ರೇಣುಕರಹಿತ ಬಸವಜಯಂತಿ ಆಚರಣೆ: ಲಿಂಗಾಯತ ಮಹಾಸಭಾ ಸ್ವಾಗತ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

ಮಹಾತ್ಮ ಬಸವೇಶ್ವರರ ಜಯಂತಿ ಜೊತೆಯಲ್ಲಿ ಕಾಲ್ಪನಿಕ ಪುರುಷ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಬೇಕೆಂಬ ಆದೇಶವನ್ನು ಹಿಂಪಡೆದಿರುವ ಅಖಿಲ ಬಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿಲುವನ್ನು ಲಿಂಗಾಯತ ಮಹಾಸಭಾ ಸ್ವಾಗತಿಸಿದೆ.

ಶರಣ ಸಮಾಜದಲ್ಲಿ ಕೋಲಾಹಲ ಸೃಷ್ಟಿಸಿದ್ದ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರಿಗೆ ಇನ್ನಾದರೂ ಬಸವಪ್ರಜ್ಞೆ ಜಾಗೃತವಾಗಲಿ ಎಂದು ಮಹಾಸಭಾ ಅಧ್ಯಕ್ಷ ಎಮ್.ಎಸ್. ಮಂಜುನಾಥ್ ತಿಳಿಸಿದ್ದಾರೆ.

ಬಸವ ಜಯಂತಿಯ ಜೊತೆ ರೇಣುಕರ ಜಯಂತಿಯನ್ನು ಆಚರಿಸಲು ಆದೇಶಿಸಿ ರಾಜ್ಯಾಧ್ಯಕ್ಷ ಶಂಕರ ಬಿದರಿ ಕಳಿಸಿದ್ದ ಸುತ್ತೋಲೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹಿಂದೆ ಪಡೆದು, ಇಲ್ಲಿಯತನಕ ಆಚರಿಸುತ್ತಿದ್ದ ರೀತಿಯಲ್ಲೇ ಬಸವ ಜಯಂತಿ ಆಚರಿಸುವಂತೆ ತಿಳಿಸಿರುವುದು ಗೊಂದಲ ನಿವಾರಿಸಿದಂತಾಗಿದೆ ಎಂದು ತಿಳಿಸಿದ್ದಾರೆ.

ಬಿದರಿಯವರ ಸುತ್ತೋಲೆ ಸಮಾಜದ ವಿವಿಧ ಪಂಗಡಗಳ ಮಧ್ಯೆ ದೊಡ್ಡ ಘರ್ಷಣೆ ಹುಟ್ಟುಹಾಕಿತ್ತು. ನಾವೀಗ ಅದನ್ನು ಮರೆತು ಮುಂದೆ ಒಗ್ಗಟ್ಟಾಗಿ ನಡೆಯಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಬೇಕೆಂದು ಆದೇಶ ನೀಡಿದ್ದರೂ ಸಹ, ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣ, ಪೊಲೀಸ್‌ ಠಾಣೆಗಳು, ಗ್ರಾಮಪಂಚಾಯಿತಿ, ತಾಲ್ಲೂಕು ಪಂಚಾಯತಿ, ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧ ಕಚೇರಿಗಳಲ್ಲಿ ಇದುವರೆಗೂ ಬಸವಣ್ಣನವರ ಭಾವಚಿತ್ರ ಅಳವಡಿಸದಿರುವುದು ಖಂಡನೀಯ ಎಂದರು.

ಈ ಬಾರಿ ಬಸವ ಜಯಂತಿಯನ್ನು ಕೇಂದ್ರ ಸರ್ಕಾರ ಆಚರಣೆ ಮಾಡಲು ಮುಂದಾಗಿರುವುದು ಅಭಿನಂದನೀಯ. ಪ್ರಧಾನಿ ಮೋದಿಯವರು ನೂತನ ಸಂಸತ್‌ ಭವನದ ಮುಂದೆ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.

ಜಾತ್ಯಾತೀತ ಬಸವಜಯಂತಿ :
ಮಂಡ್ಯ ಜಿಲ್ಲಾಡಳಿತ ಜಾತ್ಯಾತೀತವಾಗಿ ಎಲ್ಲಾ ಸಮುದಾಯದ ಮುಖಂಡರನ್ನು ಪೂರ್ವಭಾವಿ ಸಭೆಗೆ ಆಹ್ವಾನಿಸಿ ಬಸವ ಜಯಂತಿ ಆಚರಿಸಬೇಕಿತ್ತು, ಆದರೆ ಒಂದು ಸಮುದಾಯದ ಸಂಘಟನೆಯ ಹೆಸರನ್ನಷ್ಟೇ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಲೋಪವೆಸಗಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಲಾಮಂದಿರದವರೆಗೆ ಪ್ರತಿವರ್ಷ ನಡೆಯುತ್ತಿದ್ದ ಬಸವಣ್ಣನವರ ಜಯಂತಿಯ ಮೆರವಣಿಗೆಯನ್ನು ರದ್ದುಗೊಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಎಂದು ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನಪ್ಪ ಸಮಾಜ ಸೇವಕರು, ಎಂ. ಶಿವಕುಮಾರ್ ಅಧ್ಯಕ್ಷರು ಕಾಯಕಯೋಗಿ ಫೌಂಡೇಶನ್, ಗುರುಪ್ರಸಾದ್ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ, ಉಪಾಧ್ಯಕ್ಷರು ಮೆಣಸಗೆರೆ ಶಿವಲಿಂಗಪ್ಪ , ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ ಸುಂಡಳ್ಳಿ, ಸೋಮಶೇಖರ್ ಎಲ್. ಡಿ, ನಂದೀಶ್ ಲಾಳನಕೆರೆ, ಕೊಕ್ರೆ ಬೆಳ್ಳೂರು, ಶಿವಶಂಕರ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *