ಪಟ್ಟದ್ದೇವರ ಶೈಕ್ಷಣಿಕ, ಮಾನವೀಯ ಕಾರ್ಯಗಳು ಮಾದರಿ: ಎಸ್‌.ಜಿ. ಸುಶೀಲಮ್ಮ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಗಡಿಭಾಗದಲ್ಲಿ ಸುಮಾರು ನಾಲ್ಕು ದಶಕಗಳಿಂದ ಡಾ. ಬಸವಲಿಂಗ ಪಟ್ಟದ್ದೇವರು ಕೈಗೊಳ್ಳುತ್ತಿರುವ ಶೈಕ್ಷಣಿಕ, ಸಾಮಾಜಿಕ, ಮಾನವೀಯ ಕಾರ್ಯಗಳು ಸರ್ವರಿಗೂ ಮಾದರಿಯಾಗಿವೆ ಎಂದು ಬೆಂಗಳೂರಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಎಸ್‌.ಜಿ ಸುಶೀಲಮ್ಮ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹೆತ್ತವರು ತಮಗೆ ಬೇಡವೆಂದು ಬಿಸಾಡಿದ ಎಳೆ ಕಂದಮ್ಮಗಳಿಗೆ ರಕ್ಷಣೆ ನೀಡಿ ಅವರ ಬದುಕನ್ನು ಬೆಳಗುತ್ತಿರುವ ಪಟ್ಟದ್ದೇವರ ಈ ಶ್ರೇಷ್ಠ ಕಾರ್ಯ ವರ್ಣನಾತೀತ ಎಂದು ಬಣ್ಣಿಸಿದರು. ಗಡಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕೆಂದು ಪಟ್ಟದ್ದೇವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮಹೋನ್ನತ ಸಾಧನೆಗೈಯಬೇಕು ಎಂದು ಕಿವಿಮಾತು ಹೇಳಿದರು.

ಅರ್ಬನ್ ಡೆವಲಪ್ಮೆಂಟ್ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಏಕಾಗ್ರತೆಯ ಓದು, ಸಮಯದ ಸದುಪಯೋಗ, ನಿರಂತರ ಪ್ರಯತ್ನ ಯಶಸ್ಸಿನ ರಹಸ್ಯಗಳಾಗಿವೆ ಎಂದು ತಿಳಿಸಿದರು.

ಮನೋವೈದ್ಯ ಪ್ರೀತಂ ಬ್ರಹ್ಮಾಪುರೆ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಮನೋಲ್ಲಾಸದಿಂದ ಪಾಲ್ಗೊಳ್ಳಲು ಮತ್ತು ಒತ್ತಡವನ್ನು ನಿಯಂತ್ರಿಸಲು ಯೋಗ, ಧ್ಯಾನ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಕೆ ಜೊತೆಗೆ ಸಂಸ್ಕಾರಯುತ ಗುಣಗಳನ್ನು ಮೈಗೂಡಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು. ಎಸ್. ಜಿ. ಸುಶೀಲಮ್ಮ ಅವರಂತಹ ಮಹನೀಯರ ಕಾರ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಗುರು ಪ್ರಸನ್ನ ಜನ ಸೇವಾ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಉಮಾ ಪ್ರಕಾಶ ಖಂಡ್ರೆ, ಪ್ರಾಚಾರ್ಯರಾದ ಬಸವರಾಜ ಮೊಳಕೀರೆ, ವಿಷ್ಣು ಕೋಟೆ, ಕಿರಣ್ ಸಜ್ಜನ್ ಮಾತನಾಡಿದರು.

ಬಿ.ಎಸ್ಸಿ ಪದವಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದ ಗುರುಪ್ರಸನ್ನ ಪದವಿ ಕಾಲೇಜಿನ ಮಹೇಶ್ವರಿ ಎಸ್. ಶೀಲವಂತ, ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಕ್ರಮವಾಗಿ 3ನೇ, 6ನೇ, 8ನೇ ಸ್ಥಾನ ಪಡೆದ ಚನ್ನಬಸವೇಶ್ವರ ಗುರುಕುಲ ಪದವಿ ಕಾಲೇಜಿನ ವಿದ್ಯಾರ್ಥಿನಿಯರಾದ ರಾಣಿ ಉಮೇಶ ದಾಡಗೆ, ಪಲ್ಲವಿ ಅಶೋಕ ಬೋರಳೆ, ವಾಣಿಶ್ರೀ ಅಶೋಕ ರಾಜೋಳೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಬೆಂಗಳೂರಿನ ಸುಮಂಗಲಿ ಆಶ್ರಮದ ಎನ್. ಕಾಂತಮ್ಮ, ಎಂ. ಶ್ರೀದೇವಿ, ಜಯಂತಿ ಹೆಬ್ಬಾರ್, ಕಲಬರಗಿಯ ಕಲ್ಯಾಣರಾವ್ ಪಾಟೀಲ, ಕಿರಣ ಚಾಕೋತೆ ಸೇರಿದಂತೆ ಇತರರು ಇದ್ದರು. ಮದನ್ ಗಾಂವ್ಕರ್ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *