ಸಾಣೇಹಳ್ಳಿ ಮಠದಲ್ಲಿ ಬುದ್ಧ, ಬಸವಣ್ಣ ಪ್ರತಿಮೆಗಳಿಗೆ ಪುಷ್ಟನಮನ

ಪ್ರತಿಮೆಗಳನ್ನಿಟ್ಟಿರುವುದು ಪೂಜೆ ಮಾಡುವುದಕ್ಕಲ್ಲ. ಅವರ ಆಲೋಚನೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ.

ಸಾಣೇಹಳ್ಳಿ

ಕಳೆದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನದವರು ಏರ್ಪಡಿಸಿದ್ದ ಶ್ರೀಲಂಕಾ ಪ್ರವಾಸದ ನೆನಪಿಗಾಗಿ ಹೊಸದಾಗಿ ಬುದ್ಧ ಹಾಗೂ ಬಸವಣ್ಣನವರ ಪ್ರತಿಮೆಗಳನ್ನು ಶ್ರೀಮಠಕ್ಕೆ ತಂದು ಹೊಸದಾಗಿ ನಿರ್ಮಾಣವಾಗಿರುವ ಅನುಭವ ಮಂಪಟದಲ್ಲಿಟ್ಟು ಪುಷ್ಟನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು ಬುದ್ಧ ಹಾಗೂ ಬಸವಣ್ಣನವರ ಪ್ರತಿಮೆಗಳು ನಮ್ಮ ಕಣ್ಮುಂದೆ ಕಾಣುತ್ತವೆ. ವಾಸ್ತವವಾಗಿ ಪ್ರತಿಮಾ ಸಂಸ್ಕೃತಿ ನಮ್ಮದಲ್ಲ. ಪ್ರತಿಮೆಗಳು ಪ್ರತಿಪಾದಿಸುವಂಥ ತತ್ವಗಳನ್ನು ಎತ್ತಿಹಿಡಿಯುವಂಥದ್ದು ನಮ್ಮ ಸಂಸ್ಕೃತಿ.

ಈ ಅನುಭವ ಮಂಟಪದಲ್ಲಿ ಪ್ರತಿಮೆಗಳನ್ನಿಟ್ಟಿರುವುದು ಪೂಜೆ ಮಾಡುವುದಕ್ಕಲ್ಲ. ಅವರ ಆಲೋಚನೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ. ಅನುಭವ ಮಂಟಪದಲ್ಲಿ ಅನುಭಾವ ಗೋಷ್ಠಿಗಳಾಗಬೇಕೆಂಬ ಆಲೋಚನೆ ನಮ್ಮದು. ಇಲ್ಲಿ ವಿಶ್ವದ ಅನೇಕ ಸಂತರ ಆದರ್ಶಗಳ ಬಗ್ಗೆ ಚಿಂತನೆ ಮಾಡುವುದರ ಜೊತೆಗೆ ನಮ್ಮ ಜೀವನದಲ್ಲಿ ಸಾಕಾರಗೊಳ್ಳಬೇಕು. ಇವತ್ತು ಚಿಂತನೆಗಳಿಗೆ ಕೊರತೆ ಇಲ್ಲ. ಆದರೆ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವವರ ಸಂಖ್ಯೆ ತುಂಬಾ ವಿರಳ.

ಇತ್ತಿಚಿನ ಮಾಧ್ಯಮಗಳಲ್ಲಿ ಬರುವಂಥ ವಿಚಾರಗಳನ್ನು ನೋಡಿದರೆ ಮನಸ್ಸನ್ನು ಅರಳಿಸುವಂಥ ಸುದ್ದಿಗಿಂತ ಕೆರಳಿಸುವಂಥ ಸುದ್ದಿಗಳೇ ಹೆಚ್ಚೆಚ್ಚು ಕಂಡುಬರುತ್ತವೆ. ಎಲ್ಲ ಕ್ಷೇತ್ರಗಳಲ್ಲೂ ದಿನದಿನದಿಂದ ದಿನಕ್ಕೆ ನೈತಿಕ ಮಟ್ಟ ಕುಸಿಯುತ್ತಿದೆ. ಮನುಷ್ಯ ದೊಡ್ಡನಾಗುವುದು ಹಣದಿಂದ ಅಲ್ಲ; ಗುಣದಿಂದ. ಹಣದ ದಾಸರಾಗಿ ಭ್ರಮೆಯ ಬದುಕಿನಲ್ಲಿ ತೇಲಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಭ್ರಮೆಯನ್ನು ಮುಕ್ತಗೊಳಿಸುವ ಕೆಲಸ ಮಾಡಿದವರು ಬುದ್ಧ, ಬಸವ, ಗಾಂಧೀ.

ಬಸವಣ್ಣ ತುಂಬಾ ಸರಳವಾಗಿ ಬಾಳಿದರು. ಎಲ್ಲರ ಪ್ರೀತಿಯನ್ನು ಸಂಪಾದನೆ ಮಾಡಿದರು. ತಳಸಮುದಾಯದ ಜನರನ್ನು ಮೇಲೆತ್ತಿದರು. ೧೨ನೆಯ ಶತಮಾನದಲ್ಲಿ ೨೫೦ ಜನ ಏಕಕಾಲಕ್ಕೆ ವಚನಕಾರರಾದರು. ಇವರಿಗೆ ಶಿಕ್ಷಣ ಇರಲಿಲ್ಲ. ಎಲ್ಲರಿಂದ ಉಪೇಕ್ಷಿತರಾದವರು. ಇಂಥವರು ವಚನಗಳನ್ನು ರಚಿಸಿದ್ದಾರೆಂದರೆ ಬಸವಣ್ಣನವರ ವ್ಯಕ್ತಿತ್ವ ಎಷ್ಟೊಂದು ಹಿರಿಯದಾಗಿತ್ತು ಎಂದು ಅರ್ಥ ಮಾಡಿಕೊಳ್ಳಬೇಕು.

ಬುದ್ಧ ಬಸವಣ್ಣನವರಿಗಿಂತ ಪೂರ್ವದಲ್ಲಿದ್ದವರು. ರಾಜಕುಮಾರರಾಗಿದ್ದವರು. ವೈಭೋಗದ ಜೀವನ ನಡೆಸಬಹುದಾಗಿತ್ತು. ಆದರೆ ಅವರಿಗೆ ಅನಿಸಿದ್ದು ದುಃಖಕ್ಕೆ ಪರಿಹಾರ ಇಲ್ವಾ? ಪರಿಹಾರ ಕಂಡುಕೊಳ್ಳಬೇಕೆಂದು ಮನೆ, ಮಡದಿ, ಮಕ್ಕಳನ್ನು ಬಿಟ್ಟು ಹಲವು ವರ್ಷಗಳ ಕಾಲ ಜ್ಞಾನ ಸಂಪಾದಿಸಬೇಕೆಂದು ಯಾರ್ಯಾರೋ ಬಳಿ ಹೋಗ್ತಾರೆ. ಕೊನೆಗೆ ಬೋಧಿವೃಕ್ಷದಡಿಯಲ್ಲಿ ಜ್ಞಾನೋದಯವಾಯಿತು ಅಂತ ಹೇಳ್ತಾರೆ. ಜ್ಞಾನ ಸಂಪಾದಿಸಿದ ನಂತರ ಬುದ್ಧ ಲೋಕಕ್ಕೆ ಬೆಳಕಾದರು. ಏಷ್ಯಾದ ಬೆಳಕು ಗುರುತಿಸುವರು. ಆದರೆ ದುರ್ದೈದವರ ಸಂಗತಿ ಅಂದರೆ ಭಾರತದಲ್ಲಿ ಹುಟ್ಟಿ ಬೆಳೆದ ಬುದ್ಧನ ತತ್ವಗಳು ಮಣ್ಣುಪಾಲಾಗುತ್ತಿರುವುದು ನೋವಿನ ಸಂಗತಿ. ಅದಕ್ಕೆ ಕಾರಣ ನಮ್ಮ ದುರಾಸೆ, ಹಣದ ವ್ಯಾಮೋಹ, ಭೋಗ ಜೀವನ. ಇದರಿಂದ ಮನುಷ್ಯ ಹೊರಬರಬೇಕು ಎನ್ನುವಂಥದ್ದೇ ಮತ್ತೆ ಇಂತಹ ಪ್ರತಿಮೆಗಳನ್ನು ನಮ್ಮ ಕಣ್ಮುಂದೆ ನೋಡ್ತಾ ಹೋಗುವುದು. ಇಂತಹ ಪ್ರತಿಮೆಗಳು ತತ್ವಗಳಾಗಿ ನಮ್ಮ ಬದುಕಿನಲ್ಲಿ ಬದಲಾಗಬೇಕು.

ನಮ್ಮ ಮಠದ ಪರಿಸರದಲ್ಲಿ ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್, ಅಕ್ಕ ಹೀಗೆ ಅನೇಕ ದಾರ್ಶನಿಕರ ಶರಣರ ಪ್ರತಿಮೆಗಳಿವೆ. ಅವುಗಳನ್ನು ಪೂಜೆ ಮಾಡೋದಕ್ಕೆ ಶುರು ಮಾಡಿದರೆ ಅವರ ತತ್ವಗಳನ್ನು ಮಣ್ಣುಪಾಲು ಮಾಡಿದಂತೆ. ನಮ್ಮ ಉದ್ದೇಶ ಅದಲ್ಲ. ಆ ತತ್ವಗಳನ್ನು ನಮ್ಮ ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳುವಂಥದ್ದು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಮಾತನಾಡಿದರು. ಸದಸ್ಯರಾದ ಮಂಜುನಾಥ ಸ್ವಾಗತಿದರೆ ಬೋಪಯ್ಯ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಹೆಚ್.ಎಸ್. ವಚನಗೀತೆಗಳನ್ನು ಹಾಡಿದರು. ಶ್ರೀಲಂಕಾದ ಪ್ರವಾಸಿಗರು ಅನುಭವಗಳನ್ನು ಹಂಚಿಕೊಂಡರು. ಕಲಾಸಂಘದ ಪದಾಧಿಕಾರಿಗಳು, ಶಿವಸಂಚಾರದ ಕಲಾವಿದರು ಹಾಗೂ ರಂಗಪ್ರಯೋಗಶಾಲೆಯ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರು, ಶಿಕ್ಷಕರು ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *