ಬೆಂಗಳೂರು
12ನೇ ಶತಮಾನದಲ್ಲಿ ನಡೆದ ವಚನ ಚಳುವಳಿ ಕನ್ನಡ ನೆಲ ಮೂಲದ ಚಳುವಳಿ. ಈ ಚಳುವಳಿ ಜಗತ್ತಿಗೆ ಪ್ರಪ್ರಥಮವಾಗಿ ಪ್ರಜಾಪ್ರಭುತ್ವ ಪರಿಕಲ್ಪನೆ ಕೊಟ್ಟಿದೆ. ಇಂಥ ಚಳುವಳಿಗೆ ವಚನಕಾರರು ಈ ನೆಲದ ಜನ ಭಾಷೆಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿ, ಸಂಸ್ಕೃತ ಭಾಷೆಯ ಹೇರಿಕೆಯನ್ನು ಹಿಮ್ಮೆಟ್ಟಿಸಿ ಕನ್ನಡ ಭಾಷೆಯನ್ನು ದೇವ ಭಾಷೆಯನ್ನಾಗಿ ಮಾಡಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ.
ದೇಶದ ಮೂಲೆ ಮೂಲೆಗಳಿಂದ ಬಂದ ಜನರಿಗೆ ಈ ನೆಲ ಮೂಲದ ಕಾಯಕ ಜೀವಿಗಳ ಚಳುವಳಿ ಕನ್ನಡವನ್ನು ಕಲಿಸಿ ಕನ್ನಡತನವನ್ನು ಬೆಳೆಸಿತು. ಹೀಗೆ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಬೇರು ಸಾಹಿತ್ಯವಾಗಿ ನಿಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಈ ಚಳುವಳಿಯ ನಾಯಕ ವಿಶ್ವಗುರು ಬಸವಣ್ಣನವರನ್ನು ಸರ್ಕಾರ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿತು.
ನಾಡಕವಿ ರಾಷ್ಟ್ರಕವಿ ಕುವೆಂಪು ಮತ್ತು ಅಚ್ಚ ಕನ್ನಡದ ಬೇಸಾಯಗಾರರು ಆದ ಬಸವಾದಿ ಶರಣರ ಶರಣೆಯರ ಕುರಿತು ವಿಚಾರ ಗೋಷ್ಠಿ, ಚಿಂತನೆ ಕಾರ್ಯಕ್ರಮವಿಲ್ಲ, ಪೋಸ್ಟರ್, ಕಮಾನ್ ಗಳಲ್ಲಿ ಎಲ್ಲಿಯೂ ಅವರ ಭಾವಚಿತ್ರವಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ, ಸರ್ಕಾರದ ಘೋಷಣೆಗೆ ಅವಮಾನಿಸದಂತೆ. ಇದು ಕನ್ನಡ ಸಾಹಿತ್ಯ ಸಮ್ಮೇಳನದ ಅಜ್ಞಾನವೋ ಅಥವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ವೈದಿಕ ಕೋಮುವಾದಿ ಮನಸ್ಥಿತಿಯೋ? ಮುಖ್ಯಮಂತ್ರಿಗಳು ಈ ಕೂಡಲೇ ಸಾಹಿತ್ಯ ಸಮ್ಮೇಳನದಲ್ಲಾಗುತ್ತಿರುವ ತಪ್ಪುಗಳನ್ನು ಸರಿಪಡಿಸಲು ಸೂಚಿಸಬೇಕು ಎಂದು ಆಗ್ರಹಿಸುತ್ತೇವೆ.