ಚಿತ್ರದುರ್ಗ
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಂಚಪೀಠಗಳ ಶೃಂಗ ಸಭೆಯಲ್ಲಿ ಪೂಜ್ಯ ರಂಭಾಪುರಿ ಶ್ರೀ ಜಾತಿಮಠಗಳಿಂದ ಸಮಾಜ ಕಲುಷಿತವಾಗುತ್ತಿವೆ ಎಂದು ಹೇಳಿದ್ದರು. ಅದಕ್ಕೀಗ ಹರಿಹರ ಪಂಚಮಸಾಲಿ ಪೀಠದ ಪೂಜ್ಯ ವಚನಾನಂದ ಶ್ರೀಗಳಿಂದ ತೀಕ್ಷ್ಣ ಪ್ರತಿಕ್ರಿಯೆ ಬಂದಿದೆ.
ನಗರದಲ್ಲಿ ರವಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತ ವಚನಾನಂದ ಶ್ರೀ ರಂಭಾಪುರಿ ಶ್ರೀಗಳಂತಹ ಕಲುಷಿತ ಮನಸ್ಥಿತಿ ಇದ್ದವರಿಂದ ಮಾತ್ರ ಈ ರೀತಿಯ ಮಾತು ಸಾಧ್ಯ ಎಂದು ಹೇಳಿದರು.
ಜಾತಿ ಪೀಠಗಳು ಜಾತ್ಯಾತೀತ ತತ್ವ ಅಳವಡಿಸಿಕೊಂಡಿವೆ. ಪಂಚಮಸಾಲಿ ಪೀಠಗಳ ಉಗಮಕ್ಕೆ ಕಾರಣವೇನು ಎಂದು ರಂಭಾಪುರಿ ಶ್ರೀಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಜಾತಿ ಮಠಗಳಿಂದ ಸಮಾಜ ಕಲುಷಿತ ಎನ್ನುವ ನೈತಿಕ ಹಕ್ಕಿಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು.
“2003ರಲ್ಲಿ ಪಂಚಪೀಠದವರು ಬೇಡ ಜಂಗಮ, ದಲಿತರು, ಎಸ್ಸಿ ಎಂದಿದ್ದರು. ವಾಜಪೇಯಿ, ಅಡ್ವಾಣಿ ಬಳಿ ಹೋಗಿ ಪ್ರಮಾಣಪತ್ರ ಕೇಳಿದ್ದರು. ಪಂಚಪೀಠದವರು ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೇಳಿರಲಿಲ್ಲ. ತಮ್ಮ ಜನಾಂಗವಾದ ಬೇಡ ಜಂಗಮರಿಗೆ ಮಾತ್ರ ಮೀಸಲಾತಿ ಬೇಕೆಂದು ಕೇಳಿದ್ದರು,” ಎಂದು ವಚನಾನಂದ ಶ್ರೀ ಹೇಳಿದರು.
“ರಾಜ್ಯದಲ್ಲಿ ಪಂಚಪೀಠದವರ ಜನಾಂಗ ತುಂಬಾ ಕಡಿಮೆಯಿದೆ, ಊರಿಗೆ ಎರಡೋ ಮೂರೋ ಮನೆಗಳಿವೆ. ಇವರು ಪೂಜೆ ಪುನಸ್ಕಾರ ಮಾಡುವ ಜನಾಂಗದ ಶ್ರೀಗಳು ಅಷ್ಟೇ. ಲಿಂಗಾಯತರಲ್ಲಿ ಶೇ.80ರಷ್ಟು ಪಂಚಮಸಾಲಿ ಜನ. ಪಂಚಪೀಠದವರದ್ದು ಮೈಕ್ರೋ ಜನಾಂಗ, ಪಂಚಮಸಾಲಿಗಳದ್ದು ಮ್ಯಾಕ್ರೋ ಜನಾಂಗ.
ಜಾತಿಗಣತಿ ವಿಚಾರವಾಗಿ ಶೃಂಗಸಭೆ ತೆಗೆದುಕೊಂಡ ನಿರ್ಣಯಕ್ಕೂ ಪಂಚಮಸಾಲಿ ಸಮಾಜಕ್ಕೂ ಸಂಬಂಧವಿಲ್ಲಾ. ಆಗಸ್ಟ್ 10ಕ್ಕೆ ಪಂಚಮಸಾಲಿ ಪೀಠದಲ್ಲಿ ಸಮಾಜದ ಸಭೆ ಇದೆ. ಅಲ್ಲಿ ಜಾತಿಗಣತಿಯಲ್ಲಿ ಏನು ಬರೆಸಬೇಕೆಂಬ ಸ್ಪಷ್ಟ ಸಂದೇಶ ನೀಡುತ್ತೇವೆ,” ಎಂದು ಹೇಳಿದರು.