ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಘೋಷಣೆಗೆ ಪ್ರಸ್ತಾವನೆ: ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ:

ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ವೀರವನಿತೆ, ಕಿತ್ತೂರಿನ ರಾಣಿ‌ ಚನ್ನಮ್ಮಳ ಸಮಾಧಿಯ ಸ್ಥಳವನ್ನು ರಾಷ್ಟ್ತೀಯ ಸ್ಮಾರಕವಾಗಿ ಘೋಷಿಸಲು  ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು‌ ದಿನಗಳ ಕಾಲ ನಡೆದ 201 ನೇ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ ವಿಮಾನ‌ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರು ಇಡಲು ಕೇಂದ್ರಕ್ಕೆ ಪತ್ರ ಬರೆದು ಒಂದು‌ ವರ್ಷವಾದರೂ ಕೇಂದ್ರ‌ ಸರಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಕ್ರಾಂತಿಯ ಕಹಳೆ ಕಿತ್ತೂರು ರಾಣಿ ಚನ್ನಮ್ಮ 1824 ರ ಅಕ್ಟೋಬರ್ 23 ರಂದು ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಜಯಗಳಿಸಿದ್ದರು ಆ ಜಯದ ಸವಿನೆನಪಿಗಾಗಿ ಪ್ರತಿವರ್ಷ ಕಿತ್ತೂರು ಉತ್ಸವವನ್ನು  ಆಚರಿಸಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತಲೂ ಮೊದಲೆ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ, ಹೋರಾಟಕ್ಕೆ ಹೆದರಿ  ಶರಣಾಗತಿಯಾಗುವ  ಬದಲು  ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ದರಾಗಿ ಮುನ್ನುಗಿದ್ದು ಕಿತ್ತೂರಿನ ರಾಣಿ ಚನ್ನಮ್ಮ, ರಾಯಣ್ಣ ಮತ್ತು ಅಮಟೂರ‌ ಬಾಳಪ್ಪನವರು ಇಂದಿಗೂ ನಮಗೆ  ಸ್ವಾಭಿಮಾನದ ಸಂಕೇತವಾಗಿದ್ದಾರೆ. ಬ್ರಿಟಿಷ ಇಸ್ಟ್ ಇಂಡಿಯಾ ಕಂಪನಿಗಾಗಿ ದಕ್ಷಿಣ ಭಾರತದಲ್ಲಿ ಕೆಲಸ ಮಾಡುತ್ತಿದ ಬ್ರಿಟಿಷ್ ಅಧಿಕಾರಿ ಸೈಂಟ್ ಜಾನ್ ಥ್ಯಾಕರೆಯನ್ನು ಕೊಂದು ಬ್ರಿಟೀಷರ ವಿರುದ್ಧ ವಿಜಯ ಸಾಧಿಸಿದ್ದು ಚನ್ನಮ್ಮನ ಸಾಧನೆಯ‌ ಕಿರೀಟವಾಗಿದೆ.

ಕೆಚ್ಚೆದೆಯ ಹೋರಾಟಗಾರ್ತಿ ರಾಣಿ  ಚನ್ನಮ್ಮನ ಹೋರಾಟದ ಸಂದೇಶ ನಾಡಿನ ಜನತೆಗೆ  ತಿಳಿಸುವುದಕ್ಕಾಗಿ 2017 ರಲ್ಲಿ ನಮ್ಮ ರಾಜ್ಯ ಸರ್ಕಾರ  ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆರಂಭಿಸಿತು ಎಂಬುದೇ ನಮಗೆಲ್ಲ  ಹೆಮ್ಮೆಯ ವಿಷಯವಾಗಿದೆ.  ಚೆನ್ನಮ್ಮನ ಸಾಹಸಗಾಥೆ  ತಿಳಿಸಲೆಂದೆ ಜಯಂತಿ ಆರಂಭಿಸಲಾಯಿತೇ ಹೊರತು ರಾಜಕೀಯ ಕಾರಣಕ್ಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು

ಸಂಗೊಳ್ಳಿ ರಾಯಣ್ಣನನ್ನು ಸೆರೆಹಿಡಿಯಲು ನಮ್ಮವರಿಂದಲೆ ಒಳಸಂಚು ರೂಪಿಸಲಾಗಿತ್ತು ರಾಯಣ್ಣರ ಬಗೆಗಿನ  ಮಾಹಿತಿಗಳು ಬ್ರಿಟೀಷರಿಗೆ ರವಾನೆ ಮಾಡಿ   ನಮ್ಮಲ್ಲಿಯೇ ಒಡೆದಾಳುವ ನೀತಿ ಸೃಷ್ಟಿಸಿದರು. ಸ್ವಾತಂತ್ರ್ಯಕ್ಕಾಗಿ ವೀರಾವೇಷದಿಂದ ಬ್ರಿಟೀಷರ ವಿರುದ್ಧ ಟಿಪ್ಪುಸುಲ್ತಾನ್ ಕೂಡ ಹೋರಾಡಿದ್ದರು.‌ ಟಿಪ್ಪು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಯುದ್ಧಭೂಮಿಯಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ.

ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸವನ್ನು ವ್ಯವಸ್ಥಿತವಾಗಿ  ಮಾಡಲಾಗುತ್ತದೆ. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕೆ ಹೊರೆತು ದ್ವೇಷಿಸಬಾರದು, ಯಾವುದೇ ಧರ್ಮದಲ್ಲಿಯೂ ದ್ವೇಷವನ್ನು ಬೋಧಿಸಿಲ್ಲ ಮನುಜ ಪ್ರೀತಿಯ ಸಾರವನ್ನೆ ತಿಳಿಸಲಾಗಿದೆ‌. ಆದ್ದರಿಂದ ಸಮಾಜ ಒಡೆಯುವಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.  ಈ ಉತ್ಸವಗಳನ್ನು ಏಕೆ  ಆಚರಿಸಲಾಗುತ್ತಿದೆ ಎಂದರೆ ಹಿಂದಿನ ಇತಿಹಾಸದ ಕುರಿತು ತಿಳಿಸಲೆಂದು ಮುಖ್ಯಮಂತ್ರಿ ಹೇಳಿದರು.

ವೀರಶೈವ ಲಿಂಗಾಯತ  ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಶಾಸಕರೂ ಆಗಿರುವ ವಿಜಯಾನಂದ ಕಾಶಪ್ಪನವರ ಮಾತನಾಡಿ, 25 ವರ್ಷಗಳ ಬೇಡಿಕೆಯನ್ನು ವೀರವನಿತೆ ರಾಣಿ ಚೆನ್ನಮ್ಮನ ಜಯಂತ್ಯೋತ್ಸವ ಆಚರಣೆ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸಿದ್ದು. ಸಮಾನತೆಯ ಸಾರಿದ ಕಲ್ಯಾಣದ ಕ್ರಾಂತಿ  ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು‌ ಘೋಷಿಸಿದ್ದು ಮುಖ್ಯಮಂತಿಗಳೆ.

ಚನ್ನಮ್ಮನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ರಾಜ್ಯ ಸರಕಾರದ ವತಿಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳಿಸಿರುವುದು ಕೂಡ ನಮ್ಮ ನಾಡಿನ ಹೆಮ್ಮೆಯ ರಾಜಕಾರಣಿ  ಸಿದ್ದರಾಮಯ್ಯನವರು. ಈ ಎಲ್ಲಾ ಕಾರ್ಯಗಳಿಗಾಗಿ ಇಂದು ಸಮಾಜದ ಪರವಾಗಿ ಅವರಿಗೆ ನಾನು  ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾಶಪ್ಪನವರ ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ, ಚನ್ನಮ್ಮನ  ಕಿತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ. ಕಿತ್ತೂರಿನ ಐತಿಹಾಸಿಕ ಸ್ಥಳಗಳ ಜೀರ್ಣೊದ್ಧಾರಕ್ಕೆ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿದರು. ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮೀಜಿ, ಕಾದರವಳ್ಳಿ‌ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರರು ಸಾನಿಧ್ಯ ವಹಿಸಿದ್ದರು. ಪ್ರಭಾರ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಸ್ವಾಗತಿಸಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಕರ್ನಾಟಕ ವಿಧಾನಸಭೆಯ ಸರಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ಆಸಿಫ್(ರಾಜು) ಸೇಠ, ವಿಶ್ವಾಸ್ ವೈದ್ಯ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ವಾಯವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನಿಲ್‌ ಹನಮಣ್ಣವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ್ ನಾವಲಗಟ್ಟಿ, ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
Leave a comment

Leave a Reply

Your email address will not be published. Required fields are marked *