ಬಳ್ಳಾರಿ:
ಬೂದಗವಿ ಗ್ರಾಮದ ವಿಶಾಲಾಕ್ಷಿ ಮತ್ತು ಚಂದ್ರಶೇಖರಗೌಡ ಪಾಟೀಲರ ಪುತ್ರ ಪಿ. ಹರೀಶಕುಮಾರ ಹಾಗೂ ಹೆಚ್. ಎಸ್. ಅಶ್ವಿನಿ ಅವರ ವಚನ ಕಲ್ಯಾಣ ಮಹೋತ್ಸವ ಡಿಸೆಂಬರ್ 14ರಂದು ಬಳ್ಳಾರಿ ನಗರದ ವಿಶ್ವಗುರು ಬಸವ ಮಂಟಪದಲ್ಲಿ ನೆರವೇರಿತು.
ಅಶ್ವಿನಿ ಕುರುಗೋಡು ಗ್ರಾಮದ ಹೆಚ್.ಎಸ್. ನೀಲಮ್ಮ ಮತ್ತು ಹೆಚ್. ಎಸ್. ವೀರೇಶರವರ ಪುತ್ರಿ.
ವಿಶ್ವ ಸಂವಿಧಾನ ಶಿಲ್ಪಿ ವಿಶ್ವಗುರು ಬಸವಣ್ಣನವರ ವಚನ ಪ್ರತಿಜ್ಞೆ ಹಾಗೂ ಭಾರತದ ಸಂವಿಧಾನ ಪೀಠಿಕೆಯನ್ನು ಪ್ರತಿಜ್ಞಾಪೂರ್ವಕವಾಗಿ ಸ್ವೀಕರಿಸಿ ವಚನ ಮಾಂಗಲ್ಯದ ಮೂಲಕ ಕಲ್ಯಾಣ ಮಹೋತ್ಸವದ ನಡೆಯಿತು.

ಬೆಳಿಗ್ಗೆ ಬಸವೇಶ್ವರರ ಪೂಜಾ ಅನುಷ್ಠಾನ, ಸಾಮೂಹಿಕ ಇಷ್ಟಲಿಂಗ ಯೋಗ ಅನುಸಂಧಾನ, ವಚನ ಪಠಣ, ಮಾಂಗಲ್ಯ ಧಾರಣೆ, ವಧುವರರಿಗೆ ಪುಷ್ಪವೃಷ್ಟಿ, ಆರತಿ ಇತರೆ ಧಾರ್ಮಿಕ ವಿಧಿ ವಿಧಾನಗಳ ನಂತರ ಬಸವ ಧರ್ಮಪೀಠದ ಪೂಜ್ಯ ಅಕ್ಕಮಹಾದೇವಿ ತಾಯಿಯವರು ಹಾಗೂ ಪೂಜ್ಯ ಬಸವರಾಜಪ್ಪ ಶರಣರು ನೂತನವಾಗಿ ದಾಂಪತ್ಯ ಜೀವನ ಸ್ವೀಕರಿಸಿರುವ ಶರಣ ದಂಪತಿಗಳಿಗೆ ವೈವಾಹಿಕ ಜೀವನದ ಸಂದೇಶಗಳನ್ನು ನೀಡಿ, ಶುಭ ಹಾರೈಸಿ ಅನುಭಾವದ ನುಡಿಗಳನ್ನು ಆಡಿದರು.

ಕೂಡಲಸಂಗಮ ಬಸವಧರ್ಮ ಪೀಠ, ಬಳ್ಳಾರಿ ಜಿಲ್ಲಾ ರಾಷ್ಟ್ರೀಯ ಬಸವದಳ ಘಟಕಗಳ ಸದಸ್ಯರು ಕಲ್ಯಾಣ ಮಹೋತ್ಸವದ ಕ್ರಿಯೆಗಳನ್ನು ನಡೆಸಿಕೊಟ್ಟರು.

13ರ ಸಂಜೆ ಷಟಸ್ಥಲ ಧ್ವಜಾರೋಹಣ ನಂತರ ಬಸವಗುರುಪೂಜೆ, ನಿಶ್ಚಯ ಕಾರ್ಯ, ರುದ್ರಾಕ್ಷಿ ಕಂಕಣ ಮತ್ತು ಪ್ರತಿಜ್ಞಾವಿಧಿ ಕಾರ್ಯ ನಡೆಯಿತು.
ಎರಡೂ ಕಡೆಯ ಬಂಧು-ಮಿತ್ರರು ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ನೂತನ ದಂಪತಿಗೆ ಪುಷ್ಪ ಹಾಕಿ ಶುಭಕೋರಿದರು.

