ಭಾರತದಲ್ಲಿ ಒಂದೇ ಧರ್ಮ, ಒಂದೇ ರಾಷ್ಟ್ರ ಎನ್ನುವುದು ಮೂರ್ಖತನ: ಗದಗ ಶ್ರೀ
ಕೂಡಲಸಂಗಮ
ಲಿಂಗಾಯತ ಮಠಾಧೀಶರು, ಬಸವಪರ ಸಂಘಟನೆಗಳು ಕೂಡಿ ಪ್ರತಿವರ್ಷ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಣೆ ಮಾಡಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಮಂಗಳವಾರ ಹೇಳಿದರು.
ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಿದ ಬಸವ ಕಾರ್ಯಕರ್ತರನ್ನು ಅಭಿನಂದಿಸಲು ಪಟ್ಟಣದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಆಯೋಜಿಸಿದ್ದ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ರಾಷ್ಟ್ರ, ರಾಜ್ಯಮಟ್ಟದ ನಾಯಕರನ್ನು ಆಹ್ವಾನಿಸಿ ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಅಥವಾ ಕರ್ನಾಟಕದ ಹೊರಗೂ ಎಲ್ಲಾ ಪೂಜ್ಯರು, ಸಂಘಟನೆಗಳು ಸೇರಿ ರಾಷ್ಟ್ರಮಟ್ಟದ ಬಸವ ಜಯಂತಿ ಆಚರಿಸಬೇಕೆಂದು ಹೇಳಿದರು. ಎಲ್ಲ ಲಿಂಗಾಯತ ಒಳಪಂಗಡಗಳನ್ನು ಸೇರಿಸಿಕೊಂಡು, ಯಾವುದೇ ಭೇದಭಾವ ಇಲ್ಲದೇ ಬಸವ ಸಂಸ್ಕೃತಿ ಬಿಂಬಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ಜೊತೆಗೆ ಬಸವ ಸಂಸ್ಕೃತಿ ಅಭಿಯಾನವನ್ನು ಗ್ರಾಮ, ಹೋಬಳಿ, ತಾಲೂಕಾ ಮಟ್ಟದಲ್ಲಿ ಆಯೋಜನೆ ಮಾಡಬೇಕು ಎಂದು ಹೇಳಿದರು.
ಇಂದಿನ ಯುವಕರಿಗೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ದೊರೆಯುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು, ಜಾಗೃತಿ ಮೂಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.

ಗದಗ ತೋಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಬಹುತ್ವ ಸಂಸ್ಕೃತಿ ಸಾರುವ ಭಾರತದಲ್ಲಿ ಒಂದೇ ಧರ್ಮ, ಒಂದೇ ರಾಷ್ಟ್ರ ಎಂದು ಹೇಳುವುದು ಮೂರ್ಖತನದ ಪರಮಾವಧಿಯಾಗಿದೆ. ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕೆಲವರು ಅಸೂಹೆಪಟ್ಟುಕೊಂಡು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಮಠಾಧಿಪತಿಗಳಾದ ನಾವು ಸಂಯಮದಿಂದ ವರ್ತಿಸಿ ಅಭಿಯಾನ ಮಾಡಿದೆವು. ಬಸವತತ್ವ, ಸಂಸ್ಕೃತಿ ತಿಳಿಸಿಕೊಡುವ ಪ್ರಯತ್ನ ಮಾಡಿದೆವು. ಆರೋಪ, ಟೀಕೆಗಳನ್ನು ಬಂಡೆಗಲ್ಲಿನಂತೆ ನಿಂತು ಎದುರಿಸುವ ಶಕ್ತಿ ಪಡೆದುಕೊಳ್ಳೋಣ ಎಂದರು.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಮಠಾಧೀಶರು ಬಸವತತ್ವ ಆಧಾರದ ಮೇಲೆ ಮಠಗಳನ್ನು ನಡೆಸುತ್ತೇವೆ ಎಂದು ನಾವು ಮೊದಲು ಗಟ್ಟಿ ನಿರ್ಧಾರಕ್ಕೆ ಬರಬೇಕು. ಪ್ರತಿತಿಂಗಳು ಆಯಾ ಜಿಲ್ಲೆಯಲ್ಲಿ ಮಠಾಧಿಪತಿಗಳಿಂದ ಒಂದಾದರೂ ಬಸವತತ್ವದ ಚಟುವಟಿಕೆಗಳು ನಡೆಯಬೇಕು. ಡಿಸೆಂಬರ್ 27 ರಿಂದ 29ರ ವರೆಗೆ ಲಿಂಗಾಯತ ನಿಜಾಚರಣೆಯ ಕುರಿತು 35 ವರ್ಷದೊಳಗಿನವರಿಗೆ ಕಮ್ಮಟವನ್ನು ಸಾಣೆಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ, ಬಸವಭಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ವಿಫಲಗೊಳಿಸಲು ಹುಬ್ಬಳಿಯಲ್ಲಿ ಏಕತಾ ಸಮಾವೇಶ, ಬಸವ ಕಲ್ಯಾಣದಲ್ಲಿ ದಸರಾ ದರ್ಬಾರ ಎಂಬ ಎರಡು ಕಾರ್ಯಕ್ರಮಗಳು ನಡೆದು ವಿಫಲಗೊಂಡವು. ಅಡೆತಡೆ, ವೈರುಧ್ಯದ ನಡುವೆಯೂ ಯಶಸ್ವಿಯಾಗಿ ವಿಜೃಂಭಣೆಯಿಂದ ಅಭಿಯಾನ ನಡೆದಿದೆ. ಅಭಿಯಾನ ಭವ್ಯ ಯಶಸ್ಸು ಕಂಡು ಇತಿಹಾಸ ನಿರ್ಮಿಸಿದೆ. ಲಿಂಗಾಯತ ಸಂಘಟನೆಗಳು ಏಕೀಕೃತವಾಗಿ ಬೆಳೆಯಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಬಸವ ಸಂಘಟನೆ ಮಾಡಬೇಕು ಎಂದರು.
ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಅಭಿಯಾನ ಯಶಸ್ಸಿನ ಹಿಂದೆ ಅನೇಕ ಹಿರಿಯ ಶ್ರೀಗಳು ತಳಹದಿ ಹಾಕಿ ಹೋಗಿದ್ದನ್ನು ನಾವು ಮರೆಯಬಾರದು. ಇಂಥ ದೊಡ್ಡ ಅಭಿಯಾನ ಮಾಡಲು ದೊಡ್ಡ ಶಕ್ತಿ ಅವರು ನೀಡಿ ಹೋಗಿದ್ದಾರೆ ಎಂದರು.


ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ಬಸವ ಸಂಸ್ಕೃತಿ ಎಂಬ ಅಭಿಯಾನದ ಮಳೆ ಬಿದ್ದು ಎಲ್ಲರೂ ಚೇತರಿಸಿಕೊಳ್ಳುವಂತಾಯಿತು. ಯಾರು ಏನೇ ನಿಂದನೆ ಮಾಡಿದರೂ ವಿಚಲಿತರಾಗದಿರೋಣ. ಬಸವ ಕಾರ್ಯದಲ್ಲಿ ಒಂದಾಗೋಣ ಎಂದರು.
ಪ್ರಾಸ್ತಾವಿಕವಾಗಿ ಹಂದಿಗುಂದದ ಶಿವಾನಂದ ಸ್ವಾಮೀಜಿ, ಮನಗುಂಡಿಯ ಬಸವಾನಂದ ಸ್ವಾಮೀಜಿ ಮಾತನಾಡಿದರು. ಮುದಗಲ್ಲನ ಮಹಾಂತ ಸ್ವಾಮೀಜಿ ನಿರೂಪಿಸಿದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು, ಆಳಂದದ ಕೊರಣೇಶ್ವರ ಸ್ವಾಮೀಜಿ, ಭಾರತಿ ಅಪ್ಪಣ್ಣ ಸ್ವಾಮೀಜಿ, ಸಾಹಿತಿ ಟಿ.ಆರ್. ಚಂದ್ರಶೇಖರ, ಬಸವರಾಜ ಧನ್ನೂರ, ಬಸವರಾಜ ರೊಟ್ಟಿ, ಎಸ್.ಎನ್. ಕೆಂಪಗೌಡರ ಮುಂತಾದವರು ಇದ್ದರು.
ಸಮಾರಂಭದಲ್ಲಿ ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಜಿಲ್ಲೆಗಳ ಬಸವಪರ ಸಂಘಟನೆಗಳ ನೂರಾರು ಶರಣ ಬಂಧುಗಳನ್ನು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಸನ್ಮಾನಿಸಲಾಯಿತು. ಆರಂಭದಲ್ಲಿ ಬಸವಪುತ್ಥಳಿಗೆ ಮಠಾಧೀಶರು, ಗಣ್ಯರು ಪುಷ್ಪಾರ್ಪಣೆ ಮಾಡಿ ಸಮಾರಂಭಕ್ಕೆ ಚಾಲನೆ ನೀಡಿದರು.

🙏🙏
ನಾನು ಬಾಗವಹಿಸಿ, ಕಾರ್ಯಕ್ರಮ ವಿಕ್ಷಿಸಿದೆ ಬಹಳ ಸಂತೋಷವಾಯಿತು 🙏
ಅಕ್ಟೋಬರ್ ೫ ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಸಮಾರೋಪ ಸಮಾರಂಭದಲ್ಲಿ ಭಾಗಿ ಆಗಿದ್ದೆ. ಬಸವ ತತ್ವದ ಪಾಲಕರ ಸಂಖ್ಯೆ ಕಂಡು ಬೆರಗಾದೆನು. ತುಂಬಾ ಸಂತೋಷವಾಯಿತು.
ಹೌದು ನಾವೆಲ್ಲರು ಲಿಂಗಾಯತರು ಜೈ ಬಸವೇಶ್ ಜೈ ಲಿಂಗಾಯತ
ಈ ದೇಶವು ಬಹು ಸಂಸ್ಕೃಯದು ಎಂಬುದು ಏಕ ಸಂಸ್ಕೃತಿಯೆಂದು ಬಿಂಬಪಿಸುವ ಮನುವಾದಿಗಳಿಗೆ ತಿಳಸ ಬೇಕಾಗಿದೆ.