ಬೆಳಗಾವಿ:
ಶಾಲಾ ಶಿಕ್ಷಣ ಪಠ್ಯದ ಜೊತೆಗೆ ಮಕ್ಕಳಿಗೆ ವಚನಗಳನ್ನು ರೂಢಿಸಿದ್ದೇ ಆದರೆ ಮಕ್ಕಳ ರೀತಿ, ನೀತಿ ಆಚಾರ ವಿಚಾರಗಳಲ್ಲಿ ಅಗಾಧ ಪ್ರಮಾಣದ ಪ್ರಗತಿಪರ ಬದಲಾವಣೆಯಾಗುವುದು ಖಂಡಿತ ಎಂದು ಸೇವಾ ಪ್ರಶಸ್ತಿ ಪಡೆದ ಶಿಕ್ಷಕಿ ಲಲಿತಾ ಮಹಾಜನಶೆಟ್ಟಿ ಹೇಳಿದರು.
ರವಿವಾರದಂದು ಲಿಂಗಾಯತ ಸಂಘಟನೆಯ ವತಿಯಿಂದ, ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೂಗಾರ ಮಾದಯ್ಯ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯ ಶಿಕ್ಷಕರ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶರಣರ ವಚನಗಳು ಜೀವನದ ಎಲ್ಲಾ ಸಾರ್ವತ್ರಿಕ ಸತ್ಯದ ಆಯಾಮಗಳನ್ನು ಒಳಗೊಂಡಿವೆ. ಮಕ್ಕಳು ಶಾಲಾ ಹಂತದಲ್ಲಿಯೇ ಶರಣರ ವಚನಗಳನ್ನು ಮನನ ಮಾಡಿಕೊಳ್ಳುವುದರ ಜೊತೆಗೆ ಶಿಕ್ಷಕರಾದ ನಾವು ಅವುಗಳನ್ನು ಆಚರಣೆಯಲ್ಲಿ ತರುವತ್ತ ಶ್ರಮಿಸಬೇಕಿದೆ ಎಂದು ಲಲಿತಾ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ ಆ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತ ಶಿಕ್ಷಕರಾದ ಶ್ರೀದೇವಿ ನರಗುಂದ, ಶೋಭಾ ಪಾಶ್ಚಾಪೂರ, ಸಿ. ಟಿ. ತುಬಾಕಿ, ಎ. ಬಿ. ಮಡಿವಾಳರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ಮಾಡಿ ತಾಲೂಕು ಮತ್ತು ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಅಂಜನಾ ಅಗಸಿಮನಿ, ಲಕ್ಷ್ಮಿ ಬಹದ್ದೂರಿ ಮತ್ತು ಭೀಮಾಶಂಕರ ಕುಂಬಾರ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ 12ನೇ ಶತಮಾನದ ಶರಣ ಹೂಗಾರ ಮಾದಯ್ಯನವರ ಕುರಿತು ಶಿಕ್ಷಕಿ ಸುಶೀಲಾ ಗುರವ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರಾದ ಸದಾಶಿವ ದೇವರಮನಿ, ವಿ.ಕೆ ಪಾಟೀಲ, ಶಶಿಭೂಷಣ ಪಾಟೀಲ,ಬಸವರಾಜ ಕರಡಿಮಠ, ಆನಂದ ಕರ್ಕಿ, ಅಶೋಕ ಖೋತ, ಬಸವರಾಜ ಬಿಜ್ಜರಗಿ, ಶಂಕರಪ್ಪ ಮೆಣಸಿನಕಾಯಿ, ಮಹಾಂತೇಶ ಇಂಚಲ, ಮಹೇಶ ಅಕ್ಕಿ, ಸುನೀಲ ಸಾಣಿಕೊಪ್ಪ, ವಿರೂಪಾಕ್ಷ ದೊಡ್ಡಮನಿ, ವಿಜಯ ಕಿಳ್ಳಿಕೇತರ ಸೇರಿದಂತೆ ಸಂಘಟನೆ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಸಂಗಮೇಶ ಅರಳಿ ಸ್ವಾಗತಿಸಿದರು. ಎಮ್.ವೈ. ಮೆಣಸಿನಕಾಯಿ ಪರಿಚಯಿಸಿದರು. ಶಿವಾನಂದ ತಲ್ಲೂರ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.