ಬೀದರ:
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ. ಮರ್ತ್ಯಲೋಕವು ದೇವರ ಟಂಕಶಾಲೆ. ಇಲ್ಲಿ ಸಲ್ಲುವಂತೆ ಬದುಕು ರೂಪಿಸಿಕೊಳ್ಳಲು ಸರ್ವರಿಗೂ ಸಮಾನ ಅವಕಾಶ ಕಲ್ಪಿಸಲು ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿದರು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಗುರುಬಸವ ಪಟ್ಟದೇವರು ತಿಳಿಸಿದರು.
ಬಸವ ಕಲ್ಯಾಣದಲ್ಲಿ ನಡೆಯಲಿರುವ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಗೋರಟಾ ಗ್ರಾಮದ ಲಿಂಗಾಯತ ಮಹಾಮಠ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರ ಮಹತ್ಕಾರ್ಯಗಳಲ್ಲಿ ಅನುಭವ ಮಂಟಪದ ಸ್ಥಾಪನೆಯೂ ಬಲು ಮಹತ್ತರವಾದುದು. ವಿಶ್ವದ ಮನುಕುಲದ ಐತಿಹಾಸಿಕ ಮೈಲಿಗಲ್ಲು ಅನುಭವ ಮಂಟಪ.
ಅನುಭವ ಮಂಟಪಕ್ಕೆ ಮುಕ್ತ ಪ್ರವೇಶವಿತ್ತು. ಮುಕ್ತ ಚಿಂತನೆಗೆ ಅವಕಾಶವಿತ್ತು. ಗಂಡು- ಹೆಣ್ಣೆಂಬ ಭೇದವಿಲ್ಲ. ಬಡವ ಬಲ್ಲಿದರೆಂಬ- ಭೇದವಿಲ್ಲ. ಉಚ್ಚ- ನೀಚರೆಂಬ ವರ್ಣಭೇದವಿಲ್ಲ. ಜಾತಿಭೇದವಿಲ್ಲ. ಕಾಯಕ ಭೇದವಿಲ್ಲ. ಗ್ರಹಸ್ಥ- ಸನ್ಯಾಸಿ ಎಂಬ ಆಶ್ರಮಭೇದವಿಲ್ಲ. ವ್ಯಕ್ತಿ ಕಲ್ಯಾಣದ ಮೂಲಕ ಲೋಕಕಲ್ಯಾಣವೇ ಅಲ್ಲಿ ಮುಖ್ಯವಾಗಿತ್ತು. ಅಂತಹ ಅನುಭವ ಮಂಟಪ ಕಟ್ಟಿದವರು ಗುರುಬಸವಣ್ಣನವರು.
ಬಸವ ಕಲ್ಯಾಣದ ಕ್ಷೇತ್ರ ಅವಿಮುಕ್ತ ಕ್ಷೇತ್ರ. ಶರಣರು ಮೆಟ್ಟಿದ ಧರೆ ಪಾವನ. ಈ ಪಾವನ ಭೂಮಿಯಲ್ಲಿ ಮತ್ತೊಮ್ಮೆ ಬಸವ ಝೇಂಕಾರ ಮೊಳಗಿಸಬೇಕೆಂಬ ಸದುದ್ದೇಶದಿಂದ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟ ಕಾರ್ಯಕ್ರಮ ಆಚರಿಸಲಾಗುತ್ತಿದೆ.
ಉತ್ಸವದಂಗವಾಗಿ ವಚನ ಪಾರಾಯಣ, ಸೈಕಲ್ ಜಾಥಾ, ಪ್ರವಚನ, ವಚನ ಕಂಠಪಾಠ ಸ್ಪರ್ಧೆ, ಮುಂತಾದ ಕಾರ್ಯಕ್ರಮಗಳು ಕೂಡ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಯಿಂದ ಶರಣ ಬಳಗವೆಲ್ಲ ಆಗಮಿಸಲಿದ್ದು, ನಾಡಿನ ಪೂಜ್ಯರು, ರಾಜಕೀಯ ನಾಯಕರು, ಅನುಭಾವಿಗಳು ಭಾಗವಹಿಸಲಿದ್ದು ಅದರ ಪ್ರಚಾರಾರ್ಥವಾಗಿ ಗೋರಟಾ ಗ್ರಾಮದ ಶರಣ ಬಳಗಕ್ಕೂ ಆಮಂತ್ರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಅನುಭವ ಮಂಟಪದ ಕೂಗಿಗೆ ಜನ ಎಚ್ಚೆತ್ತರು. ಹೂವಿನ ಕಂಪಿಗೆ ದುಂಬಿಗಳು ಬಂದಂತೆ ರಾಶಿ ರಾಶಿ ಜನ ಬಂತು ಮಂಟಪಕೆ. ಅನುಭವ ಮಂಟಪ ಒಂದು ಜೇನುಗೂಡಿನಂತೆ. ಅನುಭಾವಿಗಳ ಚಿಂತನದ ಲೋಕಹಿತಾರ್ಥ ಜೇನು ವಚನಗಳ ರೂಪದಲ್ಲಿ ಸಂಗ್ರಹವಾಗತೊಡಗಿ ವಿಶ್ವದ ಅನುಭಾವಿಗಳ ಕೂಟವಾಗಿತ್ತು. ಚಿಂತನ ಶೀಲರ ವೇದಿಕೆಯಾಗಿತ್ತು.
ಪ್ರಥಮ ಸಂಸತ್ ಎನಿಸಿದ ಅನುಭವ ಮಂಟಪದ ಬೃಹತ್ ಸಂಸತ್ತು ಇವತ್ತಿಗೂ ಪ್ರಪಂಚದಲ್ಲಿಲ್ಲ. ಒಂದೇ ಸ್ಥಾನದಲ್ಲಿ ಏಕಕಾಲದಲ್ಲಿ 300 ವಚನಕಾರರು 36 ವಚನಕಾರ್ತಿಯರ ಪವಾಡ ಸದೃಶ ಕಾರ್ಯ! ಅನುಭವ ಮಂಟಪದಲ್ಲಿ ನಡೆದಿರುವದೇ ಇತಿಹಾಸ. ಅಂತಹ ಗತವೈಭವ ಮತ್ತೆ ಬಸವಕಲ್ಯಾಣದಲ್ಲಿ ಮರುಕಳಿಸಬೇಕಾಗಿದೆ.
ಅನುಭವ ಮಂಟಪ ಉತ್ಸವ ಲಿಂಗಾಯತ ಧರ್ಮೀಯರ ಹಬ್ಬದಂತೆ ಉತ್ಸಾಹ ಉಲ್ಲಾಸದೊಂದಿಗೆ ಪ್ರತಿಯೊಬ್ಬರು ಭಾಗವಹಿಸಬೇಕೆಂದು ತಿಳಿಸಿದರು.
ಗ್ರಾಮದ ಹಿರಿಯರಾದ ಚನ್ನಬಸಪ್ಪ ಪತಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಾಬುರಾವ ರಾಜೋಳೆ, ಶಿವಪುತ್ರಪ್ಪ ಕಣಜೆ, ಸುಭಾಷ ಪತಂಗೆ, ಚಂದ್ರಕಾಂತ ಕಣಜೆ, ಬಸವರಾಜ ಪೊಲೀಸಪಾಟೀಲ, ಭರತರಾಜ್ ಪೋಲಿಸಪಾಟೀಲ, ರವಿ ಕಾದೇಪೂರೆ, ಭರತರಾಜ್ ಪತಂಗೆ, ಬಸವರಾಜ ಮಾಶೆಟ್ಟೆ ಮುಂತಾದವರು ಭಾಗವಹಿಸಿದ್ದರು.
ಲಿಂಗಾಯತ ಸೇವಾದಳದ ಅಧ್ಯಕ್ಷರಾದ ಸುಪ್ರೀತ ಪತಂಗೆ ಸ್ವಾಗತಿಸಿದರು. ನೀಲಮ್ಮನ ಬಳಗದ ಅಧ್ಯಕ್ಷರಾದ ವಿಜಯಲಕ್ಷ್ಮಿ ರಾಜೋಳೆ ವಂದಿಸಿದರು. ಪ್ರಜ್ವಲ್ ರಾಜೋಳೆ ನಿರೂಪಣೆ ಮಾಡಿದರು. ಗ್ರಾಮದ ಹಿರಿಯರು, ಶರಣೆಯರು ಕಾರ್ಯಕ್ರಮದಲ್ಲಿ ಭಾಗಿಯಾದರು.
