ದಾವಣಗೆರೆ
ಪಂಚಾಚಾರ್ಯರು ಹೇಳುತ್ತಿರುವ ರೇಣುಕಾಚಾರ್ಯರು ತಂದೆ-ತಾಯಿ ಇಲ್ಲದೆ ಹುಟ್ಟಿದ ಕಾಲ್ಪನಿಕ ಶಿಶುವಾಗಿದ್ದಾರೆ. ಅವರು ಯಾವುದೇ ದಾಖಲೆ ಇಲ್ಲದೆ ಇರುವ ಹಕ್ಕುಪತ್ರದಂತೆ ಎಂದು ಇತಿಹಾಸ ಉಪನ್ಯಾಸಕ ಆನಂದಪ್ಪನವರು ಅಭಿಪ್ರಾಯಪಟ್ಟರು.
ಅವರು ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಆದಿಗುರು ರೇವಣಸಿದ್ಧರ ಜಯಂತಿ ಆಚರಣೆ ಸಂದರ್ಭದಲ್ಲಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಕಾಲ್ಪನಿಕ ರೇಣುಕಾಚಾರ್ಯರ ಜಯಂತಿಯನ್ನು ಮಾಡುತ್ತಿರುವ ಸರ್ಕಾರದ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು ರೇವಣಸಿದ್ಧರು, ಕರ್ನಾಟಕ ಆಂದ್ರ ಮಹಾರಾಷ್ಟ್ರ ಭಾಗದಲ್ಲಿ ಸಂಚರಿಸಿ ಕಲ್ಯಾಣದ ಚಳುವಳಿಗೆ ಭೂಮಿಕೆ ಸಿದ್ಧಪಡಿಸಿದವರು ಎಂದರು.

ಅಪಾರ ವಿದ್ವಾಂಸರಾಗಿದ್ದವರು ರೇವಣಸಿದ್ಧರು. ತರಳಬಾಳು ಜಗದ್ಗುರು ಬೃಹನ್ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರು, ಶಿವಯೋಗಿ ಸಿದ್ಧರಾಮೇಶ್ವರರು ಸೇರಿದಂತೆ ಅನೇಕ ಶರಣರಿಗೆ ಅವರು ಸ್ಪೂರ್ತಿಯಾಗಿದ್ದರು.
ಅನೇಕ ಶರಣರು ವಚನಗಳಲ್ಲಿ ರೇವಣಸಿದ್ಧರನ್ನು ಸ್ಮರಿಸಿಕೊಂಡಿದ್ದಾರೆ. ರೇವಣಸಿದ್ಧರ ಪತ್ನಿ ರೇಕಮ್ಮ ವಚನಗಳನ್ನು ಬರೆದಿದ್ದಾರೆ ಎಂದರು.
ದಾವಣಗೆರೆಯಲ್ಲಿ ಹರ್ಡೇಕರ್ ಮಂಜಪ್ಪನವರಿಂದ ಪ್ರಾರಂಭವಾದ ಬಸವ ಜಯಂತಿ ಕಾರ್ಯಕ್ರಮ ವಿಶ್ವವ್ಯಾಪಿಯಾಗಿ ಬೆಳೆದಿದೆ. ಈಗ ಅದೇ ರೀತಿ ರೇವಣಸಿದ್ಧರ ಜಯಂತಿ ದಾವಣಗೆರೆಯಲ್ಲಿ ಪ್ರಾರಂಭ ಆಗಿದೆ, ಅದು ವಿಶ್ವವ್ಯಾಪಿಯಾಗಿ ಬೆಳೆಯಲಿ ಎಂದು ವಿಶ್ವೇಶ್ವರಯ್ಯ ಆಶಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಹದಡಿ ಷಣ್ಮಖಪ್ಪ, ರೇವಣಸಿದ್ಧರು ಯಾವುದೇ ಜಾತಿಗೆ ಸೀಮಿತ ಅಲ್ಲ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಶರಣ ಆವರಗೆರೆ ರುದ್ರಮುನಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ರುದ್ರೇಗೌಡ ಗೋಪನಾಳ, ಕಕ್ಕರಗೊಳ್ಳದ ಪರಮೇಶ್ವರಪ್ಪ ಸೇರಿದಂತೆ ಅನೇಕ ಮುಖಂಡರು ಭಾಗವಹಿದ್ದರು.