ಗುಳೇದಗುಡ್ಡ
ಶರಣ ಮಹೇಶ ಮುಧೋಳ, ಅವರ ಮನೆಯಲ್ಲಿ ಶನಿವಾರ, ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಜರುಗಿತು.
ಅನುಭಾವಕ್ಕೆ ಶರಣ ಶಂಕರ ದಾಸಿಮಯ್ಯ ತಂದೆಯ ವಚನವನ್ನು ಆಯ್ದುಕೊಳ್ಳಲಾಗಿತ್ತು.
ಕಾಯವಿಲ್ಲಾಗಿ ಮಾಯವಿಲ್ಲ, ಮಾಯವಿಲ್ಲಾಗಿ ಮಥನವಿಲ್ಲ,
ಮಥನವಿಲ್ಲಾಗಿ ಭಾವವಿಲ್ಲ.
ಭಾವವಿಲ್ಲಾಗಿ ಬಯಕೆಯಿಲ್ಲ,
ಬಯಕೆ ಇಲ್ಲಾಗಿ ನಿರ್ಭಾವ ನಿಜವನೈದಿ,
ನಿಜಗುರು ಶಂಕರದೇವರೆಂಬುದು ತಾನಿಲ್ಲ.
ಮನುಷ್ಯನ ಬಯಕೆ, ಆಸೆಗೆ ಕೊನೆಯಿಲ್ಲ. ಇಂಥ ಆಸೆಗಳನ್ನು ಶರಣರು ಮಾಯೆ ಎಂದು ಕರೆದರು. ಅದು ಮನದ ಮುಂದಣ ಆಸೆ. ಇದನ್ನು ಕಡಿದುಕೊಂಡಾಗಲೇ ಮನುಷ್ಯ ಮಹಾಮಾನವನಾಗುತ್ತಾನೆ. ಆನೆಗೆ ಅಂಕುಶವಿರುವಂತೆ ಮನಸ್ಸಿನ ಹಿಡಿತಕ್ಕೆ ವಚನಗಳಿವೆ. ಇಂಥ ವಚನಗಳನ್ನು ವ್ಯಷ್ಠಿ ಮತ್ತು ಸಮಷ್ಠಿ ಕಲ್ಯಾಣಕ್ಕೆ ಬಳಸಿಕೊಳ್ಳಬೇಕು. ಇಂಥ ವಚನರಾಶಿಯಲ್ಲಿ ಶರಣ ಶಂಕರದಾಸಿಮಯ್ಯನವರ ವಚನವೂ ಸೇರಿದೆ ಎಂದು ಶರಣ ಪ್ರೊ. ಶ್ರೀಕಾಂತ ಗಡೇದ ಅವರು ಅನುಭಾವ ನೀಡಿದರು.

ಅನುಭಾವಿಗಳಾದ ಶರಣ ಮಹಾಂತೇಶ ಸಿಂದಗಿಯವರು ಶಂಕರದಾಸಿಮಯ್ಯನವರ ಸಂಕ್ಷಿಪ್ತ ಚರಿತ್ರೆ ತಿಳಿಸುತ್ತ, ಹೆಣ್ಣು, ಹೊನ್ನು, ಮಣ್ಣುಗಳನ್ನು ಮಾಯೆಯೆಂದು ತಿಳಿದಿದ್ದ ಹಿಂದಿನವರಿಗೆ ನಿಜವಾದ ಮಾಯೆಯೆಂದರೆ ಶರೀರದ ಕರಣಾದಿ ಇಂದ್ರಿಯಗಳ ಆಸೆಯೇ ಮಾಯೆ ಎನಿಸುತ್ತದೆ. ಈ ಮಾಯೆ ಎಂಬುವದು ವಸ್ತುವಿನಲ್ಲಿಲ್ಲ. ಅದು ನೋಡುವ ಕಣ್ಣಿನಲ್ಲಿದೆ. ಸಕಲ ಆಸೆಗಳು ಹುಟ್ಟುವುದು ಇಲ್ಲಿಂದಲೇ. ಅದಕ್ಕಾಗಿಯೇ ಧರ್ಮಗುರು ಬಸವ ತಂದೆಯವರು ಇಷ್ಠಲಿಂಗವನ್ನು ದಯಪಾಲಿಸಿದರು. ಆ ಮುಖೇನ ಸಾಧನೆಯಿಂದ ಮಾಯೆಯನ್ನು ಗೆದ್ದು, ಕಾಯಕ-ದಾಸೋಹಗಳೊಂದಿಗೆ ಸಮನಾದ ಬದುಕನ್ನು ಬದುಕಿದರೆ ಆತನೇ ಶಿವನಾಗುತ್ತಾನೆ ಅಥವಾ ಶಂಕರಲಿಂಗನಾದ ಅಬೇಧವೇ ಆಗುತ್ತಾನೆ ಎಂದು ವಿವರಿಸಿದರು.
ಪ್ರಾಧ್ಯಾಪಕರಾದ ಶ್ರೀ ಮಹಾದೇವಯ್ಯ ನೀಲಕಂಠಮಠ ಅವರು ಅನುಭಾವವನ್ನು ಗೈಯುತ್ತ, ಶಂಕರ ದಾಸಿಮಯ್ಯನವರ ವಚನಗಳ ಸಂಖ್ಯೆ ಕಡಿಮೆ ಇದ್ದರೂ ಅನುಭಾವ ಪೂರ್ಣವಾಗಿವೆ. ಅಲ್ಲಿ ಆತ್ಮ ನಿರೀಕ್ಷಣೆ ಇದೆ.
ಮನುಷ್ಯ ತನ್ನ ತನುವಿನಿಂದಾಗಿ ಅದರ ಪೋಷಣೆಯಲ್ಲಿಯೇ ತೊಡಗಿ ಕುಬ್ಜನಾಗಿದ್ದಾನೆ. ಅದಕ್ಕೂ ಮೀರಿದ ಶರಣ ಬದುಕು ಅವನದಾಗಬೇಕು. ಅದು ಮನಸ್ಸಿನ ನಿಗ್ರಹದಿಂದ ಮಾತ್ರ ಸಾಧ್ಯ. ಅಂಗದಲ್ಲಿನ ಕಾಮನೆಗಳನ್ನು ಸುಟ್ಟಾಗ ಆತ ಶಿವನಾಗುತ್ತಾನೆ. ಮನದ ಬಯಕೆಗಳಲ್ಲಿಯೇ ಮಾಯೆ ಇದೆ. ಇದು ಶರೀರತ್ರಯದಲ್ಲಿ ಸೇರಿಕೊಂಡಿದೆ. ದುರ್ವಿಕಾರಕ್ಕೆ ಈಡು ಮಾಡುತ್ತದೆ. ಇಂಥ ಮನಸ್ಸಿನ ಕಾಮವನ್ನು ಸುಡುವುದೇ ನಿಜವಾದ ಕಾಮ ದಹನ. ಶರೀರ ಸಹಜವಾದ ಬಯಕೆಯನ್ನು ಕಿತ್ತೊಗೆದು ನಿರ್ಭಾವವಾಗುವದೇ ಬಯಲು. ಅದುವೇ ಲಿಂಗಸ್ಥಿತಿ. ಆಗ ತಾನೆಂಬುದಿಲ್ಲ ತನ್ನಿಂದ ಅನ್ಯವಾದ ಶಂಕರಲಿಂಗವೆಂಬುದಿಲ್ಲ. ಅಲ್ಲಿ ಇರುವುದು ಒಂದೇ. ಅದು ಸಮರಸ ಸ್ಥಿತಿ. ಇದನ್ನು ಎಲ್ಲರು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದೇ ವಚನವನ್ನು ಕುರಿತು ಅನುಭಾವವನ್ನು ಮುಂದುವರಿಸಿದ ಶರಣ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು ವಚನದ ಆಶಯವನ್ನು ವ್ಯಕ್ತಪಡಿಸುತ್ತ, ಶರಣಸ್ಥಲವನೈದಿದ ಸಾಧಕನು ಇರುವ ಸ್ಥಿತಿಯು ಈ ವಚನದಲ್ಲಿ ಒಡಮೂಡಿದೆ. ಒಂದೇ ಇದ್ದ ಆ ಪರಾತ್ಪರ ವಸ್ತು, ವಿಶ್ವಚೈತನ್ಯ ಅನೇಕವಾಗಿ ರೂಪಗೊಂಡು ಈ ವಿಶ್ವವಾಯಿತು. ತನುತ್ರಯಗಳನ್ನು ಪಡೆಯಿತು. ಪಂಚಭೂತ, ಪಂಚ ವಿಷಯ ಇತ್ಯಾದಿಗಳನ್ನು ಹೊಂದಿ ತಾನು ಮೂಲದಿಂದ ಬೇರೆಯೇ ಆಗಿದ್ದೇನೆ ಎಂದು ಭಾವಿಸಿ, ಶರೀರದ ಕಾರಣದಿಂದಾಗಿ ಮಲತ್ರಯಗಳನ್ನು ಹೊಂದಿ, ಮೋಹ ಮಮಕಾರಕ್ಕೆ ಒಳಗಾಗಿ, ಅರಿಷಡ್ವರ್ಗಕ್ಕೆ ತುತ್ತಾಗಿ, ಕೊನೆಗೆ ಅಷ್ಟ ಮದಗಳಿಗೆ ಗುರಿಯಾಗಿ, ತನ್ನತನವನ್ನೇ ಮರೆಯುತ್ತಾನೆ.
ಶರೀರವೇ ಸತ್ಯವೆಂದು ಭಾವಿಸಿ ಅಂಗನೆನಿಸಿಕೊಳ್ಳುತ್ತಾನೆ. ಆದರೆ, ತನ್ನಲ್ಲಿಯೇ ತಾನು ಅರಿವು ಮೂಡಿಸಿಕೊಂಡು, ಶರೀರದ ಗುಣಗಳನ್ನು ಕಳೆದುಕೊಳ್ಳಲುದ್ಯುಕ್ತನಾಗುತ್ತಾನೆ. ತಾನು ಶಿವಾಂಶಿಕನೆಂದು ಬಗೆಯುತ್ತಾನೆ. ಆಗ ಆತನಿಗೆ ಶರೀರವಿಲ್ಲ ಅಂದರೆ ಕಾಯವಿಲ್ಲ. ಅದರರ್ಥ ಶರೀರದ ಭಾವವಿಲ್ಲ. ಯಾವಾಗ ಶರೀರದ ಭಾವ ಅಳಿಯಿತೊ, ಜ್ಞಾನ ಅಂಕುರಿಸಿತೊ ಆವಾಗ ಅಜ್ಞಾನ ಸ್ವರೂಪದ ಮಾಯೆ ತೊಲಗುತ್ತದೆ. ಮಾಯೆ ತೊಲಗಿತೆಂದರೆ ಇಂದ್ರಿಯಗಳ ನಡುವಿನ ಹೊಯ್ದಾಟವಿಲ್ಲ. ಇಂದ್ರಿಯಗಳ ಹಿಡಿತ ಕಡಿತವಾದಾಗ ‘ಬೇಕು ಬೇಡೆಂಬ’ ಭಾವವಿಲ್ಲ. ತನ್ನ ಮರೆವಿನ ಕಾರಣದಿಂದಾಗಿ ಉಂಟಾದ ‘ಬೇರೆ’ ಎಂಬುದಿಲ್ಲ. ಹೀಗಾಗಿ ಆತನಲ್ಲಿ ಬೇಕು ಬೇಡೆಂಬುದೇ ಇಲ್ಲವಾದಾಗ ಸಹಜವಾದ ನಿರ್ಭಾವ ಸ್ಥಿತಿಯಲ್ಲಿರುತ್ತಾನೆ. ಇದು ಎರಡಳಿದ ದ್ವಂದ್ವ ಸ್ಥಿತಿಯಿಂದ ಮುಕ್ತವಾದ ಇರುವಿಕೆ. ಈ ಸ್ಥಿತಿಯೇ ಲಿಂಗಮಯ ಸ್ಥಿತಿ. ನಿಜವಾದ ಶಂಕರಲಿಂಗದೇವನ ಸ್ಥಿತಿಯಾಗಿರುತ್ತದೆ.

ಇಂತಹ ಇರುವಿಕೆಯನ್ನೇ ಶರಣರು ಬಯಲು, ಬಯಲಮೂರ್ತಿ ಎಂದು ಕರೆದರು. ಕಾಯವಿದ್ದು, ಕಾಯವಿಲ್ಲದ ಸ್ಥಿತಿಯಲ್ಲಿ ಬದುಕಿ, ಸರ್ವ ಸಮಾನತೆಯನ್ನು ಸಕಲರ ಕಲ್ಯಾಣದ ಆಶಯವನ್ನೂ ಬಯಸುವುದೇ ಎಲ್ಲ ಶರಣರ ಉದ್ದೇಶದಂತೆ ಶಂಕರ ದಾಸಿಮಯ್ಯನವರು ತಮ್ಮ ಈ ವಚನದಲ್ಲಿ ತಿಳಿಸಿದ್ದಾರೆ ಎಂದರು.
ಮಹಾಮನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿಂದ ಶರಣ ಸಿದ್ಧರಾಮೇಶ್ವರ ತಂದೆಗಳ ವಚನ ಬಸವ ಸ್ತುತಿಯೊಂದಿಗೆ ಪ್ರಾರಂಭವಾಗಿ, ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯರಾದ ಶರಣ ಮಹೇಶ ಮುಧೋಳ ಹಾಗೂ ಕುಟುಂಬದವರಿಗೆ ಕಾರ್ಯಕ್ರಮದ ಕಾರ್ಯದರ್ಶಿಗಳು ಶರಣು ಸಮರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶರಣಾದ ಮುತ್ತು ಲಗಳಿ, ಪ್ರೊ. ರಾಜೇಶ ಜಿರ್ಲಿ, ಪ್ರೊ. ಶಿವಕುಮಾರ ಶೀಪ್ರಿ, ಜಿರ್ಲಿ ಗೌಡರ, ಪುತ್ರಪ್ಪ ಬೀಳಗಿ, ಅಚನೂರ, ಪಾಂಡಪ್ಪ ಕಳಸಾ, ರಾಚಣ‍್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಯಂಡಿಗೇರಿ, ಶರಣೆಯರಾದ ಸುರೇಖಾ ಗೆದ್ದಲಮರಿ, ಶ್ರೀದೇವಿ ಶೇಖಾ ಹಾಗೂ ಮಹೇಶ ಮುದೋಳ ಹಾಗೂ ಅವರ ಪರಿವಾರದವರು ಸೇರಿದಂತೆ ಓಣಿಯ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.