ಸಾಣೇಹಳ್ಳಿಯಲ್ಲಿ 15 ದಿನಗಳ ಮಕ್ಕಳ ಶಿಬಿರದ ಉದ್ಘಾಟನೆ

ಸಾಣೇಹಳ್ಳಿ

ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಹಾಗೂ ಶ್ರೀ ಶಿವಕುಮಾರ ರಂಗಪ್ರಯೋಗಶಾಲೆಯ ಆಶ್ರಯದಲ್ಲಿ ನಡೆಯುತ್ತಿರುವ ಲತಾಮಂಟಪದಲ್ಲಿ ನಡೆದ ‘ಮಕ್ಕಳ ಹಬ್ಬ’ (ಬೇಸಿಗೆ ಶಿಬಿರ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಖುಷಿ ನಮ್ಮೊಳಗೇ ಇದೆ, ಅದನ್ನು ನಮ್ಮ ಬದುಕಿನ ವಿಧಾನದ ಮೂಲಕ ಕಂಡುಕೊಳ್ಳಬೇಕು.

ಈ ಶಿಬಿರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡೋದಲ್ಲ. ಇದುವರೆಗೂ ಕಲಿತದ್ದನ್ನು ಮರೆಸಿ ಹಕ್ಕಿಗಳಂತೆ ಹಾರಾಡಿ ಖುಷಿ ಪಡ್ತಾ ಹೊಸ ಅನುಭವಗಳನ್ನು ಅನುಭವಿಸುತ್ತಾ ಹೋಗುವುದೇ ಶಿಬಿರದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳ ಬಗ್ಗೆ ಆಲೋಚಿಸಬೇಕು. ಮಕ್ಕಳು ಮೊಬೈಲ್‌ಗಳಿಂದ ದೂರ ಇರಬೇಕು. ಮೊಬೈಲ್ ಎಷ್ಟು ಉಪಯೋಗವೋ ಅಷ್ಟೇ ದುರುಪಯೋಗವಾಗುವುದು. ಮಕ್ಕಳು ಮೊಬೈಲ್‌ ಗೀಳಿನಿಂದ ಮತಿವಿಕಲರಾಗಿದ್ದಾರೆ. ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಮೊಬೈಲ್‌ನ್ನು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳಬೇಕು. ಆಗ ನಿಮ್ಮ ಬದುಕು ಪಾವನವಾಗುವುದು.

ಇತ್ತೀಚಿಗೆ ಟಿವಿಯ ಹುಚ್ಚು ಹೆಚ್ಚಾಗಿದೆ. ಅನೇಕ ಚಾಲನ್‌ಗಳಲ್ಲಿ ಬರುವ ವಿಚಾರಗಳು ನಮ್ಮ ಬುದ್ದಿಯನ್ನು ವಿಕಾಸಗೊಳಿಸುವುಕ್ಕಿಂತ ಹೆಚ್ಚಾಗಿ ವಿಕಾರಗೊಳಿಸುವ ವಿಚಾರಗಳೇ ಹೆಚ್ಚಾಗಿವೆ. ‘ಮನೆಯೊಂದು ಮೂರು ಬಾಗಿಲು’ ಅಂತ ಹೇಳಿ ನಮ್ಮ ಬದುಕನ್ನು ಒಡೆಯುವ ಕೆಲಸ ಮಾಡುತ್ತವೆ.

ನಾನು ಬೆವರು ಸುರಿಸಿ ದುಡಿದ ಹಣವನ್ನು ಮಾತ್ರ ನನಗಿರಲಿ ಎನ್ನುವ ಹಣದ ಮಹತ್ವವನ್ನು ಅರಿತುಕೊಳ್ಳಬೇಕು. ಗೆದ್ದೇವೆಂದು ಬೀಗದೇ, ಸೋತೆವೆಂದು ಕುಗ್ಗದೇ ಸಮಚಿತ್ತ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ವೈರಿಯನ್ನು ಮಿತ್ರನನ್ನಾಗಿ ಮಾಡಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಜಗತ್ತೇ ನಮ್ಮನ್ನು ಟೀಕೆ ಮಾಡಿದರೂ ಪರ್ವಾಗಿಲ್ಲ ನನಗೆ ನನ್ನ ಮೇಲೆ ನಂಬಿಕೆ ಇದೆ ಎನ್ನುವ ವಿಶ್ವಾಸವನ್ನಿಟ್ಟುಕೊಳ್ಳಬೇಕು. ಬೇರೆಯವರನ್ನು ನೋಡಿ ನಗುವುದಕ್ಕಿಂತ ನನ್ನನ್ನು ನಾನು ನೋಡಿ ನಗುವುದನ್ನು ಕಲಿಯಬೇಕು. ಇನ್ನೊಬ್ಬರ ನೋವಿನಲ್ಲಿ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ನಿಮ್ಮ ಬದುಕು ಉಜ್ವಲವಾಗುವುದು ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಹದಿನೈದು ದಿನಗಳ ಅವಧಿಯಲ್ಲಿ ಈ ಎಲ್ಲ ಆಶಯಗಳನ್ನಿಟ್ಟುಕೊಂಡು ಶಿಬಿರವನ್ನು ಏರ್ಪಡಿಸಲಾಗಿದೆ. ಇವೆಲ್ಲವೂ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲಿಕ್ಕೆ ಸಹಕಾರಿಯಾಗುವುದು.

ಸ್ನಾನ ಮಾಡುವುದು ದೇಹಕ್ಕಷ್ಟೇ ಅಲ್ಲ ಮನಸ್ಸಿನೊಳಗಡೆ ಮಾಡಬೇಕು. ಮನಸ್ಸಿನೊಳಗಡೆ ಇರುವ ಕೊಳೆಯನ್ನು ಕಳೆದುಕೊಳ್ಳಬೇಕು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇಂತಹ ದುರ್ಗುಣಗಳನ್ನು ಹೊರಹಾಕಿ ಪ್ರೀತಿ, ಸತ್ಯ, ಧರ್ಮ, ಅಹಿಂಸೆ ತತ್ವಗಳನ್ನು ಒಳಗಡೆ ತುಂಬಿಕೊಳ್ಳಬೇಕು. ಯಾವಾಗ ಮನುಷ್ಯ ಒಳಗಡೆ ಒಳ್ಳೆಯ ವಿಚಾರಗಳನ್ನು ತುಂಬಿಕೊಳ್ತಾ ಹೋಗ್ತಾನೋ ಅವನು ಹೊರಗಡೆ ಒಳ್ಳೆಯವನಾಗಿ ಬಾಳಲು ಸಾಧ್ಯ.

ಅನೇಕ ಕಡೆ ಬೆಂಕಿ ಹಚ್ಚುವ ಕಾರ್ಯ ಹೆಚ್ಚಾಗಿ ನಡೀತಾ ಇದೆ. ಬೆಳಕು ಕೊಡುವ ಕಾರ್ಯ ಆಗ್ತಾ ಇಲ್ಲ. ಬೆಂಕಿಯನ್ನು ಅಳಿಸುವ ಕಾರ್ಯ ಮಾಡಬೇಕು. ಬೆಳಕು ನೀಡುವ ಕಾರ್ಯನೂ ಮಾಡಬೇಕು. ನಮ್ಮ ಉದ್ದೇಶ ಬೆಂಕಿ ಹಚ್ಚುವುದಲ್ಲ. ಹಚ್ಚಿದ ಬೆಂಕಿಯನ್ನು ಆರಿಸುವುದು. ಹೊಸದಾಗಿ ಬೆಳಕನ್ನು ಕೊಡುವುದು. ಆಗ ಈ ಶಿಬಿರದ ಉದ್ದೇಶ ಈಡೇರಿದಂತಾಗುವುದು.

ಶಿಬಿರದ ನಿರ್ದೇಶಕರಾದ ಕೃಷ್ಣಮೂರ್ತಿ ಮೂಡಬಾಗಿಲು ಮಾತನಾಡಿ ಮಕ್ಕಳು ಈ ಶಿಬಿರದ ಮೂಲಕ ದೈಹಿಕವಾಗಿ, ಮಾನಸಿಕವಾಗಿ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ಕಲಾತ್ಮಕ ಹಾಗೂ ಸೃಜನಾತ್ಮವಾಗಿ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಸಂಗೀತ, ಸಾಹಿತ್ಯ, ನೃತ್ಯ, ಪರಿಸರದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು. ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣ ಸಾಣೇಹಳ್ಳಿಯಲ್ಲಿದೆ. ಇದನ್ನು ಎಲ್ಲ ಶಿಬಿರಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಚರಕದಿಂದ ನೂಲು ತೆಗೆಯುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಿತಾರಾ ಇಪ್ಪತ್ತು ವರ್ಷಗಳ ಹಿಂದೆ ಸಾಣೇಹಳ್ಳಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಓದಿದ್ದು. ನಿಮ್ಮ ಹಾಗೆ ನಾನು ಸಾಣೇಹಳ್ಳಿಯ ಶಿಬಿರದಲ್ಲಿ ಭಾಗವಹಿಸಿದ್ದೆ. ಗುರುಗಳ ಆಶೀರ್ವಾದದಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದು ನಿಮ್ಮ ಮುಂದೆ ಕೂತಿದ್ದೇನೆ. ಅದ್ದರಿಂದ ನಿಮ್ಮ ವ್ಯಕ್ತಿತ್ವವನ್ನು ನೀವು ವಿಕಾಸಗೊಳಿಸಿಕೊಂಡಾಗ ನಿಮ್ಮ ಮುಂದಿನ ಬದುಕು ಉಜ್ವಲವಾಗುತ್ತದೆ ಎಂದರು.

ಬೆಂಗಳೂರಿನ ಉದ್ಯಮಿ ಧನ್ಯಕುಮಾರ್ ಮಾತನಾಡಿ; ಇಲ್ಲಿನ ಪರಿಸರ, ಗ್ರಾಮೀಣ ಸೊಗಡು, ಆಚಾರ ವಿಚಾರಗಳು, ಶರಣರ ತತ್ವಸಿದ್ಧಾಂತಗಳು ಇವೆಲ್ಲವುಗಳನ್ನು ನಮ್ಮ ಮಕ್ಕಳು ಕಲಿತರೆ ಮುಂದೆ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗುವರು. ನಿಮ್ಮೆಲ್ಲರಿಗೂ ಅಂತಹ ಅವಕಾಶಗಳು ಸಿಕ್ಕಿವೆ. ಅದನ್ನು ಸದ್ಭಳಿಕೆ ಮಾಡಿಕೊಳ್ಳಬೇಕು. ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ನಮ್ಮ ಮಕ್ಕಳನ್ನು ವಿದೇಶದ ಶಿಬಿರಗಳಿಗೆ ಕಳಿಸಿದ್ವಿ. ಆದರೆ ನಮ್ಮ ಸಾಣೇಹಳ್ಳಿಯಲ್ಲಿ ಸಿಗುವಂಥ ಸಂಸ್ಕೃತಿ, ಸಂಸ್ಕಾರ ವಿದೇಶದಲ್ಲಿ ಸಿಗೋದಿಲ್ಲ. ಸಾಣೇಹಳ್ಳಿಯಲ್ಲಿ ಕಲಿಯುವ ವಿದ್ಯಾರ್ಥಿಗಳ ಬದುಕಿನಲ್ಲಿ ಇದೊಂದು ಭದ್ರಬುನಾದಿಯಾಗಲಿದೆ ಎಂದರು.

ವೇದಿಕೆಯ ಮೇಲೆ ನಿರ್ದೇಶಕರಾದ ಜಗದೀಶ ನೆಗಳೂರು, ರುಚಿತ್ ಕುಮಾರ್, ನಂದಿನಿ, ಚಂದ್ರಮ್ಮ, ಮುಖ್ಯಶಿಕ್ಷಕರಾದ ಕೆ. ಆರ್. ಬಸವರಾಜ, ರಂಗಶಾಲೆಯ ಪ್ರಾಂಶುಪಾಲ ಮಧು ಉಭಯ ಶಾಲೆಯ ಅಧ್ಯಾಪಕರು, ಶಿಬಿರಾರ್ಥಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಸಂಗೀತ ಶಿಕ್ಷಕ ನಾಗರಾಜ ಹಾಗೂ ಶಿಬಿರಾರ್ಥಿಗಳು ವಚನಗೀತೆಗಳನ್ನು ಹಾಡಿದರು. ಮುಖ್ಯಶಿಕ್ಷಕ ಬಿ.ಎಸ್. ಶಿವಕುಮಾರ ಸ್ವಾಗತಿಸಿದರೆ, ರಾಜು ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *