ಸಾಣೇಹಳ್ಳಿ
ಶಾಪ ವರ ಎನ್ನುವಂಥದ್ದು ನಮ್ಮ ಮನಸ್ಸಿನೊಳಗೆ ಇರುವ ಭ್ರಮೆ. ಯಾರಿಗೂ ಶಾಪ ಹಾಗೂ ವರ ಕೊಡುವ ಶಕ್ತಿಯಿಲ್ಲ. ನಮ್ಮ ಸಮಾಜ ಭಕ್ತರಿಗೆ ಇವತ್ತಿಗೂ ಗುರುಗಳ ಬಗ್ಗೆ ಸದ್ಭಾವನೆ ಇದೆ. ಗುರು ಶಿಷ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ ಮಠ ಹಾಗೂ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಂಗಳವಾರ ಹೇಳಿದರು.
ಇಲ್ಲಿನ ಎಸ್. ಎಸ್. ರಂಗಮಂದಿರದಲ್ಲಿ ನಡೆದ ‘ಹಳೆಬೇರು ಹೊಸ ಚಿಗುರು’ ಕಾರ್ಯಕ್ರಮದ ಅಡಿಯಲ್ಲಿ ದವಸ ಸಮರ್ಪಣೆ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಗಳು ಮಕ್ಕಳು, ಮೊಮ್ಮಕ್ಕಳು ವಯಸ್ಸಾದ ಹಿರಿಯರನ್ನು ಮಕ್ಕಳಂತೆ ಆರೈಕೆ ಮಾಡಬೇಕು. ನಮ್ಮ ಹಿರಿಯರು ಸಂಪತ್ತಿದ್ದಂತೆ. ಅವರೊಂದು ವಿಶ್ವಕೋಶ. ಅಂತಹ ವಿಶ್ವಕೋಶದಂತಿರುವ ಹಿರಿಯರನ್ನು ಅನಾಥಪ್ರಜ್ಞೆ ಕಾಡದಂತೆ ನೋಡಿಕೊಳ್ಳಬೇಕು, ಎಂದರು.
ಅವರನ್ನು ಗುರುತಿಸುವ ಕಾರ್ಯ ಮನೆಗಳಲ್ಲಿ ಮಠಗಳಲ್ಲಿ ಆಗಬೇಕು. ಇವತ್ತು ಸಾಣೇಹಳ್ಳಿ ಮಠದಲ್ಲಿ ಅವರನ್ನು ಗೌರವಿಸುವ ಕಾರ್ಯ ನಡೀತಾ ಇದೆ. ಮುಂದೆ ನಿಮ್ಮ ನಿಮ್ಮ ಮನೆಯಲ್ಲಿ ಪ್ರತಿನಿತ್ಯ ಗೌರವಿಸುವ ಕಾರ್ಯ ಆದಾಗ ಅವರು ನೆಮ್ಮದಿಯಿಂದ ಬದುಕಲಿಕ್ಕೆ ಸಾಧ್ಯ.

ಲಿಂಗಾಯತ ಧರ್ಮದಲ್ಲಿ ದಾಸೋಹ ಪದ್ದತಿ, ಇಷ್ಟಲಿಂಗಪೂಜೆ, ಕಾಯಕಶ್ರದ್ಧೆಯ ತತ್ವಗಳು ಇವೆ. ಪ್ರತಿಯೊಬ್ಬರೂ ಕಾಯಕಶೀಲರಾಗಬೇಕು. ಸೋಮಾರಿಗಳ ಮನಸ್ಸು ದೆವ್ವಗಳ ಆಗರವಾಗಿರುತ್ತದೆ. ಮನುಷ್ಯ ಒಂದಿಲ್ಲೊಂದು ಕಾಯಕ ಮಾಡಿ ಉಣ್ಣಬೇಕು. ಉಂಡು ಉಳಿದದ್ದನ್ನು ದಾಸೋಹ ರೂಪದಲ್ಲಿ ಒಳ್ಳೆಯ ಕೆಲಸಕಾರ್ಯಗಳಿಗೆ ಕೊಡಬೇಕು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಟ್ನಳ್ಳಿ ಮಹೇಶ್ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಹೊಸ ಹೊಸ ಗಳಿಗೆಯನ್ನು ಸೃಷ್ಠಿ ಮಾಡೋದ್ರಲ್ಲಿ ಪ್ರಥಮರು. ನಮ್ಮ ಕೃಷಿಕರು ಯಾವುದೇ ಕೆಲಸ ಮಾಡಿದರೂ ಒಳ್ಳೆಯ ಗಳಿಗೆಯನ್ನು ಸೃಷ್ಟಿ ಮಾಡಿಕೊಳ್ಳುವರು. ಇವತ್ತಿನ ದಿನಮಾನದ ಗಳಿಗೆ ವಿಷದ ಗಳಿಗೆಯಾಗುತ್ತಿದೆ. ನಮ್ಮ ಹಿರಿಯರು ಅನೇಕ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಹೊಸ ಗಳಿಗೆಯನ್ನು ಸೃಷ್ಟಿ ಮಾಡ್ತಾ ಬಂದಿದ್ದಾರೆ.
ಪ್ರತಿಕ್ಷಣವನ್ನು ತಿಳಿವಳಿಕೆಯ ಕ್ಷಣವನ್ನಾಗಿ ಮಾಡಿಕೊಳ್ಳಬೇಕು. ಪಂಡಿತಾರಾಧ್ಯ ಗುರುಗಳು ಭಕ್ತರ ಇದ್ದಲ್ಲಿಗೆ ಹೋಗಿ ಜ್ಞಾನದ ಧಾರೆಯನ್ನು ಎರೆದು ನಡೆದಾಡುವ ವಿಶ್ವವಿದ್ಯಾಲಯವಾಗಿದ್ದಾರೆ. ಅವರೊಬ್ಬ ಸರ್ವಕ್ಷೇತ್ರದ ಕುಲಪತಿಗಳು.
ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಸಮಾಜದೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು. ಶಿಷ್ಯರನ್ನು ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರಾದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹಳ್ಳಿ ಹಳ್ಳಿಗಳನ್ನು ಸುತ್ತಿ ಮಠಕ್ಕೆ ಬೇಕಾದ ದವಸ ಧಾನ್ಯಗಳನ್ನು ಸಂಗ್ರಹಿಸುತ್ತಿದ್ದರು. ಅವರಿಗೆ ವಾಕ್ಸಿದ್ಧಿ ಚೆನ್ನಾಗಿತ್ತು. ಅವರ ಕಾಲದಲ್ಲಾದ ತೋಟಗಳನ್ನು ಇಂದಿಗೂ ನಾವು ಕಾಣಬಹುದು.

ಸ್ವಾಮಿಗಳು ಒಳ್ಳೆಯ ಮಾತುಗಳನ್ನಾಡಿದರೆ ಅದೊಂದು ವರ. ಅವರು ನೊಂದುಕೊಂಡರೆ ಅದೊಂದು ಶಾಪ ಎನ್ನುವುದು ನಮ್ಮ ಭಕ್ತರಲ್ಲಿ ಇದ್ದ ಕಾರಣಕ್ಕಾಗಿ ಮಠ ಹಾಗೂ ಸಮಾಜ ಬೆಳೆಯಲು ಕಾರಣವಾಯಿತು. ಮಲ್ಲಿಕಾರ್ಜುನ ಶ್ರೀಗಳಿಗೆ ವ್ಯಾವಹಾರಿಕ ಚತುರತೆ ಇತ್ತು.
ಹಿರಿಯರಾದವರು ವಾಸ್ತವ ಸ್ಥಿತಿಯ ಪ್ರಜ್ಞೆಯನ್ನು ಅರಿತುಕೊಳ್ಳಬೇಕು. ಹಿರಿಯ ಜೀವಿಗಳು ದುಡಿದಿದ್ದಾರೆ ಎಂದು ಯುವಪೀಳಿಗೆಗೆ ಆದರ್ಶವಾಗಬೇಕು ಎಂದು ಇವತ್ತು ಹಿರಿಯರನ್ನು ಗೌರವಿಸುತ್ತಿರುವುದು. ಇವತ್ತಿನ ಯುವಪೀಳಿಗೆ ಜನಜೀವನದ ನಾಡಿಗಳಾಗಬೇಕು. ಹಿರಿಯರು ಮತ್ತು ಕಿರಿಯರಿಗೆ ಮಾರ್ಗದರ್ಶಕರಾಗಬೇಕೆ ಹೊರತು ವಾರಸುದಾರರಾಗಬಾರದು. ವಾರಸುದಾರರಾದರೆ ತಮ್ಮ ಹಿರಿತನ, ಗೌರವ ಹಾಗೂ ಸ್ಥಾನಮಾನವನ್ನು ಕಳೆದುಕೊಳ್ಳುವರು.
ಪ್ರತಿಯೊಬ್ಬರಲ್ಲೂ ವಯಸ್ಸಾಗುತ್ತೆ ಎನ್ನುವ ಪ್ರಜ್ಞೆ ಒಳಗಡೆ ಇರಬೇಕು. ಆಗ ಜವಾಬ್ದಾರಿ ಹೆಚ್ಚುತ್ತೆ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳಿಗೆ ಸಾಂಸ್ಕೃತಿಕ ಜವಾಬ್ದಾರಿಯಿತ್ತು. ಆ ಜವಾಬ್ದಾರಿತನದಿಂದಲೇ ಇಡೀ ಸಮಾಜಕ್ಕೆ ನಂದಾದೀವಿಗೆಯಾದರು. ಗುರುವಿಗೆ ಮಹಾನ್ ಗುರುವಾದರು.
ಹಿರಿಯರ ಜವಾಬ್ದಾರಿಯನ್ನು ಕಿರಿಯರಿಗೆ ಕೊಟ್ಟು ಜವಾಬ್ದಾರಿಯನ್ನು ಹೆಚ್ಚಿಸುವ ಮನೋಗುಣವನ್ನು ಬೆಳೆಸಿಕೊಳ್ಳಬೇಕು. ಇತ್ತಿಚಿನ ದಿನಗಳಲ್ಲಿ ಹಿರಿತನವನ್ನು ಮರೆತಾ ಇದ್ದೇವೆ. ಕೊಡುಕೊಳ್ಳುವ ಪ್ರಜ್ಞೆ ಹಿರಿಯರಲ್ಲಿ ಹಾಗೂ ಕಿರಿಯರಲ್ಲಿದ್ದಾಗ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಮಾಡಲು ಸಾಧ್ಯ.
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಕಾಲದಲ್ಲಿ ಗುರು ಶಿಷ್ಯರ ಸಂಬಂಧ ಸಾರ್ಥಕ ಸಂಮೃದ್ಧವಾಗಿತ್ತು. ಆ ಸಂಮೃದ್ಧತೆ ಈಗ ಗಟ್ಟಿಯಾಗಲಿ ಎಂದರು.
ಸಮಾರಂಭದಲ್ಲಿ ಸಮಾಜಕ್ಕೆ ಅನುಪಮ ಸೇವೆ ಸಲ್ಲಿಸಿದ ಹಿರಿಯ ಚೇತನಗಳಾದ ಪರ್ವತನಹಳ್ಳಿಯ ಚಂದ್ರಶೇಖರಪ್ಪ, ಕುಂಕನಾಡಿನ ರಾಮಲಿಂಗಪ್ಪ, ಕೊರಟಿಕೆರೆಯ ಸಣ್ಣ ಸಿದ್ಧಪ್ಪ, ಹೊಗರೆಹಳ್ಳಿ ಹೆಚ್ ಜಿ ಶೇಖರಪ್ಪ, ತಾವರಕೆರೆಯ ಪುಟ್ಟಪ್ಪ, ಚನ್ನಾಪುರ ರುದ್ರಪ್ಪ, ಮುಂಡ್ರೆಯ ನಿಂಗಪ್ಪ, ಮಲ್ಲೇನಹಳ್ಳಿಯ ನಾಗೇಂದ್ರಪ್ಪ, ಅತ್ತಿಮಗ್ಗೆಯ ಈಶ್ವರಪ್ಪ, ಚಿಕ್ಕನಾಯಕನಹಳ್ಳಿಯ ಮರುಳಸಿದ್ಧಪ್ಪ, ಜಂತಿಕೊಳಲು ಚಂದ್ರಯ್ಯ, ನಂದಿಯ ಮಲ್ಲಿಕಾರ್ಜುನಪ್ಪ, ನಾಗೇನಹಳ್ಳಿಯ ಬಸವರಾಜ, ಸೌತನಹಳ್ಳಿಯ ಮರುಳಪ್ಪ, ಚಿಕ್ಕನವಂಗಲದ ಮರುಳಪ್ಪ, ನೇರಲಕೆರೆಯ ಮಲ್ಲಿಕಾರ್ಜುನಪ್ಪ ಆರ್, ತಡಗದ ಮಲ್ಲಪ್ಪ, ಅಬ್ಬಿನಹೊಳಲಿನ ಈಶ್ವರಪ್ಪ, ಮೇದಿಹಳ್ಳಿಯ ವೀರಭದ್ರಪ್ಪ, ವಿಠಲಾಪುರದ ಪಟೇಲ್ ಮರುಳಪ್ಪ, ಕುರುಬರಹಳ್ಳಿಯ ಈಶ್ವರಪ್ಪ, ದೊಡ್ಡನಿಂಗೇನಹಳ್ಳಿಯ ಲೀಲಾ, ಅಜ್ಜಂಪುರದ ಮರುಳಪ್ಪ, ಹುಣಸಘಟ್ಟದ ಈಶ್ವರಪ್ಪ, ಅಂದೇನಹಳ್ಳಿಯ ಸಿದ್ಧಯ್ಯ, ಬಂಡಿಕೊಪ್ಪಲದ ಮಹೇಶ್ವರಪ್ಪ, ಸೊಕ್ಕೆಯ ವೀರಭದ್ರಪ್ಪ, ಜಾನಕಲ್‌ನ ಡಿ. ಎಸ್. ಶಂಕರಮೂರ್ತಿ, ಸಾಣೇಹಳ್ಳಿಯ ಎಸ್. ಡಿ. ಶಿವಮೂರ್ತಯ್ಯನವರನ್ನು ಗೌರವಿಸಿ ಅಭಿನಂದಿಸಲಾಯಿತು.
ದವಸ ಸಮಿತಿಯ ಮುಖ್ಯಸ್ಥರಾದ ಎ. ಸಿ. ಚಂದ್ರಪ್ಪ ಸ್ವಾಗತಿಸಿದರು. ಮತ್ತೋರ್ವ ಮುಖ್ಯಸ್ಥರಾದ ಎಸ್. ಆರ್. ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್. ಆರ್. ಚಂದ್ರಪ್ಪ ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಮಲ್ಲಿಕಾರ್ಜುನ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಸಿದ್ದಪ್ಪ ಎಸ್. ಉಪಸ್ಥಿತರಿದ್ದರು. ಹೊಸದುರ್ಗ, ತರೀಕೆರೆ, ಕಡೂರು, ಅಜ್ಜಂಪುರ, ಚನ್ನಗಿರಿ ತಾಲ್ಲೂಕಿನ ಭಕ್ತಾದಿಗಳು ಆಗಮಿಸಿ ಪ್ರತಿವರ್ಷದಂತೆ ಈ ವರ್ಷವೂ ರಾಗಿ, ಜೋಳ, ಕಡಲೆ, ತೆಂಗಿನಕಾಯಿ ಮುಂತಾದ ದವಸ ದಾನ್ಯಗಳನ್ನು ಶ್ರೀಮಠಕ್ಕೆ ಸಮರ್ಪಿಸಿದರು.
ಆರಂಭದಲ್ಲಿ ಜನವರಿ 27 ರಿಂದ 30 ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರಿನವರೆಗೆ ನಡೆದ ಪಾದಯಾತ್ರೆಯ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.