ಸಾಂಪ್ರದಾಯಿಕ ದೇವರುಗಳನ್ನು ತೆರವು ಮಾಡಿದ ಬಸವನಿಷ್ಠ ಕುಟುಂಬ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಸವದತ್ತಿ

ಸವದತ್ತಿ ತಾಲೂಕಿನ, ದುಂಡನಕೊಪ್ಪ ಗ್ರಾಮದ ಮಲ್ಲಿಕಾರ್ಜುನ ಸಂಗೊಳ್ಳಿಯವರ ಮನೆಯ ಜಗುಲಿ ಮೇಲಿನ ಎಲ್ಲಾ ಸಾಂಪ್ರದಾಯಿಕ ದೇವರುಗಳನ್ನು ಇತ್ತೀಚೆಗೆ ತೆರವುಗೊಳಿಸಲಾಯಿತು. ಅಲ್ಲೀಗ ಬಸವಣ್ಣನ ಮೂರ್ತಿ ಕೂಡಿಸಿ ಮನಃಪೂರ್ವಕವಾಗಿ ಪೂಜಿಸಲಾಗುತ್ತಿದೆ.

ವಚನಮೂರ್ತಿಗಳಾಗಿ ಈ ಕಾರ್ಯ ನೆರವೇರಿಸಿದ ಹೊಸೂರ ಗ್ರಾಮದ ಕರವೀರಪ್ಪ ಸೋಮಪ್ಪ ಯಡಾಲ ಅವರು ಗ್ರಾಮದಲ್ಲಿ ಬಸವಪ್ರಜ್ಞೆ ಬೆಳೆಯುತ್ತಿದೆ, ಆದರೆ ಮಲ್ಲಿಕಾರ್ಜುನ ಸಂಗೊಳ್ಳಿಯವರ ಕುಟುಂಬ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬಸವನಿಷ್ಠೆ ಮೆರೆದಿದ್ದಾರೆ ಎಂದರು.

ತಾವು ಬಸವ ತತ್ವವನ್ನು ಬಿತ್ತಲು ನಡೆಸುತ್ತಿರುವ ಪ್ರಯತ್ನವನ್ನು ಸೋಮಪ್ಪ ಯಡಾಲ ವಿವರಿಸಿದರು:

“ನಮ್ಮ ಜನರಿಗೆ ಬಸವಣ್ಣನವರ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಬಸವಣ್ಣನವರು ಯಾರು, ನಮ್ಮ ಧರ್ಮ ಯಾವುದು, ನಮ್ಮ ಧರ್ಮಗುರು ಯಾರು, ನಮ್ಮೆಲ್ಲರ ಮೂಲ ಏನು? ನಾವ್ಯಾರು, ನಾವು ಎಲ್ಲಿಂದ ಬಂದ್ವಿ ಅನ್ನೋದನ್ನ, ನಮಗ ಧರ್ಮ ಕೊಟ್ಟೋರ್ಯಾರು, ನಮ್ಮ ಧರ್ಮ ಇನ್ನೀತರ ಧರ್ಮಕ್ಕಿಂತ ಹೆಂಗ ಶ್ರೇಷ್ಠ ಅನ್ನುವ ತಿಳವಳಿಕೆ ಹೇಳ್ತೀವಿ.

ಅನಂತರ ನಮ್ಮ ಧರ್ಮ ಸಂಸ್ಕಾರದ ಅರಿವು ಕೊಡ್ತೀವಿ. ನಾಲ್ಕೈದು ವಾರ ಆದಮೇಲೆ ಲಿಂಗದೀಕ್ಷೆ ಕೊಡ್ತೀವಿ. ದೀಕ್ಷೆ ಕೊಟ್ಟ ಮೇಲೆ ಅವರ ಮನೆಯವರೆಲ್ಲರನ್ನು ಕೂಡಿಸಿ ಅನುಭಾವ ಮಾಡ್ತೀವಿ. ಅವರು ಪ್ರಶ್ನೆಗಳನ್ನು ಕೇಳ್ತಾರ, ಅವರಿಗೆ ಉತ್ತರ್ಸ್ತಿವಿ. ಅನಂತರ ಅವರಿಗೆ ಒಂದಷ್ಟು ಆಸಕ್ತಿ ಬರತ್ತ, ಬಂದಾಗ ಸಂತೋಷದಿಂದ ಅವರನ್ನು ಒಪ್ಪುಸ್ತಿವಿ. ಈಗವರೆಲ್ಲ ತಮ್ಮ ಮನೆಯ ಯಾವುದೇ ಕಾರ್ಯ ಬಂದರೂ ನಮ್ಮ ಬಸವತತ್ವದಂಗ ಮಾಡಾಕ ಶುರು ಹಚ್ಕೊಂಡಾರ. ಅದರಿಂದಾಗೇನ ಈಗ ತಮ್ಮ ಜಗುಲಿ ಮ್ಯಾಲಿನ ತಮ್ಮದಲ್ಲದ ದೇವರ್ನೆಲ್ಲ ತೆಗೆದು ಬಸವಣ್ಣನವರನ್ನು ಕೂಡ್ಸಾಕತ್ತಾರ.

ನಮ್ದು ಎಂಟತ್ತು ಜನರ ಬಸವ ಬಳಗವಿದೆ‌. ಕಳೆದ ಎರಡು ವರ್ಷಗಳಿಂದ ಈ ಲಿಂಗಾಯತ ನಿಜಾಚರಣೆ ಕಾರ್ಯಕ್ರಮಗಳನ್ನ ಮಾಡಾಕತ್ತೀವಿ.

ಕೋಡಿಕೊಪ್ಪ, ಚಿಕ್ಕೊಪ್ಪ, ಮಾಟೊಳ್ಳಿ, ಮಳ್ಳೂರು ಮತ್ತೀತರ ಗ್ರಾಮಗಳಲ್ಲಿ ಎಲ್ಲಾ ಆಚರಣೆಗಳು ನಡದಾವು.
ಹೊಸೂರಲ್ಲಿ ನಮ್ಮ 10-12 ಮನೆತನದ ಮನೆಗಳಲ್ಲಿ ಈ ಎಲ್ಲಾ ಆಚರಣೆ ಮಾಡಿ ಮುಗಿಸಿದ್ದೇವೆ ಎನ್ನುತ್ತಾರೆ.

ನಾವೆಲ್ಲಾ ಹೊಸೂರಲ್ಲಿ ಅನುಭವ ಮಂಟಪ ಮಾಡಿಕೊಂಡಿದ್ದೀವಿ. ಅಲ್ಲಿ ಅನುಭಾವಿಗಳಿಂದ ಸರಿಯಾದ ಅರಿವು ಸಿಗುತ್ತಿದೆ. ಅಲ್ಲಿ ಶಿಬಿರಗಳನ್ನ ನಡಸ್ತೀವ್ರಿ. ಹೀಗಾಗಿ ನಾವು ನಮ್ಮ ಧರ್ಮದ ದಾರಿಯಲ್ಲಿ ಹೊಂಟೇವ್ರಿ. ನಮ್ಮ ಧರ್ಮ ಬೆಳಿಬೇಕ್ರಿ ಅಂದ್ರನ ಎಲ್ಲರಿಗೂ ಒಳ್ಳೇದಾಗತ್ತ, ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತ. ಎಲ್ಲಾರು ನಮ್ಮ ತತ್ವಾ ಒಪ್ತಾರ್ರಿ, ತಿಳಿಸಿ ಹೇಳೋರು ಬೇಕ್ನೋಡ್ರಿ.

ನಮಗೆಲ್ಲರಿಗೂ ಅನುಭಾವಿ ಮಡಿವಾಳಪ್ಪ ಸಂಗೊಳ್ಳಿ ಗುರುಗಳು ಪ್ರೇರಣೆ ಆಗ್ಯಾರ ನೋಡ್ರಿ ಅನ್ನುತ್ತಾರೆ ವಚನಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರವೀರಪ್ಪ ಯಡಾಲ ಅವರು.”

Share This Article
2 Comments

Leave a Reply

Your email address will not be published. Required fields are marked *