ಸಾಂಸ್ಕೃತಿಕ ನಾಯಕ ಯೋಜನೆ: ವಾರದೊಳಗೆ ಸಿದ್ದರಾಮಯ್ಯ ಜೊತೆ ಲಿಂಗಾಯತ ಪ್ರಮುಖರ ಭೇಟಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಐದು ಅಂಶಗಳ ವಿಶೇಷ ಯೋಜನೆ: ಬೆಂಗಳೂರಿನ 25 ಎಕರೆ ಪ್ರದೇಶದಲ್ಲಿ ಬೃಹತ್ ‘ಶರಣ ದರ್ಶನ’ ಕೇಂದ್ರ ಸ್ಥಾಪನೆ

ಬೆಂಗಳೂರು

ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಜನಮಾನಸಕ್ಕೆ ತಲುಪಿಸಲು ವಿಶೇಷ ಕಾರ್ಯಯೋಜನೆ ರೂಪಿಸಿ ಅದಕ್ಕೆ ಪ್ರಸಕ್ತ ಬಜೆಟ್ ನಲ್ಲಿ ಅನುದಾನ ಕೋರಲು ಲಿಂಗಾಯತ ಸಮಾಜದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಲಿದ್ದಾರೆ.

ಇಂದು ಬೆಳಗ್ಗೆ 10.30ಕ್ಕೆ ನಡೆಯಬೇಕಿದ್ದ ಸಭೆಗೆ ಭಾಗವಹಿಸಲು ಮುಖ್ಯಮಂತ್ರಿಗಳ ಕಛೇರಿಯಿಂದ ಸಮಾಜದ ಪ್ರಮುಖರಿಗೆ ಅಹ್ವಾನ ಹೋಗಿತ್ತು. ಆದರೆ ಮುಖ್ಯಮಂತ್ರಿಗಳ ಮಂಡಿ ನೋವಿನ ಸಮಸ್ಯೆಯಿಂದ ಒಂದು ವಾರದ ಮಟ್ಟಿಗೆ ಸಭೆ ಮುಂದೆ ಹೋಗಿದೆ. ಸದ್ಯದಲ್ಲೇ ಭೇಟಿಗೆ ಹೊಸ ದಿನಾಂಕ ಗೊತ್ತಾಗಲಿದೆಯೆಂದು ತಿಳಿದು ಬಂದಿದೆ.

ಸಭೆಯಲ್ಲಿ ಪ್ರಮುಖ ಮಠಾಧೀಶರು, ಲಿಂಗಾಯತ ಮಂತ್ರಿಗಳು ಮತ್ತು ಪಕ್ಷಾತೀತವಾಗಿ ಶಾಸಕರು ಭಾಗವಹಿಸಲಿದ್ದಾರೆ ಎಂದು ಹಿರಿಯ ಶಾಸಕರೊಬ್ಬರು ಬಸವ ಮೀಡಿಯಾಗೆ ಹೇಳಿದರು.

ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದು ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅದರ ಮಹತ್ವ ಜನರಿಗಿನ್ನೂ ಅರಿವಾಗಿಲ್ಲ. ಜನವರಿಯಲ್ಲಿ ಘೋಷಣೆಯ ವಾರ್ಷಿಕೋತ್ಸವ ಬಂದು ಹೋಗಿದ್ದನ್ನೂ ಯಾರೂ ಗಮನಿಸಲಿಲ್ಲ.

ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದು ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅದರ ಮಹತ್ವ ಜನರಿಗಿನ್ನೂ ಅರಿವಾಗಿಲ್ಲ.

ಮಹಾರಾಷ್ಟ್ರದಲ್ಲಿ ಶಿವಾಜಿಯಂತೆಯೇ ಕರ್ನಾಟಕದಲ್ಲಿ ಬಸವಣ್ಣ ಜನರ ಉಸಿರಲ್ಲಿ ಉಸಿರಾಗಬೇಕು. ಅದಕ್ಕೆ ಈ ಕಾರ್ಯಯೋಜನೆಯ ಮುಖ್ಯಾಂಶಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ವಿಶೇಷ ಕಾರ್ಯಯೋಜನೆಯ ಐದು ಅಂಶಗಳು

1) ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಬೃಹತ್ ‘ಶರಣ ದರ್ಶನ’ ಕೇಂದ್ರ (ಅಕ್ಷರಧಾಮ ಮಾದರಿಯಲ್ಲಿ) ಸ್ಥಾಪಿಸುವುದು.

2) ‘ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ’ ರಚಿಸುವುದು.

3) ನಿರ್ಮಾಣವಾಗುತ್ತಿರುವ ಅನುಭವ ಮಂಟಪದಲ್ಲಿ ‘ವಚನ ವಿಶ್ವವಿದ್ಯಾಲಯ’ ಮತ್ತು ಸಂಶೋಧನ ಕೇಂದ್ರ ಆರಂಭಿಸುವುದು.

4) ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಬಸವ ಭವನ’ ನಿರ್ಮಿಸುವುದು. ಆ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು.

5) ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸುವುದು (ಚಟುವಟಿಕೆಗಳು: ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ.)

ಈ ಕಾರ್ಯಯೋಜನೆಯನ್ನು ಜಾರಿಗೆ ತರಲು 500 ಕೋಟಿ ಖರ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಸರಕಾರದ ಹಣಕಾಸಿನ ಪರಿಸ್ಥಿತಿಯನ್ನು ಪರಿಗಣಿಸಿ ವರ್ಷಕ್ಕೆ ನೂರು ಕೋಟಿ ಕೇಳಲಿದ್ದೇವೆ. ಮೂರು ವರ್ಷದ ನಂತರ ಸರಕಾರ ಬದಲಾದರೂ ಯೋಜನೆ ಮತ್ತು ಅನುದಾನ ಮುಂದುವರೆಯುವಂತಹ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಬೃಹತ್ ‘ಶರಣ ದರ್ಶನ’ ಕೇಂದ್ರ (ಅಕ್ಷರಧಾಮ ಮಾದರಿಯಲ್ಲಿ) ಸ್ಥಾಪಿಸುವುದು.

ಎಂ. ಬಿ. ಪಾಟೀಲ್ ಪಾತ್ರ

ಬಸವಣ್ಣ ಸಾಂಸ್ಕೃತಿಕ ನಾಯಕ ವಿಶೇಷ ಕಾರ್ಯಯೋಜನೆ ರೂಪಿಸುವ ಪ್ರಯತ್ನದಲ್ಲಿ ಎಂ. ಬಿ. ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಳೆದ ತಿಂಗಳು ಚಿತ್ರದುರ್ಗದಲ್ಲಿ ನಡೆದ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಪಾಟೀಲ್ ಬಸವಣ್ಣನವರು ಸಾಂಸ್ಕೃತಿಕ ನಾಯಕನೆಂಬುದು ಬರೀ ಘೋಷಣೆಗೆ ಸೀಮಿತವಾಗಬಾರದು, ಬಸವ ತತ್ವಗಳನ್ನು ಅನುಷ್ಠಾನಕ್ಕೆ ತರಲು ಒಂದು ಯೋಜನೆ ಕೂಡ ಸಿದ್ಧವಾಗಬೇಕು. ಒಮ್ಮೆಲೇ 500 ಕೋಟಿ ಕೇಳುವ ಬದಲು ಪ್ರತಿ ವರ್ಷ ಬಜೆಟಿನಲ್ಲಿ 100 ಕೋಟಿ ಕೇಳಬಹುದೆಂದು ಎಂದು ಸಲಹೆ ನೀಡಿದ್ದರು.

ಯೋಜನೆ ತಯಾರಿಸಿಕೊಂಡು ಎಲ್ಲಾ ಪೂಜ್ಯರು ಮತ್ತು ಗಣ್ಯರು ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಈ ಬಜೆಟ್ಟಿನಿಂದಲೇ ಕೆಲಸ ಶುರುವಾಗುವಂತೆ ಪ್ರಯತ್ನಿಸಬೇಕು, ಎಂದು ಪಾಟೀಲ್ ಹೇಳಿದ್ದರು.

“ಸುತ್ತೂರು ಶ್ರೀಗಳ ಮಾತಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಲ್ಲಾ ಅನ್ನೋದಿಲ್ಲ. ಸಿದ್ದರಾಮಯ್ಯ ಯಾರ ಮಾತು ಕೇಳುತ್ತಾರೆ ಅಂದರೆ ಅದು ಸುತ್ತೂರು ಶ್ರೀಗಳ ಮಾತು,” ಎಂದು ಎಂ ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದರು.

ಸುತ್ತೂರು ಶ್ರೀಗಳ ಮಾತಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಲ್ಲಾ ಅನ್ನೋದಿಲ್ಲ

ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಗೂಗಲ್ ಮೀಟ್

ಶರಣ ಮೇಳದ ನಂತರ ಜನವರಿ 23 ಸುತ್ತೂರು ಶ್ರೀಗಳ ನೇತೃತ್ವದಲ್ಲಿ ವಿಶೇಷ ಕಾರ್ಯಯೋಜನೆ ರೂಪಿಸಲು ಒಂದು ಗೂಗಲ್ ಮೀಟ್ ನಡೆಯಿತು ಎಂದು ತಿಳಿದು ಬಂದಿದೆ.

ಸಮಾಜದ ಆರು ಮಠಾಧೀಶರು ಮತ್ತು ಗಣ್ಯರು ಇದರಲ್ಲಿ ಭಾಗವಹಿಸಿ ತಮ್ಮ ಸಲಹೆ ನೀಡಿದರು. ಗೊರುಚ ಅವರ ಸಲಹೆಯನ್ನೂ ಪಡೆದುಕೊಂಡು ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ.

ಲಿಂಗಾಯತರಿಗೆ ಸೀಮಿತವಲ್ಲ

ಇದರ ಬಗ್ಗೆ ಮಾತನಾಡಿದ ಶಾಸಕರು ಈ ವಿಶೇಷ ಕಾರ್ಯಯೋಜನೆ ಲಿಂಗಾಯತರ ಕಾರ್ಯಕ್ರಮ ಎಂದು ಬಿಂಬಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಬಸವಣ್ಣನವರು ವಿಶ್ವದ ಆಸ್ತಿ, ಅವರನ್ನು ಯಾವುದೇ ಧರ್ಮ, ಜಾತಿ, ಪ್ರದೇಶಕ್ಕೆ ಸೀಮಿತಗೊಳಿಸಿದರೆ ಅದು ಅಪಚಾರವಾಗುತ್ತದೆ. ಮುಖ್ಯವಾಗಿ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಿಕೊಳ್ಳಬೇಕಾದರೆ ಬಸವಣನವರ ಸಂದೇಶವನ್ನು ಎಲ್ಲರಿಗೂ ನಿರಂತರವಾಗಿ ಮುಟ್ಟಿಸಬೇಕು.

ಬಸವಣ್ಣನವರು ವಿಶ್ವದ ಆಸ್ತಿ, ಅವರನ್ನು ಯಾವುದೇ ಧರ್ಮ, ಜಾತಿ, ಪ್ರದೇಶಕ್ಕೆ ಸೀಮಿತಗೊಳಿಸಿದರೆ ಅದು ಅಪಚಾರವಾಗುತ್ತದೆ.

ಲಿಂಗಾಯತರು ಬಸವಣ್ಣನವರ ಅನುಯಾಯಿಗಳಾಗಿದ್ದಾರೆ. ಆದ್ದರಿಂದ ಅವರು ಈ ವಿಷಯದಲ್ಲಿ ಮುಂದೆ ಬಂದಿರುವುದು ಸಹಜ. ಈ ಕಾರ್ಯವನ್ನು ಸರಕಾರಕ್ಕೆ ಪೂರ್ಣವಾಗಿ ಒಪ್ಪಿಸದೆ ಎಲ್ಲಾ ಬಸವ ಸಂಘಟನೆಗಳು ತಮ್ಮ ಶಕ್ತಿ ಮೀರಿ ಈ ದಿಕ್ಕಿನಲ್ಲಿ ದುಡಿಯಬೇಕೆಂದು ಹೇಳಿದರು.

Share This Article
11 Comments
  • ಅತ್ಯುತ್ತಮ ಬೆಳವಣಿಗೆ. ಕೆಲವು ಮುಖಂಡರಾದರೂ ಕಾಳಜಿಯಿಂದ, ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ.

    • ಕನಾ೯ಟಕದ ಪ್ರತಿ ಜಿಲ್ಲೆ & ತಾಲೂಕುಗಳಲ್ಲಿ ಬಸವ ಭವನಗಳನ್ನು ನಿಮಿ೯ಸಿ ಅಲ್ಲಿ ಬಸವತತ್ವಪರ ಕಾಯ೯ಕ್ರಮಗಳು ನಿರಂತರ ನಡೆಯುವಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಮಾಡಬೆಕೆಂಬ ಮನವಿ ಪತ್ರವನ್ನು ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಜೂನ್ 2024 ರಂದು ಎಮ್ ಬಿ ಪಾಟೀಲ್ ಸರ್ ಗೆ ಮನವಿ ಪತ್ರವನ್ನು ಸಲ್ಲಿಸಿತ್ತು (ನಾನೂ ವಯಕ್ತಿಕ ಮನವಿ ಪತ್ರದಲ್ಲಿ ಬಸವಪರ ಸಂಘಟನೆಗಳಿ ಸರ್ಕಾರದಿಂದ ಯಾವರಿತಿ ಸಹಕರಿಸಬಹುದು ಆ ಕಾಯ೯ಕ್ರಮಗಳ ಬಗ್ಗೆ ವಿವರವಾದ ಪತ್ರವೊಂದನ್ನು M B PATIL sir ,ಕೂದ್ದಾಗಿ ಬೆಟಿಮಾಡಿ ಮನವಿ ಪತ್ರವನ್ನು ಸಲ್ಲಿಸಿದ್ದನೆ) 7 ತಿಂಗಳ ನಂತರ ಪಾಟೀಲ್ ಸರ್ ಸರ್ಕಾರದ ಮಟ್ಟದಲ್ಲಿ ಈ ವಿಚಾರವನ್ನು ಕಾಯ೯ರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವುದು ಅತ್ಯಂತ ಖುಷಿಯ ಸಂಗತಿ ,M B PATIL ,sir ಹಿಡಿದ ಕೆಲಸವನ್ನು ಮನಸ್ಸಿನಿಂದ ಮಾಡುವ ಕೆಲಸಗಾರನೆಂದು ತಿಳಿಸಲು ಸಂಕೋಚವಿಲ್ಲ.

      • ಒಳ್ಳೆಯ ಬೆಳವಣಿಗೆ ಇದು ಕಾರ್ಯರೂಪಕ್ಕೆ ಅದಷ್ಟು ಬೇಗ ಬರಲಿ

      • ಇಪ್ಪತ್ತೈದು ಎಕರೆ ಖಂಡಿತ ಸಾಕಾಗುವುದಿಲ್ಲ.
        ಕನಿಷ್ಠ ನೂರು ಎಕರೆ ಬೇಕೇ ಬೇಕು!!ಬಸವಾದಿ
        ಶರಣರ ಕೆಲಸ ಅಸಾಮಾನ್ಯ!!ಅದೆಲ್ಲವನ್ನೂ ಅಲ್ಲಿ ವಿವಿಧ ಪ್ರಕಾರಗಳಲ್ಲಿ ದಾಖಲಿಸುವ
        ಕೆಲಸ ಆಗಬೇಕಿದೆ.ಹೀಗಾಗಿ ಹೆಚ್ಚು ಭೂಮಿ
        ಹೆಚ್ಚು ಅನುದಾನ ಅತ್ಯಗತ್ಯ 👏🌹☘️

  • ಸುತ್ತೂರು ಶ್ರೀಗಳ ಜೊತೆಗೆ ಸಿದ್ದಗಂಗಾ ಸಿದ್ಧಲಿಂಗ ಶ್ರೀಗಳು,ಗಂಗಾ ಮಾತಾಜಿ, ಗದಗ ನ ಸಿದ್ಧರಾಮ ಶ್ರೀಗಳು ,ಭಾಲ್ಕಿ ಬಸವಲಿಂಗ ಪಟ್ಟದೇವರು,ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಸ್ವಾಮೀಜಿ,,ಕನಕ ಪೀಠದ ಸ್ವಾಮೀಜಿ,ಚಿತ್ರದುರ್ಗ ಮುರುಘಾ ಮಠದ ಬಸವ ಕುಮಾರ ಶ್ರೀಗಳು, ಆದಿಚುಂಚಗಿರಿ ಶ್ರೀಗಳು, ವಾಲ್ಮೀಕಿ ಪೀಠದ ಸ್ವಾಮೀಜಿ, ಬೆಟ್ಟದ ಹಳ್ಳಿ ಸ್ವಾಮೀಜಿ , ಭೋವಿ ಗುರುಪೀಠದ ಸ್ವಾಮೀಜಿ ,ಮೂರುಸಾವಿರ ಮಠದ ಸ್ವಾಮೀಜಿ, ಇಳಕಲ್ ಗುರು ಮಹಾಂತ ಸ್ವಾಮೀಜಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮುಂತಾದ ಎಲ್ಲರನ್ನೂ ಒಳಗೊಳ್ಳುವ ತಂಡ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಬೇಟಿಮಾಡಿದರೆ ಉತ್ತಮ. ಬಸವಣ್ಣ ನವರನ್ನ ಲಿಂಗಾಯತ ಧರ್ಮದವರಿಗೆ ಮಾತ್ರ ಗುರು ಅಲ್ಲ ಅವರು ಸಮಸ್ತ ಸಮಾಜದ ಗುರು ಎಂಬ ಭಾವನೆ ಮೂಡಿಸಬೇಕು.

  • ಈ ಯೋಜನೆಗೆ ಕೈಜೋಡಿಸಿರುವ ಎಲ್ಲರಿಗೂ ಶರಣು ಶರಣಾರ್ಥಿ ಗಳು.

  • ಈ ಯೋಜನೆಗಳನ್ನು ಜಾರಿಗೊಳಿಸಲು ಶ್ರಮಿಸುತ್ತಿರುವ ಎಲ್ಲರಿಗೂ ಶರಣು ಶರಣಾರ್ಥಿಗಳು🙏

  • ಕರ್ನಾಟಕದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಎಲ್ಲರಿಗೂ ಬೇಕಾಗುವ ಬಸವ ಭವನಗಳನ್ನು ಪ್ರತಿ ಜಿಲ್ಲೆ ಮತ್ತು ತಾಲ್ಲೋಕುಗಳಲ್ಲಿ ನಿರ್ಮಿಸುವ ಯೋಜನೆಗೆ ಶ್ರಮಿಸುತ್ತಿರುವ ಮಹನೀಯರಿಗೆ ಶರಣು ಶರಣಾರ್ಥಿಗಳು………🌹🙏🙏🌹

Leave a Reply

Your email address will not be published. Required fields are marked *