ಆರ್‌ಎಸ್‌ಎಸ್‌ ಪಾಠಶಾಲೆಯ ಶಾಸಕರಿಗೆ ಮಹಿಳೆಯರ ಮೇಲೆ ಗೌರವವಿಲ್ಲ

ಶಾಸನ ಸಭೆಯಲ್ಲಿ ಈ ಸೀಟಿ ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಆಡಿರುವ ಮಾತು ಇಡೀ ೭ ಕೋಟಿ ಕನ್ನಡಿಗರಿಗೆ ಮಾಡಿರುವ ಅವಮಾನ

ಬೆಂಗಳೂರು

ಅಮಿತ್ ಶಾ, ಬಸವನಗೌಡ ಪಾಟೀಲ್ ಯತ್ನಳ್, ಸೀಟಿ ರವಿ. ಇವೆಲ್ಲಾ ನಮ್ಮ ದೇಶದ ಶಾಸಕರು. ಇವೆಲ್ಲಾ ಆರ್‌ಎಸ್‌ಎಸ್ ಸಂಸ್ಕೃತಿಯ (ಕು)ಉತ್ಪನ್ನಗಳು ಕೂಡ.

ಇವರುಗಳನ್ನು ಆರ್‌ಎಸ್‌ಎಸ್ ಸಂಘಟನೆಯು “ಸುಶಾಸಕರು” ಎಂದು ಬೇರೆ ಕರೆಯುತ್ತದೆ. ಮಹಿಳೆಯರ ಬಗ್ಗೆ ಈ ಸುಶಾಸಕರಿಗೆ ಗೌರವವಿಲ್ಲ. ಏಕೆಂದರೆ ಆರ್‌ಎಸ್‌ಎಸ್ ಶಾಲೆಯಲ್ಲಿ ಕಲಿಸುವ ಪಠ್ಯವೇ “ಮನುಸ್ಮೃತಿ”ಯಾಗಿದೆ. ಈ ಪಠ್ಯವು ಮಹಿಳೆಯರನ್ನು ಎಷ್ಟು ಹೀನಾಯವಾಗಿ ಕಾಣುತ್ತದೆ ಎಂಬುದನ್ನು ಮತ್ತೆ ಮತ್ತೆ ಉಲ್ಲೇಖಿಸುವ ಅಗತ್ಯವಿಲ್ಲ.

ಮನುಸ್ಮೃತಿಯ ಉತ್ಪನ್ನಗಳು

ಮಹಿಳೆಯರು ಧಾರ್ಮಿಕ ಹಕ್ಕುಗಳಿಗೆ ಮತ್ತು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂದು ಮನುಸ್ಮೃತಿ ಹೇಳುತ್ತದೆ. ಧರ್ಮವನ್ನು ಗುತ್ತಿಗೆ ಹಿಡಿದಿರುವ ಆರ್‌ಎಸ್‌ಎಸ್ ಮತ್ತು ಈ ಕುಶಾಸಕರಿಗೆ ಇದು ಪವಿತ್ರ ಗ್ರಂಥ.

ಇಂತಹ ಕುಶಾಸಕರ ಬಾಯಿಂದ ಹೀನ-ದುಷ್ಟ-ಅಗೌರವದ ನುಡಿಗಳು ಬರದೆ ಗೌರವದ ಮಾತುಗಳು ಬರಲು ಸಾಧ್ಯವೇನು? ಆರ್ ಎಸ್ ಎಸ್ ನ ಮುಖ್ಯಸ್ಥರುಗಳು ಮತ್ತೆ ಮತ್ತೆ ಮಹಿಳೆಯರ ಕಾರ್ಯಕ್ಷೇತ್ರವೇನಿದ್ದರೂ “ಕುಟುಂಬ, ಗಂಡ, ಮಕ್ಕಳು” ಎಂಬ ಶುಭಾಶಯವನ್ನು ಹೇಳುತ್ತಿರುತ್ತಾರೆ. ಮಹಿಳೆಯರು ಶಾಸಕರಾಗಿರುವುದು ಅವರಿಗೆ ಸಹ್ಯವಿಲ್ಲ. ಅವಕಾಶ ದೊರೆತಾಗಲೆಲ್ಲಾ ಅವರ ವಿರುದ್ಧ ಮನುಸ್ಮೃತಿಯ ಪಾಠ ಹೇಳುತ್ತಿರುತ್ತಾರೆ.

ಶಾಸನ ಸಭೆಯಲ್ಲಿ ಈ ಸೀಟಿ ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಆಡಿರುವ ಮಾತು ಇಡೀ ೭ ಕೋಟಿ ಕನ್ನಡಿಗರಿಗೆ ಮಾಡಿರುವ ಅವಮಾನ ಮತ್ತು ಅವಹೇಳನ, ಇಂತಹ ಕುಶಾಸಕನನ್ನು ಶಾಸನ ಸಭೆಯಲ್ಲಿ ಬಿಜೆಪಿ ಮಂದಿ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರೆಲ್ಲರ ಸಂಸ್ಕೃತಿಯೂ ಅವನ ಕುಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿದೆ.

ಬಸವ ತತ್ವ ವಿರೋಧಿಗಳು

ಆರ್‌ಎಸ್‌ಎಸ್ ಜನ ಬಿಜೆಪಿಯಲ್ಲಿ ಸಮಸ್ಯೆಗಳು–ಒಳಜಗಳ ಉಂಟಾದಾಗ ಅದನ್ನು ಸರಿಪಡಿಸಲು ಅಥವಾ ತಮ್ಮ ಅಜೆಂಡಾದ ಬಗ್ಗೆ ಪಾಠ ಮಾಡಬೇಕು ಎನಿಸಿದಾಗಲೆಲ್ಲ ಬಿಜೆಪಿಯವರನ್ನೆಲ್ಲಾ “ಕೇಶವ ಕೃಪಾ”ಕ್ಕೆ ಕರೆಸಿಕೊಂಡು ಅಲ್ಲಿ ಸಭೆ ನಡೆಸುತ್ತಾರೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅತ್ಯಂತ ಅಸಹ್ಯಕರ ಮಾತನ್ನು ಯತ್ನಾಳ್ ಬಳಸಿದ್ದರೆ ಅವನಿಗೆ ‘ಬುದ್ದಿ’ ಹೇಳುವ ಕ್ರಮವನ್ನು ಅವರು ತೆಗೆದುಕೊಂಡಿಲ್ಲ. ಆರ್ ಎಸ್ ಎಸ್ ನ ಅತಿದೊಡ್ಡ ಸ್ಥಾನದಲ್ಲಿರುವ ದತ್ತಾತ್ರೇಯ ಹೊಸಬಾಳೆ ವಚನ ಸಂಸ್ಕೃತಿಯನ್ನು ಸನಾತನಗೊಳಿಸುವ ‘ವಚನ ದರ್ಶನ’ ಕೃತಿಯ ಬಿಡುಗಡೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಸವಣ್ಣನವರ ಬಗ್ಗೆ, ವಚನ ಸಾಹಿತ್ಯದ ಬಗ್ಗೆ “ತೋರಿಕೆಯ” ಗೌರವದ ಮಾತುಗಳನ್ನಾಡಿದ್ದಾರೆ.

ಆದರೆ ಇವರು ಯಾರೂ ಯತ್ನಾಳ್ ಬಸವಣ್ಣನವರ ಬಗ್ಗೆ ಅತ್ಯಂತ ಕೀಳಾದ ಹೇಳಿಕೆ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿಗೆ ಆದೇಶ ನೀಡಿಲ್ಲ. ಏಕೆಂದರೆ ಇದು ಅವರ ಅಜೆಂಡಾನೆ ಆಗಿದೆ. ಈ ಎಲ್ಲ ಸಂಗತಿಗಳ ಒಳಾರ್ಥ-ಬಹಿರಂಗಾರ್ಥ ಏನು?

ಆರ್‌ಎಸ್‌ಎಸ್ ಬಸವ-ವಿರೋಧಿ ಸಂಘಟನೆಯಾಗಿದೆ. ಬಸವಣ್ಣನವರ ಬಗ್ಗೆ ಯತ್ನಾಳ ಹೇಳಿದ ಮಾತುಗಳಿಂದ ಯಾರಿಗಾದರೂ ಅತೀ ಸಂತೋ಼ಷವಾಗಿದ್ದರೆ ಅದು ಆರ್‌ಎಸ್‌ಎಸ್‌ಗೆ ಎಂಬುದರ ಬಗ್ಗೆ ಶಂಕೆ ಬೇಡ.

ದಲಿತ ವಿರೋಧಿಗಳು

ಡಾ. ಬಿ. ಆರ್, ಅಂಬೇಡ್ಕರ್ ಮತ್ತು ನಮ್ಮ ಸಂವಿಧಾನದ ಬಗ್ಗೆ ಈ ಸಂಘಟನೆಗಳ ವಿರೋಧ ಮೊನ್ನೆ ಗೃಹ ಮಂತ್ರಿ ಅಮಿತ್ ಶಾ ಹೇಳಿರುವ ಮಾತಿನಲ್ಲಿ ವ್ಯಕ್ತವಾಗುತ್ತದೆ. ಡಾ. ಅಂಬೇಡ್ಕರ್ ಹೆಸರಿಗೆ ಬದಲಾಗಿ ‘ದೇವರ’ ಹೆಸರು ಹೇಳಿದರೆ ಸ್ವರ್ಗ ಪ್ರಾಪ್ತವಾಗುತ್ತವೆ ಎಂಬ ಮಾತು ಅಂಬೇಡ್ಕರ್ ವಿರುದ್ಧದ ಅತ್ಯಂತ ದುಷ್ಟ ಹೇಳಿಕೆಯಾಗಿದೆ. ಈ ಮನುಷ್ಯನ ಪ್ರಕಾರ ಜನರು ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಲೇಬಾರದು. ಎಷ್ಟೊಂದು ದ್ವೇಷ? ಮತ್ತೊಮ್ಮೆ ನಾನು ಹೇಳುತ್ತಿದ್ದೇನೆ. ಈ ಬಸವ-ವಿರೋಧಿ, ಮಹಿಳಾ-ವಿರೋಧಿ-ಜನತಂತ್ರ ವಿರೋಧಿ ದಲಿತ ವಿರೋಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳಿಗೆ ಬಸವಣ್ಣನವರ ನಾಡು ಕರ್ನಾಟಕದಲ್ಲಿ ಇರಲು ಯಾವುದೇ ಹಕ್ಕಿಲ್ಲ-ಅರ್ಹತೆಯಿಲ್ಲ.

ಬಿಜೆಪಿ – ಆರ್‌ಎಸ್‌ಎಸ್‌ಗಳನ್ನು ರಾಜ್ಯದಿಂದ ಹೊಡೆದೊಡಿಸಬೇಕು. ಕರ್ನಾಟಕವನ್ನು ಬಿಜೆಪಿ-ಆರ್‌ಎಸ್‌ಎಸ್ ಮಕ್ತ ರಾಜ್ಯವನ್ನಾಗಿ ಮಾಡಬೇಕು. ಇದು ಎಲ್ಲಾ ಕನ್ನಡಿಗರ ಪ್ರಣಾಳಿಕೆಯಾಗಬೇಕು.

Share This Article
1 Comment
  • ನಿದ್ದೆಯಲ್ಲಿ ಇದ್ದ ಕನ್ನಡಿಗರಿಗೆ ಬಡೆದೆಬ್ಬಿಸಿದಂತೆ ತಮ್ಮ
    ಬರಹ ನಮ್ಮೆಲ್ಲರಿಗೆ ಎಚ್ಚರಿಕೆ ಗಂಟೆಯಾಗಿದೆ.
    ಶೋಷಣೆ ಮಾಡುವವರು 3% ಆದರೆ ಶೋಷಣೆಗೆ
    ಒಳಗಾಗುವರು 97% ಇವರಲ್ಲಿ ಬುದ್ದ ಬಸವ ಭೀಮರ
    ಅರಿವು, ಆಚಾರ ಬರುವಂತಹ ಪ್ರೇರಕ ಹೇಳಿಕೆ, ಬರಹ
    ಕನ್ನಡಿಗರಿಗೆ ಸ್ಪೂರ್ತಿ ಆಗುತ್ತಿವೆ. ಇಂತಹ ವಾಸ್ತವ
    ಸತ್ಯಗಳನ್ನು ಬಿಚ್ಚಿಡುವ ಬರಹಗಳು ಹೆಚ್ಚಿನ ಸಂಖ್ಯೆ
    ಯಲ್ಲಿ ಬರಲಿ ಎಂದು ಆಶಿಸುತ್ತೇವೆ ಧನ್ಯವಾದಗಳು 👍

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು