ನಿಜಾಚರಣೆ: ಮರಿಯಾಲ ಮಠದಲ್ಲಿ ರಾಹುಕಾಲ, ಶಕುನಗಳ ಸುಳಿವಿಲ್ಲದ ವಚನ ಮಾಂಗಲ್ಯ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ಮರಿಯಾಲ

ಗುಂಡ್ಲುಪೇಟೆ ತಾಲೂಕಿನ ಪರಮಾಪುರದ ಶರಣ ದಂಪತಿ ರಾಜೇಶ್ವರಿ ಮತ್ತು ಶಂಭುಲಿಂಗಪ್ಪ ಅವರ ಮಗ ಶಿವಕುಮಾರಸ್ವಾಮಿ. ಎಸ್. ಅವರ ಕಲ್ಯಾಣವು ಕೆಲಸೂರುಪುರದ ಶರಣ ದಂಪತಿ ದಾಕ್ಷಾಯಿಣಿ ಮತ್ತು ಮಾದಪ್ಪ ಅವರ ಮಗಳು ಅನುಷ. ಎಂ. ಅವರ ಜೊತೆ ಮರಿಯಾಲಮಠದ ಶ್ರೀ ಬಸವ ಮಹಾಮನೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಗುಳಿಕಕಾಲ, ರಾಹುಕಾಲ ಸೋಂಕಿಲ್ಲದೆ, ಲಗ್ನ, ರಾಶಿ, ಕೂಟ, ಗಣ, ತಿಥಿ, ವಾರ, ನಕ್ಷತ್ರ, ಶಕುನಗಳ, ಸುಳಿವಿಲ್ಲದೆ, ಬಸವಾದಿ ಶರಣರ ಆಶಯದ ವಚನಗಳಂತೆ ಕಲ್ಯಾಣ ಮಹೋತ್ಸವ ನಡೆಯಿತು.

ಮರಿಯಾಲದ ಪೂಜ್ಯ ಶ್ರೀ ಇಮ್ಮಡಿ ಮುರುಗರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಗಂಡು, ಹೆಣ್ಣು ಮೊದಲಿಗೆ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು. ನಂತರ ಅವರೇ ಬಸವ ಷಟಸ್ಥಲ ಧ್ವಜಾರೋಹಣವನ್ನು ಮಾಡಿದರು. ಮೇಲಾಜಿಪುರದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ಧ್ವಜಗೀತೆಯನ್ನು ಹಾಡಿದರು.

ಮೂಡಗೂರು ಪೂಜ್ಯಶ್ರೀ ಇಮ್ಮಡಿ ಉದ್ದಾನಸ್ವಾಮಿಗಳ ಸಮ್ಮುಖದಲ್ಲಿ ವಚನ ಮೂರ್ತಿಯಾದ ಕಾಳನಹುಂಡಿ ಪೂಜ್ಯಶ್ರೀ ಕುಮಾರಸ್ವಾಮಿಗಳು ಬಸವಾದಿ ಶರಣರ ಆಶಯದಂತೆ ಗಂಡು ಹೆಣ್ಣಿಗೆ ಮಾಂಗಲ್ಯ ಧಾರಣೆಯನ್ನು ಹಾಗೂ ಹೆಣ್ಣು ಗಂಡಿಗೆ ರುದ್ರಾಕ್ಷಿ ಧಾರಣೆಯನ್ನು ಮಾಡಿಸುವ ಮೂಲಕ ವಚನ ಕಲ್ಯಾಣಕಾರ್ಯ ಜರುಗಿತು.

ಭ್ರಮೆಯ ಮೂಲಕ ವೈದಿಕ ಸಂಪ್ರದಾಯದಲ್ಲಿ ಅರುಂಧತಿ ನಕ್ಷತ್ರವನ್ನು ನವದಂಪತಿಗಳಿಗೆ ತೋರಿಸುತ್ತಾರೆ. ಆದರೆ ಲಿಂಗಾಯತದಲ್ಲಿ ಆ ಸಂಪ್ರದಾಯವನ್ನು ನಾವುಗಳು ಮಾಡಬಾರದೆಂದು ಮೂಡಗೂರಿನ ಶ್ರೀಗಳು ನೆರೆದಿರುವ ಜನರಿಗೆ ಮನವರಿಕೆ ಮಾಡಿದರು. ತಮ್ಮ ಮಾತು ಮುಂದುವರೆಸಿ, ನಮ್ಮನಿಮ್ಮೆಲ್ಲರ ಮೂಲಗುರು ವಿಶ್ವಗುರು ಬಸವಣ್ಣನವರು. ಇಂದಿನ ಆಧುನಿಕ ಬದುಕಿನ ದಿನಮಾನಗಳಲ್ಲಿ ಎಲ್ಲರೂ ತೋರ್ಪಡಿಕೆ ಜೀವನ ಮಾಡುತ್ತಾ, ದುಂದುವೆಚ್ಚ ಮಾಡಿ ಜನರು ಬಡವರಾಗುವುದು, ಅನವಶ್ಯಕ ಹಣ ಕಳೆದುಕೊಳ್ಳುವುದು ನಡೆಯುತ್ತಿದೆ, ಇದಾಗಬಾರದು. ಆದ್ದರಿಂದ ನಮ್ಮ ಬಸವಾದಿ ಶರಣರು ಹೇಳಿಕೊಟ್ಟ ಇಷ್ಟಲಿಂಗಪೂಜೆ, ವಿಭೂತಿ, ರುದ್ರಾಕ್ಷಿಗಳ ಮೂಲಕ ಸರಳ ಮದುವೆಗಳನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಮಾಡಿ ಬದುಕಿನಲ್ಲಿ ಸಾಲರಹಿತ, ನೆಮ್ಮದಿಯ ಬದುಕನ್ನು ನಡೆಸಲು ಮುಂದಾಗಬೇಕೆಂದರು.

ಈಗಿನ ಲಿಂಗಾಯತರು ಬಸವಾದಿ ಶರಣರ ವಚನಗಳನ್ನು ಓದುವುದು, ನಿಜಾಚರಣೆ ಮಾಡುವುದನ್ನು ಮರೆತಿದ್ದಾರೆಂದು ರಂಜಾನ್ ದರ್ಗಾ ಅವರು ಹೇಳಿದ ಮಾತನ್ನು ಮೇಲಾಜಿಪುರದ ಶಿವಕುಮಾರಸ್ವಾಮಿಗಳು ನೆನೆದು, ಶರಣರ ಒಂದೊಂದು ವಚನವನ್ನು ಓದಿದರೆ ಸಾಕು ಲಿಂಗಾಯತರು ನಿಜಾಚರಣೆಗಳನ್ನು ಹೇಗೆ ಮಾಡಬೇಕೆಂದು ಗೊತ್ತಾಗುತ್ತದೆಂದು ನೆರೆದಿರುವ ಜನರಿಗೆ ಲಿಂಗಾಯತ ತತ್ವದ ಬಗ್ಗೆ ವಿವರಿಸಿದರು.

ಯೋಗೀಶ್ ಕೆ. ವಿ. ಕೊತ್ತಲವಾಡಿಯವರು ಸ್ವಾಗತ ಮಾಡಿದರು. ರಾಮಸಮುದ್ರದ ಪ್ರಸನ್ನ ಮತ್ತು ತಂಡದವರಿಂದ ವಚನ ಭಜನೆ ನೆರವೇರಿತು. ಪಡುಗೂರು ಶ್ರೀಗಳು ಉಪಸ್ಥಿತರಿದ್ದರು. ಯಶಸ್ವಿ ವಚನ ಕಲ್ಯಾಣ ಮಹೋತ್ಸವ ಇದಾಗಿತ್ತು. ನವದಂಪತಿಗಳಿಗೆ ನೆರೆದಿದ್ದ ಎಲ್ಲರೂ ಪುಷ್ಪ ಹಾಕಿ ಶುಭಕೋರಿದರು.

Share This Article
1 Comment
  • ಮರಿಯಾಲ ಶ್ರೀಗಳು ಮತ್ತು ಕಾರ್ಯಕ್ರಮ ಆಯೋಜಕರು ಹಾಗು ಕಲ್ಯಾಣ ವಾರ್ಷಿಕೋತ್ಸವ ನಡೆಸಿದ ದ್ವಿಕುಟುಂಬಕ್ಕೂ ಅನಂತ ಶರಣು. ಸಮಾಜದಲ್ಲಿ ನಿಜಾಚರಣೆಯ ಕಾರ್ಯಕ್ರಮಗಳು ನಡೆಯಬೇಕು ಇದರಿಂದ ಜ್ಞಾನ ವೃಧ್ಧಿಯಾಗುತ್ತದೆ

Leave a Reply

Your email address will not be published. Required fields are marked *