ಹೊಸದುರ್ಗ:
ಕಾಯಕ ಕುರಿತು ಬಸವಣ್ಣನವರು ಹೇಳಿದ್ದನ್ನು ಪಾಲಿಸಿದರೆ ನಿರೋಗಿಗಳಾಗುತ್ತೇವೆ ಎಂದು ಲೇಖಕಿ ಡಾ. ಎಚ್.ಎಸ್. ಅನುಪಮಾ ಹೇಳಿದರು. ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸೋಮವಾರ ‘ಆರೋಗ್ಯವೇ ಭಾಗ್ಯ’ ಕುರಿತು ಮಾತನಾಡಿದರು.
ಕಾಯಕವನ್ನು ಧರ್ಮವಾಗಿ ಮಾಡಿದ್ದು ಬಸವಣ್ಣನವರು. ಯಾವ ಕೆಲಸವೂ ಕೀಳಲ್ಲ. ಯಾರೂ ಕೀಳಲ್ಲ ಎಂದು ಸಾರಿದ್ದು ಲಿಂಗಾಯತ ಧರ್ಮ ಎಂದು ಪ್ರತಿಪಾದಿಸಿದರು.
ನಮ್ಮ ಕಾಯಕ ಅರಿತು ಸತ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಆದರೆ ಅನಾರೋಗ್ಯಕ್ಕೆ ಕಾರಣ ಶ್ರಮವಿಲ್ಲದ, ಶಿಸ್ತಿಲ್ಲದ ಜೀವನದ ಜೊತೆಗೆ ಅನಿಯಮಿತವಾಗಿ ಬದುಕುತ್ತಿದ್ದೇವೆ. ಹೀಗೆಂದು ಹೊಸ ತಲೆಮಾರನ್ನು ಬೈಯ್ಯಬೇಕಿಲ್ಲ. ಅವರಿಗೆ ಶ್ರಮವಿಲ್ಲದ ಬದುಕಿನ ಮಾದರಿಯನ್ನು ತೆರೆದಿಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಊಟ, ತಿಂಡಿಗೆ ಕೊರತೆಯಿಲ್ಲ, ಆಸ್ಪತ್ರೆಗಳಿಗೆ ಕೊರತೆಯಿಲ್ಲ. ಆದರೆ ಆರೋಗ್ಯಕರ ಬದುಕಿಲ್ಲ. ಹೇಗೆಂದರೆ ರಾತ್ರಿ ಹನ್ನೆರಡು ಗಂಟೆಯವರೆಗೂ ಎಚ್ಚರ ಇರುತ್ತೇವೆ. ಯುವಕರಲ್ಲದೆ ಎಲ್ಲಾ ವಯೋಮಾನದವರು ಸುಳ್ಳಿನ ರೀಲ್ಸ್ ನೋಡುತ್ತ ಕಾಲ ಕಳೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ದೇಹಕ್ಕೆ ಎರಡು ಹೊತ್ತು ಊಟ ಸಾಕು. ಆದರೆ ಚೆನ್ನಾಗಿರಲೆಂದು ಮೂರು ಹೊತ್ತು ಊಟ ಮಾಡುತ್ತೇವೆಂದು ಮಹಾತ್ಮಾ ಗಾಂಧಿ ಹೇಳುತ್ತಿದ್ದರು. ಶ್ರಮ ಬಿಟ್ಟು ಜಂಕ್ ಫುಡ್ ಸೇವಿಸುತ್ತಲೇ ಇರುವುದು ಅನಾರೋಗ್ಯಕರ ಲಕ್ಷಣ. ಹಾಗೆಯೇ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಹಿತಮಿತ ಆರೋಗ್ಯ, ಕೇಡಿಲ್ಲದ ಮನ ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.
ನಮ್ಮ ಹಿರಿಯ ತಲೆಮಾರಿನವರು ತಾಮ್ರದ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಲಿವರ್ ಸಮಸ್ಯೆಯಿಂದ ಮಕ್ಕಳು ಮೃತಪಡುತ್ತಿದ್ದರು. ತಾಮ್ರದ ಬಿಂದಿಗೆ, ಚೊಂಬಿನಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕರ. ಲಿವರ್ ಗೆ ಹಾನಿ ಎಂದು ಎಚ್ಚರಿಕೆ ನೀಡಿದರು. ಹಳೆಯದೆಲ್ಲ ಒಳ್ಳೆಯದಲ್ಲ. ಸ್ಟೀಲ್ ಉತ್ತಮ. ಇದಕ್ಕಿಂತ ಗಾಜು ಇನ್ನೂ ಉತ್ತಮ ಎಂದು ಡಾ. ಅನುಪಮಾ ಹೇಳಿದರು.
ಕಹಳೆ ಊದುವ, ಉರುಮೆ ಬಾರಿಸುವ ಕಲಾವಿದರಾದ, ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ಚೀಳಂಗಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ನಂತರ ಅವರು ಮಾತನಾಡಿ, 84 ವರ್ಷದ ನಾನು ಒಂದು ರೂಪಾಯಿಗೆ ಕೂಲಿ ಮಾಡಿದೆ. ಎಮ್ಮೆ ಮೇಯಿಸಿ ನಾಲ್ಕು ಮಕ್ಕಳನ್ನು ಓದಿಸಿದೆ. ಕೈಬಾಯಿ ಸ್ವಚ್ಛ ಇರಲಿ ಎಂದು ನಮ್ಮಪ್ಪ ಹೇಳುತ್ತಿದ್ದ. ನಮ್ಮ ತಾತ ಉರುಮೆ ಬಾರಿಸುವುದನ್ನು ಕಲಿಸಿದ. ನಮ್ಮ ಕುಟುಂಬದ 25 ಸದಸ್ಯರೆಲ್ಲ ಒಟ್ಟಿಗೇ ಇದ್ದೇವೆ ಎಂದರು.

