ಲಿಂಗಾಯತ ಧರ್ಮವನ್ನೇ ಇಲ್ಲವಾಗಿಸುವ ಹುನ್ನಾರ: ಸಾಹಿತಿ ಚಂದ್ರಶೇಖರ ಇಟಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಮುದ್ದೇಬಿಹಾಳ

‘ಸ್ವತಂತ್ರ ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದ ಭಾಗವೆಂದು ಪರಿಗಣಿಸಿ ಲಿಂಗಾಯತ ಧರ್ಮವನ್ನೇ ಇಲ್ಲವಾಗಿಸುವ ಹುನ್ನಾರ ನಡೆದಿದ್ದು, ಲಿಂಗಾಯತ ಧರ್ಮೀಯರು ಈ ಬಗ್ಗೆ ಎಚ್ಚರಗೊಳ್ಳಬೇಕಾಗಿದೆ. ಬಸವಾದಿ ಶರಣರ ವಚನಗಳನ್ನು ಅಪಮೌಲ್ಯೀಕರಣಗೊಳಿಸುವುದು, ಬಸವಣ್ಣನವರ ಬದಲು ಬೇರೊಬ್ಬರನ್ನು ಅವರ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನ ಸಹ ನಡೆದಿರುವುದು ಕಾಣುತ್ತಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಇಟಗಿ ಆತಂಕ ವ್ಯಕ್ತಪಡಿಸಿದರು.

ಅವರು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಎಸ್.ಜಿ.ವ್ಹಿ.ಸಿ. ವಿದ್ಯಾಪ್ರಸಾರಕ ಟ್ರಸ್ಟ್ ಸಹಯೋಗದೊಂದಿಗೆ ಲಿಂ. ಶ್ರೀಮತಿ ಮಲ್ಲಮ್ಮ ಮತ್ತು ಲಿಂ. ಶ್ರೀ ಶಂಕರಪ್ಪ ವಿರೂಪಾಕ್ಷಪ್ಪ ತಡಸದ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ‘ಲಿಂಗಾಯತ ತಲ್ಲಣಗಳು’ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು.

ಇದೇ ತಿಂಗಳು 18ರಂದು ಬಿಡುಗಡೆ ಮಾಡಬೇಕೆಂದಿದ್ದ ‘ಶರಣರ ಶಕ್ತಿ’ ಚಲನಚಿತ್ರದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಅನೇಕ ದೋಷಗಳಿವೆ. ಬಸವಾದಿ ಶರಣರಿಗೆ ಅವಮಾನ ಮಾಡುವಂಥ ಪ್ರಸಂಗಗಳು ಇವೆ. ಅವೆಲ್ಲವು ದೂರವಾಗಬೇಕೆಂದರು.

ಸಿದ್ಧರಾಮ ಶಿವಯೋಗಿಯು ಶೈವನಾಗಿರಬೇಕೇ ಹೊರತು ಇಷ್ಟಲಿಂಗಧಾರಿಯಾದ ಲಿಂಗಾಯತನಾಗಿರಲಾರ ಎಂಬ ಪ್ರತಿಪಾದನೆಗಳು ಬಂದಾಗ ಉತ್ತಂಗಿ ಚೆನ್ನಪ್ಪನವರು ಸಾಹಿತ್ಯಿಕ ಮತ್ತು ಐತಿಹಾಸಿಕ ಆಧಾರಗಳಿಂದ ಸಿದ್ಧರಾಮರಿಗೆ ಚೆನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯಾಗಿದೆಯೆಂಬುವುದನ್ನು ಸಿದ್ಧಮಾಡಿ ತೋರಿಸಿದರು ಎಂದು ಇಟಗಿಯವರು ಹೇಳಿದರು.

ಲಿಂ. ಶಂಕರಪ್ಪನವರು ಗಂಗಮ್ಮನವರ ಪರಮಭಕ್ತರಾಗಿ ಅವರ ಹೃದಯ ಗೆದ್ದು ಶ್ರೀಮತಿ ಗಂಗಮ್ಮ ವೀರಪ್ಪ ಚಿನಿವಾರ ವಿದ್ಯಾಪ್ರಸಾರಕ ವಿಶ್ವಸ್ಥನಿಧಿ ಸ್ಥಾಪನೆಗೆ ಕಾರಣರಾಗಿ ಮುದ್ದೇಬಿಹಾಳ ಶೈಕ್ಷಣಿಕ ನಗರವನ್ನಾಗಿ ಮಾಡಿದ ಕೀರ್ತಿ ಶ್ರೀ ಶಂಕರಪ್ಪನವರಿಗೆ ಸಲ್ಲುತ್ತದೆ. ಸಾರ್ವಜನಿಕ ವ್ಯಕ್ತಿಯಾಗಿ ಅನೇಕ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಮಾಡಿದರು. ಕುಟುಂಬ ವತ್ಸಲ ರಾಗಿ ಮಕ್ಕಳಿಗೆ ದಾರಿದೀಪವಾದರು ಎಂದು ಬಸವರಾಜ ನಾಲತವಾಡ ನಿವೇದಿಸಿದರು.

ಪುರಸಭೆಯ ಉಪಾಧ್ಯಕ್ಷೆ ಪ್ರೀತಿ ದೇಗಿನಾಳರು ಮಾತನಾಡಿ, ಬದುಕಿನಲ್ಲಿ ಬಸವ ತತ್ವಗಳನ್ನು ಅಳವಡಿಸಿಕೊಂಡು ಕಾಯಕ ಜೀವಿಗಳಾಗಬೇಕು. ಮನುಕುಲದ ಉದ್ಧಾರ ಬಸವಣ್ಣನವರ ತತ್ವಗಳ ಪಾಲನೆಯಲ್ಲಿದೆ ಎಂದು ಹೇಳಿದರು.

ಪ್ರಾಚಾರ್ಯ ಎಸ್.ಎನ್. ಪೋಲೇಶಿಯವರು ಅಧ್ಯಕ್ಷೀಯ ನುಡಿಯಲ್ಲಿ ಮಾತೋಶ್ರೀ ಗಂಗಮ್ಮನವರ ನಿಲುವಿನಂತೆ, ಪೂಜ್ಯ ಶಂಕ್ರಪ್ಪನವರು ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಬದುಕನ್ನೇ ಸಂಸ್ಥೆಯ ಬೆಳವಣಿಗೆಗೆ ಮಿಸಲಾಗಿಟ್ಟಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಶ್ರೀ ಮೆಹಬೂಬ ಗೊಳಸಂಗಿ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಪ್ರೀತಿ ದೇಗಿನಾಳರನ್ನು ಸತ್ಕರಿಸಲಾಯಿತು.

ವೇದಿಕೆಯ ಮೇಲೆ ವೀರಣ್ಣ ತಡಸದ, ವಿರೂಪಾಕ್ಷಪ್ಪ ತಡಸದ, ಚಂದ್ರಕಾಂತ ಬಂಡರಗಲ್ಲ ಉಪಸ್ಥಿತರಿದ್ದರು.

ಡಾ ಆರ್.ಎಚ್. ಸಜ್ಜನರ ಲಿಂ. ಶ್ರೀ ಶಂಕರಪ್ಪನವರ ಶೈಕ್ಷಣಿಕ ಸಾಮಾಜಿಕ ಮತ್ತು ಕೌಟುಂಬಿಕ ಬದುಕನ್ನು ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು.

ಸಾಹಿತಿ ರುದ್ರೇಶ ಕಿತ್ತೂರ ಸ್ವಾಗತ, ವಿದ್ಯಾರ್ಥಿನಿ ಪ್ರೀಯದರ್ಶಿನಿ ಬಸರಕೋಡ ವಚನ ಪ್ರಾರ್ಥನೆ, ಪ್ರಕಾಶ ನರಗುಂದ ನಿರೂಪಣೆ, ವಿಶ್ರಾಂತ ಶಿಕ್ಷಕ ಬಸವರಾಜ ಕೋರಿ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮಹಾಮನೆ ಬಳಗ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

Share This Article
2 Comments

Leave a Reply

Your email address will not be published. Required fields are marked *