ರಾಯಚೂರು ನಗರದಲ್ಲಿ ಅದ್ಧೂರಿಯಾಗಿ ನಡೆದ ಬಸವೋತ್ಸವ ಕಾರ್ಯಕ್ರಮ

ರಾಯಚೂರು

ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ ಎರಡು ದಿನಗಳ ಬಸವ ಉತ್ಸವ-2025 ಯಶಸ್ವಿಯಾಗಿ ನಡೆಯಿತು.

ಉತ್ಸವದಂಗವಾಗಿ ಬಸವೇಶ್ವರ ವೃತ್ತದಿಂದ, ಗಾಂಧಿವೃತ್ತದ ಮೂಲಕ ಗಂಜ್ ಕಲ್ಯಾಣ ಮಂಟಪದವರೆಗೆ, ಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ಶರಣು ಶರಣೆಯರ ಪಥಸಂಚಲನ ನಡೆಯಿತು.

ನಂತರ ಕಲ್ಯಾಣ ಮಂಟಪದಲ್ಲಿ ಏಳುನೂರ ಎಪ್ಪತ್ತು ಅಮರ ಗಣಂಗಳಿಗೆ ಶರಣು ಶರಣಾರ್ಥಿಗಳನ್ನು ಸಾಮೂಹಿಕವಾಗಿ ಸಮರ್ಪಿಸಿ, ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ರಾಯಚೂರು ನಗರ ಶಾಸಕರಾದ ಶರಣ ಶಿವರಾಜ ಪಾಟೀಲ ಅವರು ಪಥ ಸಂಚಲನಕ್ಕೆ ಚಾಲನೆ ನೀಡಿ, ಧ್ವಜಾರೋಹಣ ಮಾಡಿ ಜಗತ್ತಿನಲ್ಲಿ ಜಾತ್ಯತೀತ ಧರ್ಮ ಯಾವುದಾದರೂ ಇದ್ದರೆ ಅಂದು ಬಸವಣ್ಣನವರು ಹಾಕಿ ಕೊಟ್ಟ ಲಿಂಗಾಯತ ಧರ್ಮ ಎಂದರು.

ಸಮಾರೋಪ ಕಾರ್ಯಕ್ರಮವನ್ನು ರಾಯಚೂರು ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ರವಿ ಭೋಸರಾಜ್ ಅವರು ಉದ್ಘಾಟನೆ ಮಾಡಿ, ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶಾಂತಪ್ಪ ಕೆ. ಬಸವತತ್ವದ ಬಗ್ಗೆ ಅಭಿಮಾನ ಪೂರ್ವಕವಾಗಿ ಮಾತನಾಡುತ್ತ, ಇನ್ನು ಮುಂದೆ ರಾಯಚೂರಿನಲ್ಲಿ ಒಂದು ಅನುಭವ ಮಂಟಪವನ್ನು ನಮ್ಮ ಕಡೆಯಿಂದ ನಿರ್ಮಾಣ ಆಗಬೇಕು. ಅದರಲ್ಲಿ ನಾವೆಲ್ಲರೂ ಕುಳಿತು ಚರ್ಚೆ ಮಾಡಿ ಸಮಸಮಾಜದ, ಜಾತಿ ಮತ ಧರ್ಮ ಪಂಥ ಹೆಣ್ಣು ಗಂಡು ಮೇಲು ಕೀಳು ಎಂಬ ಭಾವನೆ ತೊರೆದು ಎಲ್ಲರೂ ಬಂದು ಚರ್ಚೆ ಮಾಡುವಂತಾಗಬೇಕು. ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸುವ ಸಲುವಾಗಿ ಬಸವ ಮಂಟಪದ ಅವಶ್ಯಕತೆ ರಾಯಚೂರಿಗೆ ಇದೆ ಎಂದರು.

ರಾಯಚೂರಿನ ಎಲ್ಲಾ ನಾಗರಿಕರ ಪರವಾಗಿ ಯುವ ಮುಖಂಡರಾದ ತಾವು ಬಸವ ತತ್ವದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ನಾನು ಮನವಿ ಮಾಡ್ತೇನೆಂದು ರವಿ ಬೋಸರಾಜು ಅವರಿಗೆ ಹೇಳಿದರು.

ಚಿಂತಕ ವಿಶ್ವರಾಧ್ಯ ಸತ್ಯಂಪೇಟೆಯವರು ಮೂಢನಂಬಿಕೆ ವಿರುದ್ಧ ಮತ್ತು ನಿಜದೇವರ ಬಗ್ಗೆ ಮತ್ತು ಲಿಂಗಾನಂದ ಅಪ್ಪಾಜೀ, ಮಾತೆ ಮಹಾದೇವಿ ಮಾತಾಜೀಯವರ ಸಾಧನೆ ಬಗ್ಗೆ ತಿಳಿಸಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಚನ್ನಬಸವಾಂದ ಸ್ವಾಮೀಜಿಯವರು ಮಾತಾಡಿ, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮತ್ತೊಮ್ಮೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಶಿಫಾರಸ್ಸು ಮಾಡಲು ಮತ್ತು ಬಸವ ಮಂಟಪಕ್ಕೆ ನಿವೇಶನ ನೀಡುವಂತೆ ವೇದಿಕೆ ಮೇಲೆ ಇದ್ದ ಮುಖಂಡರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜಯ ಬಸವನಾಂದ ಸ್ವಾಮೀಜಿ, ಬೀದರ ಬಸವ ಮಂಟಪದ ಸತ್ಯದೇವಿ ಮಾತಾಜೀ ಹಾಗೂ ರಾಜ್ಯದ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು, ಬಸವ ಭಕ್ತರು, ಹೈದರಾಬಾದ್ , ವಿಜಯಪುರ, ಹಂದ್ರಾಳ, ಬೆಳಗಾವಿ, ಮತ್ತಿತರ ಊರುಗಳ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಯಚೂರು ಬಸವ ಕೇಂದ್ರದ ಗೌರವ ಅಧ್ಯಕ್ಷರಾದ ಹರವಿ ನಾಗನಗೌಡರು, ಬಸವಪರ ಸಂಘಟನೆಗಳ ಪದಾಧಿಕಾರಿಗಳು, ವಿಶ್ವ ವಚನ ಫೌಂಡೇಶನ್ ರಾಯಚೂರು ಘಟಕದ ಅಧ್ಯಕ್ಷ ಬೆಟ್ಟಪ್ಪ ಕಸ್ತೂರಿ, ಗೌರವ ಅಧ್ಯಕ್ಷರಾದ ಶರಣೆ ದೇವೇಂದ್ರಮ್ಮ, ರಾಯಚೂರು ನಗರ ಸುತ್ತ ಮುತ್ತಲಿನ ಗ್ರಾಮಗಳ ಬಸವಪರ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಅದ್ದೂರಿಯಾಗಿಸಿದರು, ಅರ್ಥ ಪೂರ್ಣವಾಗಿ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *

ಡಾ. ದೇವೇಂದ್ರಮ್ಮ, ಟ್ರಾಫಿಕ್ ಕಂಟ್ರೋಲರ್ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು