ಬೆಳಗಾವಿ
ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಘಟನೆಯ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಡುಗಡೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸದನದ ಕಲಾಪದ ಸಿಸಿಟಿವಿ ವಿಡಿಯೋದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ‘ಪ್ರಾಸ್ಟಿಟ್ಯೂಟ್’ ಪದವನ್ನು ಪದೇ ಪದೇ ಹೇಳುತ್ತಿರುವುದು ಕ್ಷೀಣವಾಗಿ ಕೇಳಿಸುತ್ತದೆ. ತಕ್ಷಣವೇ ಕಾಂಗ್ರೆಸ್ಸಿನ ಹಲವಾರು ಸದಸ್ಯರು ಎದ್ದು ಪ್ರತಿಭಟಿಸುತ್ತಿರುವುದೂ ಕಾಣಿಸುತ್ತದೆ.
ಸದನದಲ್ಲಿ ತಾವು ಬಳಸಿದ ಪದ ʻಫ್ರೆಟ್ಟ್ರೇಟ್ (Frustrate)ʼ ಎಂದು ಸಿ.ಟಿ ರವಿ ಹೇಳಿದ್ದಾರೆ. ಇದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್, ಫ್ರಸ್ಟ್ರೇಟ್ ಅನ್ನೋದಕ್ಕೂ ಆ ಪದಕ್ಕೂ ವ್ಯತ್ಯಾಸ ಇರೋದಿಲ್ವಾ ಎಂದು ಕೇಳಿದ್ದರು.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್ ಕಳೆದ ಡಿಸೆಂಬರ್ 19ರಂದು ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಅಶ್ಲೀಲ ಪದ ಬಳಸಿದ ಆ ಹೇಳಿಕೆಯ ವಿಡಿಯೋ ದಾಖಲೆ ರಿಲೀಸ್ ಮಾಡಿದ್ದೇನೆ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ಸಿ.ಟಿ.ರವಿಯನ್ನ ಕ್ಷಮಿಸೋ ಪ್ರಶ್ನೆಯಿಲ್ಲ. ಮಹಿಳಾ ಕುಲವನ್ನ ಅವಮಾನಿಸಿದ ರವಿ ವಿರುದ್ಧ ಹೋರಾಡುತ್ತೇನೆ. ಸಿ.ಟಿ ರವಿಗೆ ಶಿಕ್ಷೆ ಆಗೋವರೆಗೂ ನಾನು ಸುಮ್ಮನೆ ಕೂರೋದಿಲ್ಲ ಎಂದು ಹೇಳಿದರು.