ದಾವಣಗೆರೆಯಲ್ಲಿ ಜ.11ರಂದು ಪ್ರಶಸ್ತಿ ಪ್ರದಾನ
ನೆಲಮಂಗಲ:
ಶ್ರೀ ಸಿದ್ಧಲಿಂಗೇಶ್ವರ ಜಯಂತ್ಯುತ್ಸವದಲ್ಲಿ ನೀಡುವ ತೋಂಟದ ಸಿದ್ದಲಿಂಗ ಶ್ರೀ 2026ರ ರಾಜ್ಯಪ್ರಶಸ್ತಿಯನ್ನು ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಗೆ ಪ್ರದಾನ ಮಾಡಲಾಗುವುದು ಎಂದು ಪವಾಡ ಬಸವಣ್ಣ ದೇವರ ಮಠ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಘೋಷಿಸಿದ್ದಾರೆ.
ಕಳೆದ ವರ್ಷದಿಂದ ಈ ಪ್ರಶಸ್ತಿ ನೀಡಲಾಗುತಿದ್ದು, ಮೊದಲ ಪ್ರಶಸ್ತಿಯನ್ನು ಕನಕಪುರ ದೇಗುಲಮಠದ ಪೂಜ್ಯ ನಿರ್ವಾಣ ಮಹಾಸ್ವಾಮಿಗಳು ಪಡೆದುಕೊಂಡಿದ್ದರು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ದಾವಣಗೆರೆಯ ಅಭಿನವ ರೇಣುಕ ಮಂದಿರದಲ್ಲಿ ಜ.11ರಂದು ಭಾನುವಾರ ಸಿದ್ದಲಿಂಗೇಶ್ವರ ಜಯಂತ್ಯುತ್ಸವ ಸಮಿತಿ ಹಾಗೂ ಭಕ್ತರ ಸಹಕಾರದಲ್ಲಿ ಬೆಳಿಗ್ಗೆ 9ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ಉತ್ಸವಮೂರ್ತಿ ಮೆರವಣಿಗೆ ಹಾಗೂ 10.30ಕ್ಕೆ ತೋಂಟದಸಿದ್ದಲಿಂಗ ಶ್ರೀ ಪ್ರಶಸ್ತಿ ಪ್ರದಾನ ಅದ್ಧೂರಿ ಸಮಾರಂಭ ನೆರವೇರಿಸಲಾಗುವುದು ಎಂದರು.
ವಿರಕ್ತ ಮಠ, ಸಿದ್ದಗಂಗಾ ಮಠ, ಸುತ್ತೂರು ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಲವಾರು ಸ್ವಾಮೀಜಿಗಳು ಸಮ್ಮುಖ ವಹಿಸಲಿದ್ದಾರೆ. ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಕಾರಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಭಕ್ತರು, ಸಾರ್ವಜನಿಕರು ಆಗಮಿಸಲಿದ್ದು, ನಮ್ಮ ನೆಲಮಂಗಲ ತಾಲೂಕಿನಿಂದಲೂ ಭಾಗವಹಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.


ಅಭಿನಂದನೆಗಳು, ಗುರುಗಳೇ 🙏🙏