‘ಯೂರೋಪಿಗಿಂತ 300 ವರ್ಷ ಮುಂಚೆ ಸ್ತ್ರೀ ಸಮಾನತೆಗೆ ಹೋರಾಡಿದ ಶರಣರು’

“12ನೇ ಶತಮಾನ ಸ್ತ್ರೀ ಅಸ್ಮಿತೆಯ ಕಾಲವೆಂದು ಘಂಟಾಘೋಷವಾಗಿ ಹೇಳಬಹುದು, ಅಂದು ರಚನೆಯಾದ 1351 ವಚನಗಳು ಇದಕ್ಕೆ ಸಾಕ್ಷಿಯಾಗಿವೆ.”

ರಾಯಚೂರು

15ನೇ ಶತಮಾನದಲ್ಲಿ ಇಟಲಿ, ಪ್ರಾನ್ಸ್ ಮತ್ತಿತರ ದೇಶಗಳಲ್ಲಿ ಸ್ತ್ರೀ ಸ್ವಾತಂತ್ರ್ಯ, ಸಮಾನತೆಗಾಗಿ ಹೋರಾಟಗಳು ಆರಂಭವಾದವು. ಇಡೀ ವಿಶ್ವದಲ್ಲಿ 12ನೇ ಶತಮಾನದಲ್ಲೇ ಸ್ತ್ರೀಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಿದ ಮೊಟ್ಟಮೊದಲಿಗರು ನಮ್ಮ ಕನ್ನಡದ ಬಸವಾದಿ ಶರಣರು ಎಂದರು.

12ನೇ ಶತಮಾನ ಸ್ತ್ರೀ ಅಸ್ಮಿತೆಯ ಕಾಲವೆಂದು ಘಂಟಾಘೋಷವಾಗಿ ಹೇಳಬಹುದು, ಅಂದು ರಚನೆಯಾದ ವಚನ ಸಾಹಿತ್ಯದ ಸುಮಾರು 1351 ವಚನಗಳು ಇದಕ್ಕೆ ಸಾಕ್ಷಿಯಾಗಿವೆ, ಎಂದು ರಾಯಚೂರು ಆದಿಕವಿ ವಾಲ್ಮೀಕಿ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕಿ ಡಾ. ಶಿವಲೀಲಾ ಬಸನಗೌಡ ಪಾಟೀಲ ಹೇಳಿದರು.

ಬಸವ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ‘ಕದಳಿಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ’ ವಿಷಯವಾಗಿ ಮಾತನಾಡುತ್ತ, ಮಹಿಳಾ ವಚನಕಾರ್ತಿಯರಲ್ಲಿ ಗೊಗ್ಗವ್ವೆ, ನೀಲಮ್ಮ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ರೆಮ್ಮವ್ವೆ, ದುಗ್ಗಳೆ ಮತ್ತಿತರರೆಲ್ಲರ ವಚನಗಳಲ್ಲಿ ಸ್ತ್ರೀ ಸಮಾನತೆಯ ಅಂಶಗಳು ಎದ್ದು ಕಾಣುತ್ತವೆ.

ಸ್ತ್ರೀ ಹೆರುವ ಯಂತ್ರವೆಂದು ಕಡೆಗಣಿಸದಿರಿ. ಅವಳು ಪುರುಷ ವಿರೋಧಿಯಲ್ಲ. ತನಗೆ ಸಮಾನ ಅವಕಾಶಗಳನ್ನು ಮಾತ್ರ ಅವಳು ಬಯಸುವುದಾಗಿದೆ. ತನ್ನನ್ನು ತಾನು ಗುರುತಿಸಿಕೊಳ್ಳುವ ಸಾಮರ್ಥ್ಯ ಸ್ತ್ರೀಗಿದೆ. ಅದನ್ನರಿತು ಸ್ಥಾನ ಕಲ್ಪಿಸಿದವರು ಶರಣರು ಎಂದು ಶಿವಲೀಲಾ ಹೇಳಿದರು.

ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಡಾ. ಶೀಲಾ ಸಗರದ ಅವರು
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕೊಡುಗೆ ನೀಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲೂ ಹೆಚ್ಚು ಮಹಿಳೆಯರು ತೊಡಗಿಸಿಕೊಂಡಿರುವುದು ಅವರ ಸಾಧನೆಯ ಸಂಕೇತವೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಡಾ. ಸರ್ವಮಂಗಳಾ ಸಕ್ರಿ ಮಾತನಾಡಿ, ಶರಣರು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದರು. ಸೂತಕಗಳಿಂದ ಮುಕ್ತಗೊಳಿಸಿದರು. ಕಾಯಕದ ಮಹತ್ವವನ್ನು ಸಾರಿದರು. ವಚನ ಸಾಹಿತ್ಯ ವಿಶ್ವಕ್ಕೇ ಮಾದರಿಯಾದುದು ಎಂದರು.

ಪ್ರತಿವರ್ಷ ಕದಳಿ ವೇದಿಕೆಯಿಂದ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಅದರಂತೆ ಬಸವಾದಿ ಶರಣರ ತತ್ವ ನುಡಿದು-ನಡೆದು ಸಮಾಜಕ್ಕೆ ಮಾದರಿಯಾದ ಶರಣೆಯರಾದ ಸರೋಜಮ್ಮ ಬಸನಗೌಡ ಮಾಲಿಪಾಟೀಲ, ಜಯಶ್ರೀ ಮಹಾಜನಶೆಟ್ಟಿ, ಅನ್ನಪೂರ್ಣಮ್ಮ ಕರಿಬಸಪ್ಪ ಮೇಟಿ ಅವರಿಗೆ 2024-25 ನೇ ಸಾಲಿನ ‘ಕದಳಿ ಶ್ರೀ’ ಪ್ರಶಸ್ತಿ ಘೋಷಿಸಿ, ಪ್ರಶಸ್ತಿ-ಫಲಕ ನೀಡಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಶರಣ ರಾಚನಗೌಡ ಕೋಳೂರು, ಗೌರವಾಧ್ಯಕ್ಷ ನಾಗನಗೌಡ ಹರವಿ, ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವ ಉಪಸ್ಥಿತರಿದ್ದರು.

ಬಸವ ಕೇಂದ್ರ, ಅಕ್ಕನ ಬಳಗ ಸದಸ್ಯರಿಂದ ಶರಣ ಧರ್ಮ ಪ್ರಜ್ಞೆ ಎಂಬ ಕಿರುರೂಪಕ ಪ್ರದರ್ಶನಗೊಂಡು ಎಲ್ಲರ ಮನ ಗೆದ್ದಿತು.

ಇದೇ ಸಂದರ್ಭದಲ್ಲಿ ಬಸವಾದಿ ಶರಣರ ಹೆಸರುಗಳನ್ನು ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ವಚನ ಪುಸ್ತಕಗಳ ಬಹುಮಾನ ನೀಡಲಾಯಿತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ವೇದಿಕೆ, ಬಸವ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸಹಯೋಗದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆದವು.

ಡಾ. ರೇಖಾ ಪಾಟೀಲ ನಿರೂಪಿಸಿದರು. ಪಾರ್ವತಿ ಪಾಟೀಲ ಸ್ವಾಗತಿಸಿದರು. ಲಲಿತಾ ಬಸನಗೌಡರ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸರ್ವರೂ ಪ್ರಸಾದ ದಾಸೋಹ ಸ್ವೀಕರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *