ಸಂಡೂರು
ಯಾವುದೇ ಆರ್ಥಿಕ ಬಲವಿಲ್ಲದಿದ್ದರೂ ಸಹ ದಾನಿಗಳಿಂದ ಪುಸ್ತಕ ಪ್ರಕಟಣಾ ಕಾರ್ಯ ಮಾಡುತ್ತಿರುವುದರಲ್ಲಿ ಪ್ರಮುಖ ಸ್ಥಾನ ಸಂಡೂರಿನ ವಿರಕ್ತಮಠಕ್ಕೆ ಸಿಗುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿಯವರು ತಿಳಿಸಿದರು.
ಕರ್ನಾಟಕದ ಉದ್ದಗಲಕ್ಕೂ ಬಹಳ ದೊಡ್ಡ ದೊಡ್ಡ ಶ್ರೀಮಂತ ಮಠಗಳಿವೆ, ವಾರ್ಷಿಕವಾಗಿ ಕೋಟ್ಯಾಂತರ ವೆಚ್ಚ ಮಾಡಿ ಬೇರೆ ಬೇರೆ ಕಾರ್ಯದಲ್ಲಿವೆ, ಅದರೆ ೨-೩ ಮಠಗಳು ಮಾತ್ರ ಜ್ಞಾನ ದಾಸೋಹ ಕಾರ್ಯ ಮಾಡುತ್ತಿವೆ, ಎಂದು ಹೇಳಿದರು.
ಅವರು ಪಟ್ಟಣದ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಪ್ರಭುದೇವರ ಜನಕಲ್ಯಾಣ ಸಂಸ್ಥೆಯ ಅಡಿಯಲ್ಲಿ ಬಯಲ ಗಳಿಕೆಯ ಮಹಾಬೆಳಗು, ಲಿಂಗಾಯತ ಅನುಸಂಧಾನ, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ, ವಚನ ವ್ಯಾಸಂಗ: ಒಳನೋಟ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಠದ ಅಭಿವೃದ್ದಿಗೆ ಸ್ವಾಮಿಗಳು ಯಾವತ್ತೂ ತಲೆಕೆಡಿಸಿಕೊಳ್ಳಲಿಲ್ಲ ಕಾರಣ ಮಠದ ಭಕ್ತರು ಶ್ರೀಮಂತರಾದರೆ ಸಾಕು ಎನ್ನುವ ಮನೋಭಾವನೆಯನ್ನು ಹೊಂದಿದವರು. ಕರ್ನಾಟಕದ ಚರಿತ್ರೆಯನ್ನು ನೋಡಿದರೆ ಜನ ಸಮುದಾಯಕ್ಕೆ ಶೈಕ್ಷಣಿಕ ಪ್ರಬಲ ಶಕ್ತಿ ಕೊಟ್ಟಿರುವುದು ನಮ್ಮ ಲಿಂಗಾಯತ ಮಠಮಾನ್ಯಗಳು, ಇವು ಕೇವಲ ಧರ್ಮ ಪ್ರಚಾರಕ್ಕಾಗಿಯೇ ತಮ್ಮ ಕಾರ್ಯ ಮೀಸಲಿಡದೆ ಜನ ಸಮುದಾಯದ ಒಳಿತು ಎನ್ನುವ ಕಾರ್ಯವನ್ನು ಕರ್ನಾಟಕದ ಉದ್ದಗಲಕ್ಕೂ ಕಾರ್ಯನಿರ್ವಹಿಸುತ್ತಿವೆ. ಆದರೆ ಅನ್ನದಾಸೋಹ, ಜ್ಞಾನ ದಾಸೋಹ, ವಸತಿ ಕಾರ್ಯಗಳನ್ನು ಬೆರಳೆಣಿಕೆಯಷ್ಟು ಮಠಗಳು ಮಾತ್ರ ಮಹಾಕಾರ್ಯವಾಗಿ ಮಾಡುತ್ತಿವೆ.
ನಂತರ ನಡೆದ ವಿಚಾರ ಸಂಕೀರ್ಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನಿಷ್ಠಿ ರುದ್ರಪ್ಪ ಬಸವಣ್ಣನವರನ್ನು ಗೌರವಿಸಿದರೆ ನಮ್ಮನ್ನು ನಾವು ಗೌರವಿಸಿದಂತೆ ಎಂದು ಹೇಳಿದರು. ಬಸವಣ್ಣನವರ ಚಿಂತನೆಗಳು ಬಹಳ ಅವಶ್ಯ, ಆದರೆ ೨೧ನೇ ಶತಮಾನದಲ್ಲಿದ್ದರೂ ಜಾತಿ ಲೆಕ್ಕಾಚಾರದಲ್ಲಿ ಇದ್ದೇವೆ. ಇಂದಿನ ಜಗದ್ಗುರುಗಳು ಜಾಗದ ಗುರುಗಳಾಗಿರುವರು ಎನ್ನುವ ಪಾಟೀಲ್ ಪುಟ್ಟಪ್ಪನವರ ಮಾತು ಸತ್ಯ, ಭೂಮಿಯ ಬೆಳಕು ಬಸವಣ್ಣ ಎನ್ನುವ ಮಾತನ್ನು ಸಿದ್ದಯ್ಯ ಪುರಾಣಿಕರು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ಕನ್ನಡ ಜನಪದೀಯರು ಕಂಡ ಬಸವಣ್ಣ ಎನ್ನುವ ವಿಷಯ ಕುರಿತು ಡಾ. ಎ.ಎನ್. ಸಿದ್ದೇಶ್ವರಿ ಅವರು ಮಾತನಾಡಿ ಅಕ್ಷರ ದಾಸೋಹ, ಅನ್ನದಾಸೋಹವನ್ನು ಕೆಳಮಟ್ಟದವರಿಗೆ ನೀಡಿದ ಬಸವಣ್ಣ ವಚನ ಸಾಹಿತ್ಯವನ್ನು ಜನಪದರಿಗೆ ತಂದು ಬೆಳಕು ಚೆಲ್ಲಿದರು. ಬೀಸುವ ಕಲ್ಲು ಜಾನಪದರಿಗೆ ಸರಸ್ವತಿ ಇದ್ದ ಹಾಗೆ, ಅವರು ಬಸವತತ್ವಕ್ಕೆ ಮಹತ್ವ ನೀಡಿದವರು, ಎಂದು ಹೇಳಿದರು.
ಆಯುರ್ವೇದ ವೈದ್ಯ ಡಾ. ಬಿ. ನಂಜುಂಡಪ್ಪ ಕಂಚಿ ಶಂಕರಾಚಾರ್ಯರು ವಚನ ಸಾಹಿತ್ಯದ ಪ್ರಕಟಣೆಯ ಇತಿಹಾಸ ಪರಿಚಯ ಮಾಡಿಕೊಟ್ಟರು.
ಚಿಂತಕ ಜೆ ಎಸ್ ಪಾಟೀಲ್ ಲಿಂಗಾಯತ ತತ್ವ ಸಿದ್ಧಾಂತಗಳು ಅನುಷ್ಠಾನ ಹಾಗು ಲಿಂಗಾಯತ ಧರ್ಮದ ಮೇಲಿನ ವೈದಿಕರ ದಾಳಿಯ ಕುರಿತು ಮಾತನಾಡಿದರು. ಡಾ. ರವಿಂದ್ರನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಮಠದ ಪ್ರಭುಸ್ವಾಮಿಗಳು ಹಾಗು ಪೂಜ್ಯ ಪ್ರಶಾಂತಸಾಗರ ಸ್ವಾಮಿಗಳು ಆಶಿರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕೊಟಗಿ ತಿಪ್ಪೇರುದ್ರ ನಿರೂಪಿಸಿದರು, ಅಕ್ಕನಬಳಗದವರು ಪ್ರಾರ್ಥಿಸಿದರು. ಚರಂತಯ್ಯ ಎಂ. ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪುಸ್ತಕಗಳು, ಲೇಖಕರು ದಾನಿಗಳು
ಬಯಲ ಗಳಿಕೆಯ ಮಹಾಬೆಳಗು
ಲೇಖಕರು ಡಾ. ಶಂಭು ಬಳಿಗಾರ, ದಾನಿಗಳು ಆಶಾ ಬಂಡೇಮ್ಯಾಗಳ, ಸಂಡೂರ
ಲಿಂಗಾಯತ ಅನುಸಂಧಾನ
ಲೇಖಕರು ಡಾ. ಗುರುಪಾದಪ್ಪ ಮರಿಗುದ್ದಿ, ದಾನಿಗಳು ಅಂದಪ್ಪ ಶಿವಪ್ಪ ರಡ್ಡೇರ ಗದಗ,
ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ
-ಲೇಖಕರು ಡಾ. ಮಲ್ಲಯ್ಯ ಸಂಡೂರು, ದಾನಿಗಳು ವೆಸ್ಕೋ ಕಂಪನಿ ಸಂಡೂರು,
ವಚನ ವ್ಯಾಸಂಗ: ಒಳನೋಟ
ಲೇಖಕರು ಡಾ. ಜೆ.ಎಸ್. ಪಾಟೀಲ್ ವಿಜಯಪುರ, ದಾನಿಗಳು ಚಿತ್ರಿಕಿ ಸತೀಶ್ ಯಶವಂತನಗರ
ಉತ್ತಮವಾದ ಕಾರ್ಯ ಇಂಥ ಮಠಗಳಿಗೆ
ಪ್ರೋತ್ಸಾಹಿಸಬೇಕು.
ಪುಸ್ತಕ ಪ್ರಕಟಣೆ, ಜ್ಞಾನ ದಾಸೋಹ ವನ್ನು ಗದುಗಿನ ತೋಂಟದಾರ್ಯ ಶ್ರೀಗಳಂತೆ ಸಂಡೂರಿ ವಿರಕ್ತಮಠದಲ್ಲಿ ಶ್ರೀಗಳು ಇಷ್ಡೊಂದು ಪುಸ್ತಕ ಪ್ರಕಟಣೆ ಲೋಕಾರ್ಪಣೆ ಮಾಡುತ್ರಿರುವುದು ನೋಡಿ ತುಂಬ ಖುಷಿಯಾಯಿತು. ಇದು ನಿಜವಾದ ಬಸವ ತತ್ವಗಳಆಚರಣೆ.