ರಾಯಚೂರು
ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ ಹಾಗೂ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ಬಸವ ಕೇಂದ್ರದಲ್ಲಿ ನಡೆಯಿತು.
ಶರಣು ವಿಶ್ವ ವಚನ ಫೌಂಡೇಶನ ರಾಯಚೂರು ಜಿಲ್ಲಾಧ್ಯಕ್ಷ ಬೆಟ್ಟಪ್ಪ ಕಸ್ತೂರಿ ಮಾತನಾಡಿ ಒಕ್ಕಲಿಗ ಮುದ್ದಣ್ಣ ಅಂಗ ಬೇಸಾಯದ ಜೊತೆಗೆ ಲಿಂಗ ಬೇಸಾಯವನ್ನು ಮಾಡಿ, ಮಣ್ಣಲ್ಲಿ ಮಣ್ಣಾಗಿ ದುಡಿದು ಚಿನ್ನದಂತಹ ಬದುಕು ಕಟ್ಟಿಕೊಳ್ಳುವ ಪರಮ ಸತ್ಯವನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸುತ್ತ ಜಂಗಮ ದಾಸೋಹ ನಡೆಸುವುದು ಒಕ್ಕಲಿಗ ಮುದ್ದಣ್ಣನವರ ನಿತ್ಯ ವ್ರತವಾಗಿತ್ತು. ಒಮ್ಮೆ ರಾಜರು ಇವರಿಗೆ ತೆರಿಗೆಯನ್ನು ಕೇಳಿದಾಗ ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಯೋಗಿಸುವ ಪಥ ಅನುಸರಿಸಿದವರು ಎಂದು ವಿವರವಾಗಿ ತಿಳಿಸಿದರು.
ಶರಣೆ ಮುಕ್ತಾಯಕ್ಕ ನರಕಲದಿನ್ನಿ ಅವರು ಮಾತನಾಡುತ್ತಾ, ಮುದ್ದಣ್ಣನವರು ರಚಿಸಿದ 12 ವಚನಗಳು ಮಾತ್ರ ಲಭ್ಯವಿದ್ದು, ಆ ವಚನಗಳಲ್ಲಿ ವಿಚಾರದ ಬೆಳಕಿದೆ. ರೈತರಿಗೆ ಸಲಹೆಯಿದೆ, ಸಮಾಜಕ್ಕೆ ಉಪಯೋಗವಾಗಬಲ್ಲ ವಿವೇಚನೆ ಮತ್ತು ವಿಶ್ಲೇಷಣೆಯಿದೆ ಎಂದರು.
ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ, ಇರಿದು ಮರೆಯುವುದಕ್ಕೆ ಕ್ಷತ್ರೀಯನಲ್ಲ, ವ್ಯವಹರಿಸುವುದಕ್ಕೆ ವೈಶ್ಯನಲ್ಲ, ಒಕ್ಕಲ ಮಗನ ತಪ್ಪ ನೋಡದೆ ಒಪ್ಪಗೊಳ್ಳಯ್ಯ, ಕಾಮಭೀಮ ಜೀವಧನದೊಡೆಯ ಎಂಬ ವಚನದ ಮೂಲಕ ಹಾರುವ, ಕ್ಷತ್ರೀಯ, ವೈಶ್ಯರಿಗಿಂತ ರೈತನ ಕಾಯಕವೇ ಶ್ರೇಷ್ಠವಾದ ಕಾಯಕ, ಎಂದು ಮುದ್ದಣ್ಣ ಹೇಳಿದರು.

ಹಿರಿಯರಾದ ಸಿ ಬಿ ಪಾಟೀಲ ಮತ್ತು ಶಿವಕುಮಾರ ಮಾಟೂರ ಮಾತನಾಡುತ್ತಾ, ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ, ಮಧುರ ಸ್ವಭಾವದವರೂ ಆಗಿದ್ದರು. ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು.
ಅವರು ತಮ್ಮ ಪ್ರವಚನದ ಮೂಲಕ ಲಕ್ಷಾಂತರ ಸದ್ಭಕ್ತರ ಮನಸ್ಸುಗಳನ್ನು ಅರಳಿಸಿ ಅವರ ಜೀವನದಲ್ಲಿ ಸುಖ, ನೆಮ್ಮದಿ ಬರುವಂತೆ ಮಾಡಿದ್ದರು. ನಡೆ, ನುಡಿ ಒಂದಾಗಿಸಿಕೊಂಡಿರುವ ಪೂಜ್ಯರು ಎಲ್ಲರಿಗೂ ಮಾದರಿ ಆಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಸವ ಕೇಂದ್ರದ ಅಧ್ಯಕ್ಷರಾದ ರಾಚನಗೌಡ ಕೋಳೂರು ಅವರು ಮಾತನಾಡುತ್ತಾ, ಬಸವಾದಿ ಶರಣರು ಮತ್ತು ಶ್ರೀಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು, ಆ ಮೂಲಕ ಅವರ ಆದರ್ಶಗಳಿಗೆ ನಾವು ಗೌರವ ಕೊಡಬೇಕು ಮತ್ತು ಅವರ ಸಂದೇಶಗಳನ್ನು ಜಾರಿಗೆ ತರಬೇಕು ಎಂದು ತಿಳಿಸುತ್ತಾ, ನಿತ್ಯವೂ ನಾವೆಲ್ಲರೂ ಬಸವಾದಿ ಶರಣರ ವಚನಗಳನ್ನು ಪಠಿಸುತ್ತಾ, ವಚನಗಳ ತತ್ವಗಳನ್ನು ಆಚರಣೆಯಲ್ಲಿ ತಂದುಕೊಂಡು ಶರಣ ಮಾರ್ಗದಲ್ಲಿ ಸಾಗಿ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕೆಂದರು.

ಪ್ರಾರಂಭದಲ್ಲಿ, ರಾಘವೇಂದ್ರ ಆಶಾಪುರ ಮತ್ತು ಅವರ ವಿದ್ಯಾರ್ಥಿವೃಂದ ವಚನಗಾಯನ ನಡೆಸಿಕೊಟ್ಟರು. ಶರಣೆ ಅಶ್ವಿನಿ ಮಾಟೂರ ವಚನ ಪ್ರಾರ್ಥನೆ ಮಾಡಿಸಿದರು. ನಾಗೇಶಪ್ಪ ಸ್ವಾಗತಿಸಿದರು, ಮಲ್ಲಿಕಾರ್ಜುನ ಗುಡಿಮನಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು ಮತ್ತು ನಾಗರಾಜ್ ಪಾಟೀಲ ವಂದಿಸಿದರು.