ಕೂಡಲಸಂಗಮ :
ಕ್ಷೇತ್ರಾಧಿಪತಿ ಸಂಗಮನಾಥನ ರಥೋತ್ಸವ ಸಡಗರ ಸಂಭ್ರಮದಿಂದ ಮಂಗಳವಾರ ಸಂಜೆ ೭:೧೦ಕ್ಕೆ ನಡೆಯಿತು.
ರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗದಿಂದ ಅಪಾರ ಭಕ್ತರು ಸಮಾವೇಶಗೊಂಡು ರಥವನ್ನು ಎಳೆಯುವುದರ ಮೂಲಕ ಸಂಭ್ರಮ ಪಟ್ಟರು.
ರಥೋತ್ಸವಕ್ಕೂ ಪೂರ್ವದಲ್ಲಿ ಗಂಜಿಹಾಳ ಗ್ರಾಮದಿಂದ ತಳಿರು ತೋರಣ, ನಂದಿಕೋಲಿನ ಕುಣಿತ, ಬಾಳೆಕಂಬದ ಮೆರವಣಿಗೆ, ಬೆಳಗಲ್ಲ ಗ್ರಾಮದಿಂದ ರಥೋತ್ಸವದ ಹಗ್ಗ, ಇದ್ದಲಗಿಯ ಹಿಲಾಲ, ಗುಳೇದಗುಡ್ಡದ ಹುಚ್ಚಯನ ಕಳಸ ಮುಂತಾದವುಗಳನ್ನು ಗಂಜಿಹಾಳ, ಇದ್ದಲಗಿ, ಬೆಳಗಲ್ಲ, ಕೆಂಗಲ್ಲ, ಕಜಗಲ್ಲ, ಗುಳೇದಗುಡ್ಡದ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡುತ್ತ ಸುಕ್ಷೇತ್ರಕ್ಕೆ ಆಗಮಿಸುವಾಗ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು.

ವಾಹನ ದಟ್ಟನೆ ಅಧಿಕವಾಗಿತ್ತು. ರಸ್ತೆಯ ಮಧ್ಯದಲ್ಲಿಯೇ ಟ್ಯಾಕ್ಟರ್‌ಗಳು ನಿಂತ ಪರಿಣಾಮ ಭಕ್ತರು ಸಂಚರಿಸಲು ತೊಂದರೆ ಅನುಭವಿಸಿದರು.
೬ ಗಂಟೆಗೆ ಎಳೆಯಬೇಕಾದ ರಥೋತ್ಸವ ೭:೧೦ಕ್ಕೆ ಕತ್ತಲೆಯಲ್ಲಿ ಎಳೆದಿದ್ದರಿಂದ ಕೆಲವು ಭಕ್ತರು ಆಡಳಿತ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕ ಜನರು ಸೇರಿದ್ದರಿಂದ ಮೊಬೈಲ್ ನೆಟವರ್ಕ ಜಾಮ್ ಆಗಿ ಸಂಪರ್ಕಕ್ಕೆ ತೊಂದರೆ ಅನುಭವಿಸಿದರು.

ಜಾತ್ರೆಯ ನಿಮಿತ್ಯ ದೇವಸ್ಥಾನದ ಕೂಡಲಸಂಗಮನಾಥನಿಗೆ ಹೂವುಗಳಿಂದ ಅಲಂಕಾರ ಮಾಡಿದ್ದರು.
