ಸಾಣೇಹಳ್ಳಿ
ಹೊಸದುರ್ಗ ತಾಲ್ಲೂಕಿನ ಮಧುರೆಯ ಬ್ರಹ್ಮವಿದ್ಯಾನಗರದಲ್ಲಿ ನಡೆದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ ೨೬ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿಗಳಿಗೆ ಶಾಲು, ಹಾರ, ಕೃತಿಗಳನ್ನು ನೀಡಿ ಗೌರವಿಸಲಾಯಿತು.
ಗೌರವಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಪುರುಷೋತ್ತಮಾನಂದಪುರಿ ಸ್ವಾಮಿಗಳವರು ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಜವಾಬ್ದಾರಿ ವಹಿಸಿಕೊಂಡು ಸಮಾಜ ಮೆಚ್ಚುವ ಹಾಗೆ ಸೇವಾ ಕಾರ್ಯಗಳನ್ನು ಮಾಡುತ್ತಾ, ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ.
ಪೂಜ್ಯರಿಗೆ ಪಟ್ಟಾಭಿಷೇಕ ಆಗಿ ಇಂದಿಗೆ ೨೬ ವರ್ಷ ಆಯಿತು. ನಮ್ಮ ದೃಷ್ಟಿಯಲ್ಲಿ ೨೬ ವರ್ಷ ಎನ್ನುವುದು ದೊಡ್ಡದೇನಲ್ಲ. ಮಾನವನ ಆಯುಷ್ಯ ನೂರು ವರ್ಷವೆಂದು ಪರಿಗಣಿಸಬಹುದು. ನೂರು ವರ್ಷದ ಅವಧಿಯಲ್ಲಿ ಎಂತಹ ಕೆಲಸವನ್ನು ಮಾಡಬೇಕು ಎನ್ನುವುದು ಬಹಳ ಮುಖ್ಯ.
ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಸಮಾಜವನ್ನು ಕಟ್ಟಿ ಬೆಳೆಸಿದ್ದೇವೆ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಸಮಾಜ ನಮ್ಮನ್ನು ಈ ಸ್ವಾಮಿತ್ವದ ಸ್ಥಾನದಲ್ಲಿ ಕೂರಿಸಿದೆ. ಕೂತ್ಮೇಲೆ ನಾವು ವೈಭವದಿಂದ ಮೆರೆಯೋದಕ್ಕಿಂತ ಹೆಚ್ಚಾಗಿ ಸಮಾಜ ವೈಭವದಿಂದ ಇರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕೆ ಬೇಕಾಗಿರುವಂಥದ್ದು ಶಿಸ್ತು, ಸಂಸ್ಕೃತಿ, ಶಿಕ್ಷಣ ಸಂಘಟನೆ. ಇವುಗಳು ಇದ್ದಾಗ ಯಾವ ಸಮಾಜವಾದರೂ ಅಭಿವೃದ್ಧಿ ಹೊಂದಲು ಸಾಧ್ಯ.
ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸಿದರೆ ವಿಘ್ನಗಳು ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುವವು. ಅವುಗಳೇ ನಮ್ಮ ಸಂಪತ್ತೆಂದು ಭಾವಿಸಿಕೊಳ್ಳಬೇಕು. ಯಾರಿಗೆ ಯಾವ ವಿಘ್ನಗಳು ಇಲ್ವೋ ಅವರು ಪ್ರಗತಿ ಹೊಂದಲು ಸಾಧ್ಯವಿಲ್ಲ. ವಿಘ್ನಗಳು ಬಂದಾಗ ಪುಟಿದೇಳುವಂಥ ನೈತಿಕ ನೆಲೆಗಟ್ಟು ಬೆಳೆಸಿಕೊಳ್ಳಬೇಕು. ಆ ಹಿನ್ನಲೆಯಲ್ಲಿ ಸ್ವಾಮೀಜಿಯವರು ಬಹಳ ಒಳ್ಳೆಯ ಸೇವಾಕಾರ್ಯಗಳನ್ನು ತಮ್ಮ ಕ್ಷೇತ್ರದಲ್ಲಿ ಮಾಡಿಕೊಂಡು ಬರುತ್ತಿದ್ದಾರೆ ಎಂದರು ಸ್ವಾಮೀಜಿ.
ಈ ಸಂದರ್ಭದಲ್ಲಿ ಚಳ್ಳಕೆರೆಯ ಶಾಸಕ ಟಿ. ರಘುಮೂರ್ತಿ, ಮೌನೇಶ್ಳ, ವಿಶಾಲಾಕ್ಷಿ ನಟರಾಜ, ಲಕ್ಷ್ಮಣ ಉಪ್ಪಾರ, ಪ್ರಕಾಶ, ಪ್ರಭು, ವೀರಭದ್ರಪ್ಪ, ಉಪಸ್ಥಿತರಿದ್ದರು.