ಚಿತ್ರದುರ್ಗ
ಅನೇಕ ರೀತಿಯ ಯೋಗಗಳನ್ನು ನೋಡುತ್ತೇವೆ. ರಾಜಯೋಗ, ಕರ್ಮಯೋಗ ಇತ್ಯಾದಿ. ಬಸವಾದಿ ಶರಣರು ನಮಗೆ ಒಂದು ಸರಳ, ಸಹಜವಾದ ಯೋಗ ಹೇಳಿಕೊಟ್ಟರು, ಅದೇ ಶಿವಯೋಗ.
ಶಿವಯೋಗದ ಸಾಧನೆ ಮಾಡುತ್ತಾ ಅನೇಕರು ತಪಸ್ವಿಗಳಾಗಿದ್ದಾರೆ. ಶಿವಯೋಗವು ಐಕ್ಯತೆಯನ್ನು, ಪ್ರಸನ್ನ ಭಾವವನ್ನು ನೀಡುತ್ತದೆ. ಶಿವ ಎಂದರೆ ಪ್ರಸನ್ನಭಾವ, ಮಂಗಳಕರ, ಶುಭಕರ ಎಂದರ್ಥ. ಯೋಗ ಎಂದರೆ ಎಲ್ಲರೂ ಒಂದುಕಡೆ ಕೂಡುವುದು, ಸೇರುವುದು ಎಂದರ್ಥ.
ಶಿವ ಶರಣರು ಸಜ್ಜನರ ಸಂಘಕ್ಕೆ ಮಹತ್ವಕೊಡುತ್ತಾರೆ. ಮನುಷ್ಯ ಸಂಘ ಜೀವಿ ಸಮುದಾಯ ಜೀವಿ, ಮಾನವನಷ್ಟೇ ಅಲ್ಲ ಎಲ್ಲಾ ಪ್ರಾಣಿಗಳು ಪಶು ಪಕ್ಷಿಗಳು ಸಂಘ ಜೀವನ ಹಾಗೂ ಸಮುದಾಯ ಜೀವನ ನಡೆಸುತ್ತಾ ಬಂದಿವೆ.
ಮನುಷ್ಯನು ಯಾವಾಗಲೂ ಒಂಟಿಯಾಗಿರಬಾರದು. ಒಂಟಿತನ ಮನುಷ್ಯನಿಗೆ ಬಹುದೊಡ್ಡ ಶಿಕ್ಷೆ, ಯಾರೂ ಒಂಟಿ ಜೀವನ ಮಾಡಬಾರದು, ಏಕೆಂದರೆ ಆತನು ಖಿನ್ನತೆಗೆ ಒಳಗಾಗುತ್ತಾನೆ. ಮಾನಸಿಕ ವರ್ತನೆ ಬದಲಾಗುತ್ತದೆ. ಒಂಟಿತನ ಕೆಟ್ಟ ಆಲೋಚನೆಗಳು ಬರುವಂತೆ ಮಾಡುತ್ತದೆ.
ಅದಕ್ಕೆ ಬಸವಣ್ಣನವರು ಸಮುದಾಯ ಜೀವನ ಮಾಡಬೇಕು ಎಂದಿದ್ದಾರೆ. ಸಾಧು ಸಜ್ಜನರ ಸಂಘ ಮಾಡಬೇಕೆಂದಿದ್ದಾರೆ. ಮಳೆಯ ನೀರು ಆಕಾಶದಲ್ಲಿ ಇದ್ದಾಗ ಶುದ್ಧವಾಗಿರುತ್ತದೆ. ಅದು ಭೂಮಿಯ ಮೇಲೆ ಬಿದ್ದಾಗ ಅನೇಕ ರೂಪವಾಗಿ ಕಾಣುತ್ತದೆ. ಹಾಗೆಯೇ ಮಾನವನು ಸಜ್ಜನರ ಸಂಘ ಮಾಡಿದಾಗ ಸಜ್ಜನನಾಗುತ್ತಾನೆ. ದುರ್ಜನರ ಸಂಘ ಮಾಡಿದಾಗ ಕೆಟ್ಟವನಾಗುತ್ತಾನೆ. ಎಲ್ಲಾ ಶಿವಶರಣರು ಬಸವ ಕಲ್ಯಾಣದಲ್ಲಿ ಒಟ್ಟೊಟ್ಟಾಗಿ ಸೇರಿದ್ದನ್ನು ನೋಡಿದ್ದೇವೆ.
ಮನಷ್ಯ ಒಂದು ಕಡೆ ಸೇರುವುದನ್ನು ಕಲಿಯಬೇಕು, ಕಲ್ಯಾಣದಲ್ಲಿ ಸಹಸ್ರಾರು ಗಣಂಗಳು ಸೇರುತ್ತಿದ್ದರು. ಎಲ್ಲಾ ಶರಣರು ಕಲ್ಯಾಣದಲ್ಲಿ ಒಟ್ಟೊಟ್ಟಾಗಿ ಸೇರಿದ್ದರಿಂದ ಬಹುದೊಡ್ಡ ಕ್ರಾಂತಿಯಾಯಿತು. ಅನುಭವ ಕಟ್ಟುವುದಕ್ಕೆ ಕಾರಣವಾಯಿತು. ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕಾರಣವಾಯಿತು. ಸಹಜ ಶಿವಯೋಗ ನಮ್ಮೆಲ್ಲರನ್ನು ಸಮುದಾಯದ ಕಡೆಗೆ ಕೊಂಡೊಯ್ಯುತ್ತದೆ. ಸಜ್ಜನ ವ್ಯಕ್ತಿಯನ್ನಾಗಿ, ಶರಣರನ್ನಾಗಿ ನಿರ್ಮಾಣ ಮಾಡುವ ಶಕ್ತಿ ಸಹಜ ಶಿಯೋಗಕ್ಕಿದೆ ಎಂದು ಗುರುಮಠಕಲ್ನ ಖಾಸ ಶ್ರೀ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ-೨೦೨೪ ರ ಕಾರ್ಯಕ್ರಮದಲ್ಲಿ ಮಾತನಾಡುತ್ತ ಹೇಳಿದರು.
ಈ ಸಮಾರಂಭದಲ್ಲಿ ಲೇಖಕರಾದ ಎಚ್ ಆನಂದಕುಮಾರ್ ರವರು ಮಾತನಾಡಿ ನಾನು ಮುರುಘಾ ಮಠದ ಬಗ್ಗೆ ಅದರ ಇತಿಹಾಸದ ಬಗ್ಗೆ ಬರೆದದ್ದು ನನ್ನ ಪುಣ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ಶರಣ ಸಮರ್ಪಣೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿಗಳು, ನೆಲೋಗಿಯ ಶ್ರೀ ಶಿವಾನಂದೇಶ್ವರ ವಿರಕ್ತಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳು ಬಸವಕಲ್ಯಾಣದ ಬಸವರಾಜೇಶ್ಪರಿ ಸ್ವಾಮಿಗಳು, ಚಿತ್ರದುರ್ಗದ ಶ್ರೀ ಯಾದವ ಗುರುಪೀಠದ ಶ್ರೀ ಜಗದ್ಗುರು ಕೃಷ್ಣಯಾದವಾನಂದ ಸ್ವಾಮಿಗಳು, ಮಡಿವಾಳ ಗುರುಪೀಠದ ಶ್ರೀ ಮಾಚಿದೇವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಮಾರಂಭಕ್ಕೆ ಕಲ್ಬುರ್ಗಿಯ ಬಸವ ಸೇವಾ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ರಾಜಶೇಖರ ಯಕ್ಕಂಚಿ, ಕಲ್ಬುರ್ಗಿಯ ಅಕ್ಷಯ ಪ್ರಿಂರ್ಸ್ನ ಶ್ರೀ ರೇವಣ ಸಿದ್ದಯ್ಯಮಠ್ ಚನ್ನಗಿರಿಯ ಲಿಂಗಯತ ಮಹಾಸಭಾದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಪಾಟೀಲ್ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೌರವ ಸಮರ್ಪಣೆಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥನೆ ನೆರವೇರಿಸಿದರೆ, ಡಾ.ಬಸವಕುಮಾರ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರ್ವಹಿಸಿದರು.