ಪೇಜಾವರ ಶ್ರೀಗಳೇ, ಸಂವಿಧಾನ ಬದಲಾಯಿಸುವ ಮಾತು ಬಸವ ತತ್ವ ವಿರೋಧಿ ನಡೆ

ವಚನ ಸಾಹಿತ್ಯದ ಆಶಯಗಳು ಮತ್ತು ಭಾರತದ ಸಂವಿಧಾನದ ಆಶಯಗಳು ಒಂದೇ. ಸಂವಿಧಾನವನ್ನು ವಿರೋಧಿಸುವುದು, ಬಸವತತ್ವವನ್ನು ವಿರೋಧಿಸುವುದು ಎರಡೂ ಒಂದೇ.

ಬೆಂಗಳೂರು

ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಆಯ್ದ ”ಸಂತರ ಸಮಾವೇಶದಲ್ಲಿ” ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ “ಸ್ವತಂತ್ರ‍್ಯಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ‍್ಯ ಬಂದ ನಂತರ ಜಾತ್ಯಾತೀತ ರಾಷ್ತ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು” ಎಂದು ಘರ್ಜಿಸಿದ್ದಾರೆ. ಅಂದರೆ ಈಗಿರುವ ಸಂವಿಧಾನವನ್ನು ಬದಲಾಯಿಸಬೇಕು ಎನ್ನುವ ಅರ್ಥಬರುವ ರೀತಿಯಲ್ಲಿ ಮಾತನಾಡಿದ್ದಾರೆ.

ಇದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ. ಇಂದು ಇಡೀ ವಿಶ್ವಕ್ಕೇ ಶಾಂತಿ, ಸೌಹಾರ್ದತೆ, ಸಮಾನತೆಯ ಸಂದೇಶ ಬೀರುತ್ತಿರುವ ಬಸವ ತತ್ವದ ವಿರೋಧಿ ನಡೆ ಕೂಡ.

12ನೇ ಶತಮಾನದಲ್ಲಿ ಇವರ ಸನಾತನ ಧರ್ಮದ ಉಪಟಳ, ಶೋಷಣೆಗಳಿಗೆ ಪರ್ಯಾಯವಾಗಿ ಬಸವಣ್ಣನವರ ನೇತೃತ್ವದಲ್ಲಿ ಸಮಸಮಾಜದ ಆಶಯಗಳುಳ್ಳ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಅದಕ್ಕೆ ಶರಣ ಸಮೂಹ ರಚಿಸಿ ಕೊಟ್ಟಿರುವ ವಚನ ಸಾಹಿತ್ಯವೇ ಲಿಂಗಾಯತ ಸಮಾಜದ ಸಂವಿಧಾನ.

ವಚನ ಸಾಹಿತ್ಯ ಮತ್ತು ಸಂವಿಧಾನ

ಈ ವಚನ ಸಾಹಿತ್ಯದಲ್ಲಿನ ಹೆಚ್ಚಿನ ಆಶಯಗಳು ನಮ್ಮ ಸ್ವತಂತ್ರ ಭಾರತದ ಡಾ. ಭಾಭಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಭಾಗವಾಗಿವೆ. ಬಸವತತ್ವದ ಸಮಸಮಾಜದ ಆಶಯಗಳು ಮತ್ತು ನಮ್ಮ ದೇಶದ ಸಂವಿಧಾನದಲ್ಲಿನ ಆಶಯಗಳು ಹೆಚ್ಚೂ ಕಡಿಮೆ ಒಂದೇ ಆಗಿವೆ ಅನ್ನುವುದು ಬಸವತತ್ವ ಪ್ರಣೀತ ಸಮಸಮಾಜ ಸ್ಥಾಪನೆಯ ಘನತೆ ಮತ್ತು ಪ್ರಸ್ತುತತೆಯನ್ನು ತೋರಿಸುತ್ತವೆ.

ಇತ್ತೀಚೆಗೆ, “ವಚನ ಸಂವಿಧಾನ” ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿರುವ ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಹೀಗೆ ಅಭಿಪ್ರಾಯಪಡುತ್ತಾರೆ “ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಭಾರತದ ಸಂವಿಧಾನದ ಆಶಯಗಳೆಲ್ಲವೂ ಶರಣರ ವಚನಗಳಲ್ಲಿವೆ. ಸ್ವಲ್ಪ ಮುಂದುವರಿದು ಹೇಳುವುದಾದರೆ ವಚನ ಸಂವಿಧಾನದಲ್ಲಿರುವ ನೈತಿಕ ಆಶಯಗಳೆಲ್ಲವೂ ಭಾರತದ ಕಾನೂನಾತ್ಮಕ ಸಂವಿಧಾನದಲ್ಲಿ ಇಲ್ಲ ಎಂದರೆ ಯಾರೂ ಅಪಾರ್ಥ ಮಾಡಿಕೊಳ್ಳಬೇಕಿಲ್ಲ”.

ಕಳೆದ ಪಾರ್ಲಿಮೆಂಟಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು “ಈ ಬಾರಿ ೪೦೦ಕ್ಕೂ ಹೆಚ್ಚು” ಸ್ಥಾನ ಅನ್ನುವ ಘೋಷಣೆಯೊಂದಿಗೆ ಚುನಾವಣೆಗೆ ಹೋಗಿತ್ತು. ಆ ಸಮಯದಲ್ಲಿ ಕೆಲವು ಸಂಸದರು ಮತ್ತು ಸಂಘ ಪರಿವಾರದ ಪ್ರಮುಖರು ನಮಗೆ ೪೦೦ ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಅನ್ನುವ ಮಾತುಗಳನ್ನು ಚುನಾವಣೆಗೂ ಮುನ್ನ ಮತ್ತು ಚುನಾವಣೆಯ ಪ್ರಚಾರದಲ್ಲಿಯೂ ಆಡಿದ್ದರು.

ಕಳೆದ ೧೦ ವರ್ಷಗಳಿಂದ ಸಂಘ ಪರಿವಾರದ ಪ್ರತಿನಿಧಿ ಸರ್ಕಾರವನ್ನು ಮುನ್ನೆಡೆಸುತ್ತಿರುವ ಪ್ರಧಾನ ಮಂತ್ರಿಗಳು ಇದನ್ನು ಬಲವಾಗಿ ಅಲ್ಲಗಳೆಯಲಿಲ್ಲ. ಅದಕ್ಕೆ ಕಾರಣ, ಈ ಕ್ರಮವು ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯ ಭಾಗವಾಗಿತ್ತು. ಆ ಕಾರಣಕ್ಕಾಗಿ ನಮ್ಮ ಸಂವಿಧಾನ ಬದಲಾದರೆ ಅದರ ಫಲಾನುಭವಿಗಳಾದ ಹಿಂದುಳಿದ ವರ್ಗಗಳು, ಪರಿಶಷ್ಠ ಜಾತಿ ಮತ್ತು ಪಂಗಡಗಳು, ಅಲ್ಪಸಂಖ್ಯಾತ ಸಮುದಾಯಗಳು ಎಚ್ಚೆತ್ತುಕೊಂಡು ಅಂತಹ ಅವಕಾಶ ಸಿಗದಂತೆ ನೋಡಿಕೊಂಡರು.

ಅದರಿಂದ ಎಚ್ಚೆತ್ತುಕೊಂಡ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷಗಳು ತಮ್ಮ ಕಾರ್ಯಸೂಚಿಯನ್ನು ಬದಲಾಯಿಸಿಕೊಂಡು ಸಂವಿಧಾನವನ್ನು ಬದಲಾಯಿಸುವ ಯಾವುದೇ ಉದ್ದೇಶಗಳು ಇಲ್ಲ ಎಂದು ನಂಬಿಸುವ ಪ್ರಯತ್ನವನ್ನು ಮಾಡುತ್ತಲೇ ಹಿಂದಿನ ಬಾಗಿಲಿನಿಂದ ಪುನಃ ಆ ಪ್ರಯತ್ನಕ್ಕೆ ಕೈ ಹಾಕಿವೇ. ಆಯ್ದ “ಸಂತರ ಸಮಾವೇಶ” ದ ಮೂಲಕ ಸೂಕ್ತವಾದ ಜನಾಭಪ್ರಾಯ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಈ ಸಂತರ ಪತ್ರಿಕಾ ಹೇಳಿಕೆಗಳು ಮತ್ತು ನಿರ್ಣಯಗಳು ಸಂವಿಧಾನ ವಿರೋಧಯಾಗಿವೆ.

ಗುಪ್ತ ಕಾರ್ಯಸೂಚಿ

ಸಂಘ ಪರಿವಾರ ಅದರ ರಾಜಕೀಯ ಪ್ರತಿನಿಧಿಯಾದ ಆಡಳಿತಾರೂಢ ಬಿಜೆಪಿ ಇದನ್ನು ಗುಪ್ತ ಕಾರ್ಯಸೂಚಿಯಾಗಿ ಮುಂದುವರಿಸುತ್ತಿದ್ದು ಆ ದಿಕ್ಕಿನಲ್ಲಿ ದೇಶದ ಸಂವಿಧಾನ ಬದಲಾಯಿಸವ ಹಾಗೂ ಇತ್ತೀಚನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಬಸವಪ್ರಣೀತ ಲಿಂಗಾಯತ ಧರ್ಮ ಮತ್ತು ಅದರ ಆಶಯಗಳನ್ನು ಹತ್ತಿಕ್ಕುವ ಮತ್ತು ಅದು ಹಿಂದೂ ಸಮಾಜದ ಭಾಗ ಎಂದು ನಂಬಿಸುವ ಕಾರ್ಯಸೂಚಿಯನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಂಡಿವೆ. ಇಂದಿನ ಸಮಾವೇಶವು ಇದರ ಪ್ರಮುಖ ಭಾಗವಾಗಿದೆ.

ಈ ಆಯ್ದ ಸಂತರ ಗುಪ್ತ ಕಾರ್ಯಸೂಚಿಯನ್ನು ಖಡಾ ಖಂಡಿತವಾಗಿ ಖಂಡಿಸಬೇಕಾಗಿದೆ, ಇವರ ಸಂವಿಧಾನ ಬಾಹಿರ ಕಾರ್ಯಸೂಚಿಗೆ ಪೂರ್ಣ ವಿರಾಮ ಹಾಕುವ ಪ್ರಯತ್ನ ಮಾಡಬೇಕಾಗಿದೆ. ಇವರ ಈ ಕಾರ್ಯಸೂಚಿಯಲ್ಲಿ ಬಸವಪ್ರಣೀತ ಲಿಂಗಾಯತ ಮಠಾಧೀಶರುಗಳೂ ಭಾಗಿಯಾಗಿರುವುದು ಬಸವತತ್ವಕ್ಕೆ ಬಗೆದ ದ್ರೋಹವಾಗಿದೆ.

ಬಸವತತ್ವ ಪ್ರಣೀತ ಲಿಂಗಾಯತ ಧರ್ಮವು ವಚನ ಸಾಹಿತ್ಯ ಕಟ್ಟಿಕೊಟ್ಟಿರುವ ಸಂವಿಧಾನದ ಆಶಯಗಳು ಡಾ. ಅಂಬೇಡ್ಕರ್ ಕೊಟ್ಟಿರುವ ನಮ್ಮ ಸಂವಿಧಾನದ ಆಶಗಳೇ ಆಗಿವೆ. ಆದ ಕಾರಣ ಇವರೆಲ್ಲಾ ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಬಸವ ತತ್ವದ ವಿರೋಧಿಗಳು ಕೂಡ.

ಪೇಜಾವರ ಶ್ರೀಗಳಿಗೆ ೯ ಪ್ರಶ್ನೆಗಳು

ಕೊನೆಯಲ್ಲಿ ನಿರ್ಧಿಷ್ಟವಾಗಿ ಪೇಜಾವರ ಶ್ರೀಗಳಿಗೆ ಕೆಲವು ಪ್ರಶ್ನೆಗಳು:

೧. ನೀವು ಹೇಳುವ “ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ” ಎನ್ನುವ ವಾಕ್ಯದಲ್ಲಿ ಬರುವ “ನಮ್ಮನ್ನು” ಅಂದರೆ ಯಾರು?

೨. ನೀವು ಹೇಳುವ “ನಮ್ಮನ್ನು” ಅನ್ನುವ ಪದದಲ್ಲಿ ಬಹುಜನರಾದ “ನಾವು” ಇದ್ದೇವೆಯೇ?

೩. ಬಹುಜನರಾದ “ನಾವು” ಇದ್ದೇವೆ ಎಂದಾದರೆ ಉಡುಪಿಯ ಮಠದಲ್ಲಿ ನಿಮ್ಮೊಟ್ಟಿಗೆ ನಮಗೂ ಸಹಪಂಕ್ತಿ ಭೋಜನ ಏರ್ಪಡಿಸುತ್ತೀರಾ?

೪. ಹಿಂದೂಗಳು ಎಂದರೆ ಯಾರು? ದಿವಂಗತ ಪೇಜಾವರ ಸ್ವಾಮೀಜಿಯವರು ಬ್ರಾಹ್ಮಣರು ಹಿಂದೂಗಳಲ್ಲ. ಬ್ರಾಹ್ಮಣರು ಬೇರೆ ಹಿಂದೂಗಳು ಬೇರೆ ಅಂತ ಪಬ್ಲಿಕ್ ಟಿವಿ ರಂಗನಾಥ್ ಅವರ ಸಂದರ್ಶನವೊಂದರಲ್ಲಿ ಹೇಳಿದ್ದರು. ನಿಮ್ಮ ಅಭಿಪ್ರಾಯ ತಿಳಿಸಿ.

೫.ಹೊರಗಿನವರು ಬಂದು ಹಿಂದೂಗಳನ್ನು ಬೇರೆ ಧರ್ಮಕ್ಕೆ ಸೆಳೆಯುತ್ತಿದ್ದಾರೆ ಮತ್ತು ದೇಶ ಕಬಳಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೀರ. ಹೊರಗಿನವರು ಬಂದು ಅಷ್ಟೊಂದು ಜನರನ್ನು ಅವರ ಧರ್ಮಕ್ಕೆ ಸೆಳೆಯುವಾಗ ನಿಮಗೆ ಏಕೆ ನಿಮ್ಮ ಬ್ರಾಹ್ಮಣ ಧರ್ಮಕ್ಕೆ ಸೆಳೆಯಲು ಸಾಧ್ಯವಾಗಲಿಲ್ಲ.

೬. ಹಿಂದೂಗಳನ್ನು ಗೌರವಿಸುವ ಪಕ್ಷವನ್ನು ಬಂಬಲಿಸಬೇಕು ಅಂತ ಕರೆ ಕೊಟ್ಟಿದ್ದೀರಿ ಅದು ಯಾವ ಪಕ್ಷ? ಅಥವಾ ನೇರವಾಗಿ ಬಿಜೆಪಿ ಅಂತ ಪ್ರಚಾರಕ್ಕೆ ಇಳಿಯಬಹುದಲ್ಲ?

೭. ಗುರುಕುಲ ಶಿಕ್ಷಣ ಅಂದರೇನು? ಅದರಲ್ಲಿ ಇಂದಿನ ಅಧುನಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನೂ ಕೊಡುತ್ತೀರಾ? ನಿಮ್ಮ ಮಕ್ಕಳಿಗೂ ಅದೇ ಶಿಕ್ಷಣವನ್ನು ಕೊಡುತ್ತೀರಾ? ಹಿಂದಿನ ಗುರುಕುಲ ಶಿಕ್ಷಣದಲ್ಲಿ ಹಲವು ವರ್ಗ, ಜಾತಿಗಳ ಮಕ್ಕಳಿಗೆ ಪ್ರವೇಶವಿರಲಿಲ್ಲ. ಈಗ ನೀವು ಪ್ರಸ್ತಾಪಿಸುತ್ತಿರುವ ಗುರುಕುಲ ಪದ್ದತಿಯಲ್ಲಿ ಅವರಿಗೂ ಅವಕಾಶಗಳಿರುತ್ತವೆಯೇ? ಇದ್ದರೆ “ನಿಮ್ಮ” ಮಕ್ಕಳಿಗೆ ಮತ್ತು “ನಮ್ಮ (ಶೂದ್ರ)” ಮಕ್ಕಳಿಗೆ ಒಂದೇ ಶಿಕ್ಷಣವನ್ನು ಕೊಡುತ್ತೀರಾ? ಅದು ಯಾವ ಭಾಷೆಯಲ್ಲಿರುತ್ತದೆ?

೮. ನಿಮ್ಮ ಸನಾತನ ಧರ್ಮದಲ್ಲಿ ಎಲ್ಲಾ ವರ್ಗ ಮತ್ತು ಜಾತಿ ಮತ್ತು ಲಿಂಗಾಯತ ಧರ್ಮದವರಿಗೂ ಅವಕಾಶಗಳಿವೆಯೇ? ಇದ್ದರೆ ಎಲ್ಲರಿಗೂ ಸಮಾನ ಅವಕಾಶಗಳಿರುತ್ತವೆಯೇ? ಅಥವಾ ವೇದೋಪಷನತ್ತು ಪ್ರಣೀತ ವರ್ಣಾಶ್ರಮ ವ್ಯವಸ್ಥೆಯೇ ಅಡಿಪಾಯವಾಗಿರುತ್ತದೆಯೇ?

೯. ಸ್ವಾತಂತ್ರ‍್ಯಪೂರ್ವದಲ್ಲಿ ಭಾರತ ಎಂಬುದು ಇತ್ತೆ? ಇದ್ದರೆ ಹೇಗಿತ್ತು? ಅಲ್ಲಿನ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ವಾತಾವರಣ ಇವರ ಕಲ್ಪಿತ ಭಾರತದಲ್ಲಿ ಒಂದೇ ಆಗಿತ್ತೆ? ಅಥವಾ ಈ ಭಾರತದೊಳಗೆ ಎಷ್ಟು ಭಾರತಗಳಿದ್ದವು ಎನ್ನುವ ಕಲ್ಪನೆ ಇದ್ದಂತಿಲ್ಲ.

ಇನ್ನೂ ಹಲವಾರು ಪ್ರಶ್ನೆಗಳು ಇವೆ. ಸದ್ಯಕ್ಕೆ ಇಷ್ಟು ಪ್ರಶ್ನೆಗಳಿಗಾದರೂ ಉತ್ತರಿಸಿ.

ಜೊತೆಗೆ “ನಮ್ಮನ್ನು” ನಿಮ್ಮ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳುವ ಕ್ರಾಂತಿ ಅಷ್ಠಮಠಗಳಲ್ಲೊಂದಾದ ಪೇಜಾವರ ಮಠದಿಂದಲೇ ನಡೆಯಲಿ. ಮೊಟ್ಟ ಮೊದಲ ಹೆಜ್ಜೆಯಾಗಿ ಬಹುಜನರಾದ “ನಮ್ಮನ್ನು’ ಸನಾತಿಗಳಾದ “ನಿಮ್ಮ” ಜೊತೆ ಕೂರಿಸಿಕೊಂಡು ಸಹಪಂಕ್ತಿ ಭೋಜನ ನಡೆಸುವ ಮೂಲಕ “ಹಿಂದು ನಾವೆಲ್ಲಾ ಒಂದು” ಎನ್ನುವ ಉದ್ಘೋಷಣೆಗೆ ಮನ್ನಣೆ ಕೊಟ್ಟು ಸಮಾನತೆಯನ್ನು ಮೆರೆಯಿರಿ.

ಆ ಮೂಲಕ ಭೌಗೋಳಿಕವಾಗಿ ಹಿಂದೂಗಳಾಗಿರುವ ಬಹುಜನರನ್ನೂ ಸಹ ಅವರು ಹೇಳುತ್ತಿರುವ “ನಮ್ಮನ್ನು” ಒಳಗೆ ಸೇರಿಸಿಕೊಳ್ಳಲಿ, ಆಗ ಎಲ್ಲರೂ ಒಟ್ಟಾಗಿ ಈಗಿರುವ ಡಾ. ಭಾಭಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸ್ವತಂತ್ರ ಭಾರತ ಒಪ್ಪಿಕೊಂಡಿರುವ ಸಂವಿಧಾನದ ಎಲ್ಲರನ್ನೂ (ನಮ್ಮನ್ನು ಮಾತ್ರವಲ್ಲ) ಗೌರವಿಸುತ್ತದೋ ಇಲ್ಲವೋ ಎನ್ನುವ ಬಗ್ಗೆ ಚರ್ಚಿಸೋಣ.

Share This Article
6 Comments
  • ಯಾವುದೇ ಕಾರಣಕ್ಕೂ ಬದಲಾವಣೆ ಆಗೋಲ್ಲ ಅವರು ಸುಮ್ನೆ ಬಾಯಿ ಬಿಟ್ಟು ಅವರ ಮೇಲೆ ಅವರೇ ಕಲ್ಲು ಆಕೊಂಡು ಇದಾರೆ

  • Shivaraj Biradarಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದಯಪಾಲಿಸಿದ ಭಾರತದ ಸಂವಿಧಾನವು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಎಂದಿಗೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ, ಏಕೆಂದರೆ ಇದು ಈಗ ಜಾಗತಿಕವಾಗಿ ಮತ್ತು ಎಲ್ಲೆಡೆ ಅಳವಡಿಸಿಕೊಂಡಿದೆ. ಭಾರತೀಯ ಸಂವಿಧಾನವು ಮಾನವೀಯತೆಯ ಸಹಬಾಳ್ವೆಯ ಮೌಲ್ಯಗಳನ್ನು ಒಳಗೊಂಡಿದೆ. ಸಹಸ್ರಮಾನಗಳಿಂದಲೂ ಪ್ರಪಂಚದ ಹೆಚ್ಚಿನ ಬುದ್ಧಿಜೀವಿಗಳು ನೀಡಿದ ತತ್ವಶಾಸ್ತ್ರ. ಸಾಕ್ರಟೀಸ್, ಬುದ್ಧ, ಬಸವ, ಕಾರ್ಲ್ ಮಾರ್ಕ್ಸ್, ಅಂಬೇಡ್ಕರ್ ಹೀಗೆ. ಈ ಅಂಚಿರುವ ಅಂಶಗಳು ತಮ್ಮ ಪಾದಗಳ ಕೆಳಗೆ ತಮ್ಮ ನೆಲವನ್ನು ಕಳೆದುಕೊಳ್ಳುವ ಫಿಟ್‌ಗಳ ಅಡಿಯಲ್ಲಿ ಕೂಗುತ್ತಲೇ ಇರುತ್ತವೆ.

  • ಪೇಜಾವರರಿಗೆ ಮನುಸ್ಮೃತಿ ಬೇಕಾಗಿದೆ , ಆದರೆ ಇವರ ಜೊತೆ ಲಿಂಗಾಯತ ಪಂಚಮಸಾಲಿ ಪೀಠದ ಸ್ವಾಮಿಗಳು
    ಸಂವಿಧಾನ ಬದಲಿಸಬೇಕು ಅಂತ ಹೋಗಿದಾರಲ್ಲ ಅವರಿಗೇನು ಹೇಳಬೇಕು ? ಆ ಸ್ವಾಮಿಗಳನ್ನು ಅಷ್ಟಮಠದ ಒಂದು ಪೀಠಕ್ಕೆ ಮಾಡ್ಕೋತಾರಾ ಕೇಳಿ ನೋಡಬೇಕು.

  • ಈ ಸ್ವಾಮೀಜಿಗಳು ಬಾಯಿ ಚಪಲಕ್ಕೆ ಮಾತನಾಡಬೇಕು ಅಷ್ಟೇ

    • ಪಂಚಮಸಾಲಿ ಪೀಠದ ಸ್ವಾಮೀಜಿಯೇ ಆಗಲಿ ಬೇರೆ ಯಾವುದೇ ಬಸವತತ್ವ ಆಧಾರಿತ ಲಿಂಗಾಯತ ಮಠದ ಸ್ವಾಮೀಜಿಯವರು ಇಂತಹ ಕಾರ್ಯಸೂಚಿಯ ಭಾಗವಾಗುವ ಆಸಕ್ತಿ ಹೊಂದಿದ್ದರೆ ಅದು ಅವರಿಚ್ಚೆ. ಆದರೆ ಮಠದ ಪೀಠಾಧಿಪತಿಯಾಗಿ ಬಸವತತ್ವ ವಿರೋಧಿ ಕೆಲಸಗಳಲ್ಲಿ ಭಾಗಿಯಾಗುವ ಸ್ವಾತಂತ್ರ ಅವರಿಗೆ ಇರುವುದಿಲ್ಲ. ಕಾರಣ ಇಲ್ಲಿ ಅವರ ವೈಯುಕ್ತಿಕ ವ್ಯಕ್ತಿತ್ವ ಹೊಂದಿರುವುದಿಲ್ಲ. ಬದಲಾಗಿ ಒಂದು ಮಠದ ಪ್ರತಿನಿಧಿಯಾಗಿರುತ್ತಾರೆ. ಹಾಗಾಗಿ ಆ ಮಠದ ಸಂಪ್ರದಾಯ, ಸಂಸ್ಕೃತಿ ಮತ್ತು ಸಿದ್ದಾಂತಗಳಿಗಣುಗುಣವಾಗಿ ಕಾರ್ಯೋನ್ಮುಖರಾಗಬೇಕು. ಇಲ್ಲವಾದಲ್ಲಿ ಮಠವನ್ನು ತೊರೆಯುವ ಸ್ವಾತಂತ್ರ್ಯ ಅವರಿವಿರುತ್ತದೆ.

Leave a Reply

Your email address will not be published. Required fields are marked *