬೇರೆ. ಆಚಾರ್ಯರು ಯಾರೇ ಆಗಿರಲಿ:ಆಚಾರ್ಯರು ಧರ್ಮ ಸ್ಥಾಪಕರಲ್ಲ; ಧರ್ಮ ಪರಿಪಾಲಕರು ! –ಜಿ.ಪಿ. ಮಂಜುನಾಥ

  • ಈ ಹೇಳಿಕೆ ಬಹಳ ಅವಶ್ಯಕತೆ ಇದ್ದು ಅವರಿಂದಾದ ಗೊಂದಲ ಸ್ವಲ್ಪಮಟ್ಟಿಗೆ ಶಮನಕ್ಕೆ ಸಹಕಾರಿ ಆಗುವುದು. ನಾವು ಸಹ ಬಹಳ ಕಠಿಣ ನಿಲುವಿನಿಂದ ಹೋರಾಟಕ್ಕೆ ಸಜ್ಜಾಗ ಬೇಕಿದೆ..
    ” ಅಸಲಿ ಧರ್ಮ ಲಿಂಗಾಯತ ಧರ್ಮ” ಇತಿಹಾಸ ಹಾಗು ದಾಖಲೆ ಮತ್ತು ಮಾನ್ಯತೆ ಇರುವುದು ಬಸವಾದಿ ಶರಣರು ಹುಟ್ಟುಹಾಕಿದ ಲಿಂಗಾಯತ ಧರ್ಮಕ್ಕೆ ಮಾತ್ರ. ಮಿಕ್ಕವರೆಲ್ಲ ಇತ್ತೀಚೆಗೆ ಲಿಂಗಾಯತ ಧರ್ಮದ ಕೆಲವು ಆಚರಣೆಗಳನ್ನು ಹೈಜಾಕ್ ಮಾಡಿ ಸನಾತನ ಹಣೆಬರಹದಲ್ಲಿ ನಿಜಲಿಂಗಾಯತರಿಗೆ ವಂಚಿಸುತ್ತಿದ್ದಾರೆ. ಇದನ್ನು ಗೊನೆಗಣಿಸಲೇ ಬೇಕು.

    • ಪ್ರಸಕ್ತ ಸನ್ನಿವೇಶದಲ್ಲಿ ಇಂತಹ ಖಂಡನೆ ಅತ್ಯವಶ್ಯ.
      ವೀರಶೈವರ ,ಪಂಚಪೀಠಾದಿಶ್ವರರ ಗುಪ್ತ ಅಜಂಡಾ ಗಳ ಬಗೆಗೆ ಲಿಂಗಾಯತರು ಜಾಗ್ರತರಾಗಿರಬೇಕಾಗಿದೆ.

  • ಪೂಜ್ಯ ಡಾ ಬಸವಲಿಂಗ ಪಟ್ಟದೇವರು ಪ್ರಶ್ನಿಸಿರುವ ಪ್ರಶ್ನೆಗಳು ಸರಿಯಾಗಿವೆ, ವೀರಶೈವ ಲಿಂಗಾಯಿತ ಒಂದಾಗಬೇಕೆಂದಾದರೆ ಬೇರೆ ಲಿಂಗಾಯಿತ ಮಠಾದೀಶರನ್ನು ಏಕೆ ಈ ಸಮಾರಂಭಕ್ಕೆ ಕರೆಯಲಿಲ್ಲ? ವೇದಿಕೆಯಲ್ಲಿಯೇ ತಾರತಮ್ಯವೇಕೆ, ಎಲ್ಲಾ ಲಿಂಗಾಯಿತ ಮಠಾದಿಪತಿಗಳು ಸಮಾಜದ ಗಣ್ಯರನ್ನು ವೇದಿಕೆಯಲ್ಲಿ ಪಕ್ಕಕ್ಕೆ ಕುಳ್ಳಿರಿಸಿಕೊಂಡರೆ ಪಂಪಿಗಳು ಎಲ್ಲ ಗಣ್ಯರನ್ನು ಕೆಳಗೆ ಕೂರಿಸುತ್ತಾರೆ ಏಕೆ?ಇಲ್ಲಿಯೇ ತಾರತಮ್ಯ ಮಾಡುವ ಇವರಿಂದ ಸಮಾಜಕ್ಕೆ ಎಲ್ಲಿ ಒಳ್ಳೆಯ ಸಂದೇಶ ಸಿಗುತ್ತದೆ?

  • ಭಾಲ್ಕಿ ಅಪ್ಪಗಳ ವಿಚಾರ ಬಹಳ ಸೂಕ್ತವಾಗಿ ಬಂದಿದೆ. ತಮ್ಮೆಲ್ಲರ ಪ್ರತಿಕ್ರಿಯೆ ಕೂಡ ಮಾನ್ಯವಾಗಿದೆ.
    ತಾರತಮ್ಯ ಮಾತ್ರವಲ್ಲದೆ ವರ್ಗ ಭೇದ, ವರ್ಣ ಭೇದ, ಲಿಂಗ ಭೇದ, ಸೂತಕ ಇತ್ಯಾದಿ, ಮಾಡುವುದರಿಂದ ಒಂದೇ ಆಗಲೂ ಸಾಧ್ಯವಿಲ್ಲ.
    ಧನ್ಯವಾದಗಳು.

  • 12ನೆಯ ಶತಮಾನದಿಂದ ಇಲ್ಲಿಯವರೆಗೆ ಕನ್ನಡದ ಅನೇಕ ಕವಿ ಸಾಹಿತಿಗಳು ಚರಿತ್ರೆ ಕಾವ್ಯಗಳನ್ನು ರಚಿಸಿದ್ದಾರೆ. ಎಲ್ಲಿಯೂ ಪಂಚಾಚಾರ್ಯರನ್ನು ಕುರಿತು ಯಾವಕವಿ ಚರಿತೆಕಾರರು ಏನನ್ನೂ ಉಲ್ಲೇಖಸಿಲ್ಲ. ಎಲ್ಲಿಯೂ ಅವರ ಸುಳಿಯೂ ಇಲ್ಲ. ಈ ಮಾತನ್ನು ದಾವಣಗೆರೆಯ ಸಭೆಯಲ್ಲಿ ಯಾರೂ ಮಾತಾಡಿಲ್ಲ.

Leave a Reply

Your email address will not be published. Required fields are marked *