ಸಿದ್ಧೇಶ್ವರ ಶ್ರೀಗಳ ಮೇಲೂ ತಮ್ಮ ‘ಆಡು ಭಾಷೆ’ ಬಳಸುತ್ತಾರಾ: ಸಚಿವರ ಪ್ರಶ್ನೆ
ವಿಜಯಪುರ
ಆರ್‌ಎಸ್‌ಎಸ್ ನೋಂದಣಿಯಾಗದಿದ್ದರೂ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ದೊಡ್ಡ ದೊಡ್ಡ ಪ್ಯಾಲೇಸ್ ಕಟ್ಟಿದ್ದಾರೆ. ಅದೇ ಕಾಂಗ್ರೆಸ್ ಕಟ್ಟಿದ್ದರೆ ಏನು ಪ್ರತಿಕ್ರಿಯೆ ಬರುತ್ತಿತ್ತು, ಎಂದು ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರಶ್ನಿಸಿದರು.
ಇಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತ ಆರ್‌ಎಸ್‌ಎಸ್ ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾಗಿಲ್ಲ. ಸ್ವಾತಂತ್ರೃ ಸಿಗದೇ ಇದ್ದರೆ ಇವರೆಲ್ಲ ಇಷ್ಟೊಂದು ಮಾತನಾಡುತ್ತಿದ್ದರಾ? ಅಂಬೇಡ್ಕರ್ ಸಂವಿಧಾನ ರಚಿಸದೇ ಹೋಗಿದ್ದರೆ ಮಾತನಾಡುತ್ತಿದ್ದರಾ? ಆರ್‌ಎಸ್‌ಎಸ್ ಬ್ರಿಟಿಷರೊಂದಿಗೆ ಮಿಲಾಪಿಯಾಗಿತ್ತು ಎಂದರು.
ಸರ್ಕಾರಿ ಶಾಲೆ-ಕಾಲೇಜ್ ಹಾಗೂ ಕಚೇರಿಗಳ ಆವರಣದಲ್ಲಿ ಯಾವುದೇ ಸಂಘಟನೆಗಳಿಗೂ ಅವಕಾಶ ಇಲ್ಲ. ಕೇವಲ ಆರ್‌ಎಸ್‌ಎಸ್ ಮಾತ್ರವಲ್ಲ, ಲಿಂಗಾಯತವಾಗಲಿ, ದಲಿತ ಸಂಘಟನೆಯಾಗಲಿ ಯಾವುದೇ ಧಾರ್ಮಿಕ ಅಥವಾ ಇನ್ನಿತರೆ ಸಂಘಟನೆಗಳಾದರೂ ಅಷ್ಟೆ. ಕಾನೂನು ಎಲ್ಲರಿಗೂ ಅನ್ವಯ ಎಂದು ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಕನ್ನೇರಿ ಸ್ವಾಮಿ
ಸಿದ್ಧೇಶ್ವರ ಸ್ವಾಮೀಜಿ ಬರೆದಿರುವ ‘ಜಾಗತಿಕ ಧರ್ಮಗಳ ಸಾರ ಸೂಕ್ತಿಗಳು’ ಎಂಬ ಪುಸ್ತಕದಲ್ಲಿ ಜಾಗತಿಕ ಲಿಂಗಾಯತ ಧರ್ಮಗಳ ಸಾಲಿನಲ್ಲಿ ಲಿಂಗಾಯತವನ್ನೂ ಸೇರಿಸಿದ್ದಾರೆ. ಹಾಗಂತ ಕನ್ನೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಸಿದ್ಧೇಶ್ವರ ಶ್ರೀಗಳ ಮೇಲೂ ತಮ್ಮ ‘ಆಡು ಭಾಷೆ’ ಬಳಸುತ್ತಾರಾ, ಎಂದು ಎಂ.ಬಿ. ಪಾಟೀಲ ಕೇಳ್ದರು.
ಸಿದ್ಧೇಶ್ವರ ಶ್ರೀಗಳ ಶಿಷ್ಯರಾದ ಕನ್ನೇರಿ ಸ್ವಾಮಿ ಅವರ ಭಾಷೆ ಕಲಿಯಬೇಕಿತ್ತಲ್ಲವೇ? ಸಿದ್ಧೇಶ್ವರ ಶ್ರೀಗಳ ಹೆಸರು ತೆಗೆದುಕೊಳ್ಳಲು ಕನ್ನೇರಿ ಸ್ವಾಮಿಗೆ ನೈತಿಕ ಹಕ್ಕು ಇಲ್ಲ.
ಒಬ್ಬ ಸ್ವಾಮೀಜಿ ಇನ್ನೊಬ್ಬ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಬಾರದು. ವೈಯಕ್ತಿಕವಾಗಿ ಕನ್ನೇರಿ ಸ್ವಾಮಿಗಿಂತಲೂ ಉತ್ತಮವಾದ ಆಡು ಭಾಷೆ ನನಗೂ ಬರಲಿದೆ. ಅವರು ಪೌರುಷ ತೋರಿಸಿಕೊಳ್ಳಲು ಹಾಗೆ ಮಾತನಾಡಿದ್ದಾರೆ. ಬಂಡತನ ಬಿಟ್ಟು ಕ್ಷಮೆ ಕೇಳಲಿ. ನಾನೇ ಪಾದ ಮುಟ್ಟಿ ನಮಸ್ಕರಿಸಿ ಅವರನ್ನು ಬರಮಾಡಿಕೊಳ್ಳುತ್ತೇನೆ ಎಂದರು.
ಕನ್ನೇರಿ ಸ್ವಾಮಿಯ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧದ ಬಗ್ಗೆ ಮಾತಾಡುತ್ತಿರುವವರು ಅದೇ ಕನ್ನೇರಿ ಸ್ವಾಮಿ ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದರ ಕುರಿತು ಚರ್ಚೆ ಮಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಈಶ್ವರಪ್ಪ
ಹಿಂದು ಸಮಾಜ ಒಡೆಯುವದರಲ್ಲಿ ಎಂ.ಬಿ. ಪಾಟೀಲ ಅಗ್ರಗಣ್ಯರೆಂಬ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಎಂ.ಬಿ. ಪಾಟೀಲರು ‘ನೋ ಕಾಮೆಂಟ್’ ಎಂದರು.
ಆದರೆ “ಈಶ್ವರಪ್ಪ ಅವರನ್ನು ಯಾಕೆ ಬಿಜೆಪಿಯಿಂದ ಹೊರಹಾಕಿದರು? ಲೂಸ್ ಟಾಕ್ ಎಂಬ ಕಾರಣಕ್ಕಲ್ಲವೇ,” ಎಂದು ಕೇಳಿದರು.
