ದಾವಣಗೆರೆ
ಜಾತಿಗೊಂದು ಮಠದಿಂದ ಸಮಾಜ ಕಲುಷಿತ ಎಂಬ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿಯವರ ಹೇಳಿಕೆಯನ್ನು ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ ಖಂಡಿಸಿದೆ.
ಇತ್ತೀಚೆಗೆ ಭದ್ರಾವತಿಯ ವೀರಶೈವ ಸಮಾರಂಭವೊಂದರಲ್ಲಿ ನೀಡಿದ್ದ ಹೇಳಿಕೆಯನ್ನು ರಂಭಾಪುರಿ ಸ್ವಾಮೀಜಿ ಸಾಬೀತು ಪಡಿಸಬೇಕು, ಇಲ್ಲದ್ದಿದ್ದರೆ ಬಹಿರಂಗವಾಗಿ ಆ ಹೇಳಿಕೆ ವಾಪಸ್ ಪಡೆಯಬೇಕು.
ಎರಡೂ ಮಾಡದಿದ್ದರೆ ಹಿಂದುಳಿದ, ದಲಿತ ಮಠಾಧೀಶರೆಲ್ಲ ಸೇರಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
‘ಪಂಚಪೀಠಗಳು ಶೋಷಿತ ಸಮುದಾಯದ ಜನರನ್ನು ಸಮೀಪಕ್ಕೆ ಕರೆದು ಶಿಕ್ಷಣ ಮತ್ತು ಸಂಸ್ಕಾರ ನೀಡಿದ್ದರೆ ಜಾತಿ ಮಠ ಕಟ್ಟಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿರಲಿಲ್ಲ. ಈ ಮಠಗಳ ಪೀಠಾಧಿಪತಿಗಳು ಶೋಷಿತ ಸಮುದಾಯದ ಸ್ವಾಮೀಜಿಗಳ ಜೊತೆಗೂ ಕುಳಿತುಕೊಳ್ಳುವುದಿಲ್ಲ, ಎಂದು ಭಗೀರಥ ಗುರುಪೀಠದ ಪುರಷೋತ್ತಮಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಧಾರ್ಮಿಕ ಅಸ್ಮಿತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಭಕ್ತರೇ ಸೇರಿಕೊಂಡು ಮಠಗಳನ್ನು ಕಟ್ಟಿದ್ದಾರೆ. ಮಠ–ಪೀಠಗಳು ಜಾತಿ ಹೆಸರಿನಲ್ಲಿದ್ದರೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿವೆಯೇ ಹೊರತು ಸಮಾಜ ಕಲುಷಿತಗೊಳಿಸುತ್ತಿಲ್ಲ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂಚಪೀಠದ ಅನೇಕ ಶಾಖಾ ಮಠಗಳು ಪರಿಶಿಷ್ಟ ಜಾತಿ ಹೆಸರಲ್ಲಿ ಸರ್ಕಾರದ ಅನುದಾನ ಪಡೆದಿದ್ದು, ಎಷ್ಟು ಹಣ ಪಡೆದಿವೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲು ಒಕ್ಕೂಟದ ಸದಸ್ಯರು ಆಗ್ರಹ ಪಡಿಸಿದರು.
‘ಬೇಡ ಜಂಗಮದ ಹೆಸರಿನಲ್ಲಿ ಸರ್ಕಾರದ ₹100 ಕೋಟಿಗೂ ಅಧಿಕ ಅನುದಾನ ಬಳಕೆಯಾಗಿದೆ. ಪಂಚಪೀಠಗಳ ಶಾಖಾ ಮಠಗಳೇ ಈ ಅನುದಾನ ಪಡೆದಿವೆ. ಇವು ನಿಜಕ್ಕೂ ಪರಿಶಿಷ್ಟ ಜಾತಿಗೆ ಸೇರಿದ ಮಠಗಳೇ ಎಂಬುದನ್ನು ಸಾಭೀತುಪಡಿಸಿ. ಇಲ್ಲವಾದರೆ, ಸರ್ಕಾರದ ಅನುದಾನ ಪಡೆದಿರುವ ಕುರಿತು ಶ್ವೇತಪತ್ರ ಹೊರಡಿಸಿ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸವಾಲು ಹಾಕಿದರು.
ಕುರುಬ, ವಾಲ್ಮೀಕಿ, ಭೋವಿ, ಮೇದಾರ, ಯಾದವ, ವಾಲ್ಮೀಕಿ, ಕುಂಬಾರ, ಹಡಪದ, ಮಾದಾರ ಸೇರಿದಂತೆ 15ಕ್ಕೂ ಹೆಚ್ಚು ಸಮುದಾಯದ ಮಠಾಧೀಶರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಯಾದವ ಗುರುಪೀಠದ ಶ್ರೀಕೃಷ್ಣ ಯಾದವ ಸ್ವಾಮೀಜಿ, ನಾರಾಯಣಗುರು ಮಹಾಸಂಸ್ಥಾನದ ಆರ್ಯ ರೇಣುಕಾನಂದ ಸ್ವಾಮೀಜಿ, ಹೆಳವ ಗುರುಪೀಠದ ಬಸವ ಬೃಂಗೇಶ್ವರ ಸ್ವಾಮೀಜಿ, ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಹಡಪದ ಗುರುಪೀಠದ ಅನ್ನಧಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಮೇದಾರ ಗುರುಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಹಾಜರಿದ್ದರು.
ಇದೇ ವಿಷಯದ ಮೇಲೆ ರವಿವಾರ ವಚನಾನಂದ ಶ್ರೀಗಳೂ ರಂಭಾಪುರಿ ಶ್ರೀಗಳನ್ನು ಟೀಕಿಸಿದ್ದರು.
ಇದು ಒಳ್ಳಯ ಬೆಳವಣಿಗೆ, ಬಸವಾದಿ ಶರಣರ ಸಮಾಜವಾದ ಮುನ್ನೆಲೆಗೆ ಬರುವಂತಾಗಲಿ.
ಎದ್ದೇಳಿ… ಲಿಂಗಾಯತ ಎಲ್ಲ ಒಳಪಂಗಡದ (ದಲಿತ ಹಾಗೂ ಹಿಂದುಳಿದ ) ಮಠಾಧೀಶರೆದುರಿಗೆ ಒಂದು ದೊಡ್ಡ ಸವಾಲಿದೆ. ನಮ್ಮ ಜನ ಬಸವ – ಬಸವಾದಿ ಶರಣರ ಭಕ್ತರಾಗಬೇಕು.ಆ ಪಂಚಪೀಠಗಳು ಹಾಗೂ ಅವರ ಶಾಖಾ ಮಠಗಳಿಂದ ದೂರಿರಲು ಜನರಿಗೆ ಕರೆ ನೀಡಬೇಕು.