ರಾಷ್ಟ್ರದ ಏಳ್ಗೆಗಾಗಿ ನಡೆಯುತ್ತಿರುವ ಸಾಣೇಹಳ್ಳಿ ನಾಟಕೋತ್ಸವ: ತಿರುಪತಿ ಪಾಟೀಲ್

ಎಚ್. ಎಸ್. ದ್ಯಾಮೇಶ
ಎಚ್. ಎಸ್. ದ್ಯಾಮೇಶ

ಸಾಣೇಹಳ್ಳಿ

ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ ನಿಮಿತ್ತ ಶ್ರೀಮಠದ ಆವರಣದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ತಿರುಪತಿ ಪಾಟೀಲ್ ಶಿವಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿ, ಮೂಲ ಬೇರುಗಳನ್ನು ಉಳಿಸುವ, ಬೆಳೆಸುವ ಮೂಲಕ ರಾಷ್ಟ್ರದ ಏಳ್ಗೆಯನ್ನು ಬಯಸುವ ಕಾರ್ಯಕ್ರಮವನ್ನು ಪೂಜ್ಯರು ನಾಟಕೋತ್ಸವದ ಮೂಲಕ ನಡೆಸಿಕೊಂಡು ಬರುತ್ತಿದ್ದಾರೆ. ಇದು ಹೆಮ್ಮೆ ಮತ್ತು ಸಂತೋಷದಾಯಕ ವಿಚಾರ.

ಈ ಬಾರಿಯ ನಾಟಕೋತ್ಸವದ ಧ್ಯೇಯ ವಾಕ್ಯ `ಸರ್ವೋದಯದ ಏಳ್ಗೆ’. ಅಂದರೆ ಇಲ್ಲಿ ಯಾವುದೇ ಕುಲ, ಜಾತಿ, ಮತ, ಪಂಥಗಳಿಲ್ಲ. ಸರ್ವರ ಏಳ್ಗೆಯೇ ನಾಟಕೋತ್ಸವದ ಮೂಲ ಉದ್ದೇಶ. ಮಹಾನ್ ನಾಯಕರ, ದಾರ್ಶನಿಕರ ಆದರ್ಶಗಳನ್ನು ನಾಟಕಗಳ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಭವ್ಯ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೂಜ್ಯರ ಇಂಥ ಪ್ರಯತ್ನಗಳು ಅತ್ಯಂತ ಸ್ತುತ್ಯರ್ಹವಾದವು ಎಂದರು.

ರಾಷ್ಟ್ರೀಯ ನಾಟಕೋತ್ಸವದ ನೇತೃತ್ವ ವಹಿಸಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಮ್ಮ ಶ್ರೀ ಮಠದ ಪರಂಪರೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಶಿವ ಧ್ವಜಾರೋಹಣ’ದ ಮೂಲಕ ಆರಂಭ ಮಾಡುವ ಸತ್ಸಂಪ್ರದಾಯವನ್ನು ನಮ್ಮ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಆರಂಭಿಸಿದರು. ಅದೇ ಪರಂಪರೆಯನ್ನು ನಾವು ಇಂದು ಮುಂದುವರಿಸಿದ್ದೇವೆ. ಶಿವ ಎಂದರೆ ಶುಭ, ಮಂಗಳ, ಒಳಿತು, ಲೇಸು. ಇದು ಯಾವುದೇ ಒಂದು ಸಮುದಾಯದ ಲೇಸಲ್ಲ; ಸಕಲ ಜೀವಾತ್ಮರ ಲೇಸು. ವ್ಯಕ್ತಿಯ ಮತ್ತು ಸಮಾಜದ ಹಿತ ಬಯಸುವುದೇ ಶಿವಧ್ವಜಾರೋಹಣದ ಉದ್ದೇಶ. ಇದನ್ನೇ ಅಲ್ಲಮಪ್ರಭುಗಳು ತಮ್ಮ ವಚನದಲ್ಲಿಶಿವಾಚಾರದ ಧ್ವಜವನೆತ್ತಿ’ ಎಂದು ಹೇಳಿದ್ದಾರೆ.

ಮಂಗಳಕರವಾದವುಗಳನ್ನು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು; ಮಾತನ್ನು ಕೃತಿಗಿಳಿಸಬೇಕು. ಜಾತಿ, ಮತ, ಪಕ್ಷ, ದೇಶ, ಭಾಷೆಗಳನ್ನು ಗಮನಿಸದೆ ಸಕಲ ಜೀವಾತ್ಮರ ಒಳಿತನ್ನು ಬಯಸುವುದೇ ಶಿವಧ್ವಜಾರೋಹಣದ ಮೂಲ ಆಶಯ. ಇದರಡಿಯಲ್ಲಿ ನಿಂತಿರುವ ನಾವು ನಮ್ಮಲ್ಲಿರುವ ಸಣ್ಣತನಗಳನ್ನು ದೂರ ಮಾಡಿ ಮನೋವೈಶಾಲ್ಯತೆಯನ್ನು ಬೆಳೆಸಿಕೊಳ್ಳಬೇಕು.

ನಮ್ಮ ಜಾತಿ, ನಮ್ಮ ಧರ್ಮ ಎನ್ನುವ ಸಂಕುಚಿತ ಭಾವನೆಗಿಂತ ನಾವೆಲ್ಲರೂ ಮಾನವರು ಎನ್ನುವ ಮನೋವೈಶಾಲ್ಯತೆಯನ್ನು ಶಿವ ಧ್ವಜ ಬೆಳೆಸುವುದು. ಮನುಷ್ಯ ಬಡವನಾಗಿರುವುದು ಅಪರಾಧವೇನಲ್ಲ; ಮನಸ್ಸಿನಿಂದ ಬಡವನಾಗಬಾರದು. ಮನಸ್ಸು ದುರ್ಬಲವಾಗದೆ ಘನ ಮನವಾಗಬೇಕು. ಕಾಮನೆಗಳನ್ನು ಕಳೆದುಕೊಂಡು ಒಳ್ಳೆಯ ವಿಚಾರಗಳನ್ನು ಮಾಡುವ, ಎಲ್ಲರ ಹಿತವನ್ನು ಹಾರೈಸುವಂತಿರಬೇಕು. ಈ ನೆಲೆಯಲ್ಲಿ ಎಲ್ಲರೂ ಸದ್ಭಾವನೆಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾದ ಕಾರ್ಯಗಳನ್ನು ಮಾಡಲು ಈ ಧ್ವಜಾರೋಹಣ ಸ್ಪೂರ್ತಿ ನೀಡಲಿ ಎಂದರು.

ಕನ್ನಡ ರಾಜ್ಯೋತ್ಸವದ ನಿಮಿತ್ತ `ಕನ್ನಡ ಧ್ವಜಾರೋಹಣ’ ನೆರವೇರಿಸಿದ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಜ್ಜಂಪುರ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿದೆ. ಇಂಥ ಇತಿಹಾಸವಿರುವ ಕನ್ನಭಾಷೆಗೆ ಆಗಾಗ ಧಕ್ಕೆಯಾಗುತ್ತಿದೆ. ಡಾ. ರಾಜಕುಮಾರ್ ನೇತೃತ್ವ ವಹಿಸಿದ್ದ ಗೋಕಾಕ್ ಚಳುವಳಿಯಿಂದಾಗಿ ಕನ್ನಡಕ್ಕಿದ್ದ ಅಸ್ಮಿತೆ ಮತ್ತಷ್ಟು ಹೆಚ್ಚಾಯಿತು. ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಕನ್ನಡಿಗರೆಲ್ಲ ಒಂದೆಂಬ ಭಾವನೆ ಬಲಿಯಿತು. ಮುಂದೆ ಕನ್ನಡಿಗರ ಭಾವನೆಗೆ ಗೌರವ ಕೊಡುವ ಕೆಲಸಗಳನ್ನು ಆಯಾಯ ಸರಕಾರಗಳು ಮಾಡುತ್ತಿವೆ. ಕನ್ನಡ ಸಂಘಟನೆಗಳಿಗೆ ಆರ್ಥಿಕ ಶಕ್ತಿಯನ್ನು ತುಂಬುತ್ತಿವೆ. ಕನ್ನಡಕ್ಕೆ ಧಕ್ಕೆ ಆದಾಗ ಸಹಿಸುವುದಿಲ್ಲ ಎನ್ನುವ ಮನೋಭಾವ ಆಡಳಿತ ನಡೆಸುವವರಿಗೆ ಇರಬೇಕು. ಕನ್ನಡದ ಭಾಷೆ ಅನ್ನದ ಭಾಷೆಯಾಗುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಬೇಕು. ಅನ್ನದ ಭಾಷೆಯಾಗುವ ಎಲ್ಲ ಸಾಮರ್ಥ್ಯ ಕನ್ನಡಕ್ಕಿದೆ.

ಕನ್ನಡದಲ್ಲಿಯೇ ಉನ್ನತ ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಬಹುದು ಎನ್ನುವುದಕ್ಕೆ ನಮ್ಮ ಮುಂದೆ ಅನೇಕ ಉದಾಹರಣೆಗಳಿವೆ. ಅನ್ಯ ಭಾಷೆಗಳನ್ನು ಕಲಿಯಬೇಕು. ಆದರೆ ಕನ್ನಡವೇ ನಮ್ಮ ಅನ್ನದ, ಆಡಳಿತ ಭಾಷೆಯಾಗಬೇಕು. ಕನ್ನಡದ ಬಗೆಗಿನ ಕೀಳರಮೆಯನ್ನು ತೊಡೆದು ಹಾಕಬೇಕು. ಮಾತೃಭಾಷೆಯಿಂದ ಮಾತ್ರ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು, ವ್ಯಕ್ತಿತ್ವ ರೂಪಿಸಿಕೊಳ್ಳೃಲು ಸಾಧ್ಯ ಎಂದರು.

ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಚಿಂತನಾ ಗೋಷ್ಠಿಯಲ್ಲಿ `ಬದುಕು ಹಾಗೂ ಶಿಕ್ಷಣ’ ಕುರಿತಂತೆ ಮಾತನಾಡಿದ ಹೊಸದುರ್ಗದ ಚಿಂತಕ ಹೆಚ್.ಎಸ್. ನವೀನಕುಮಾರ ಮಾತನಾಡಿ ಜ್ಞಾನ ಅಂತರಂಗದ ವಿಷಯವೇ ಹೊರತು; ಬಹಿರಂಗದ ತೋರ್ಪಡಿಕೆಯಲ್ಲ. ನಾವು ಏನು ಆಗಿರುತ್ತೇವೋ ಅದನ್ನೇ ಇನ್ನೊಬ್ಬರಲ್ಲಿ ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳುವ ಕೆಲಸ ಮಾಡಬೇಕು.

ಶಿಕ್ಷಣವೆಂದರೆ ನಮ್ಮೊಳಗೆ ನಾವು ಹೊಕ್ಕು, ನಮ್ಮನ್ನು ನಾವು ನೋಡಿಕೊಳ್ಳುವಂಥ ಅದ್ಭುತವಾದ ತರಬೇತಿ. ಭಾವಪ್ರವಾಹದ ಅಭಿವ್ಯಕ್ತಿಗೆ ಸೂಕ್ತವಾದ ತಡೆಯೊನ್ನೊಡ್ಡಿ ಬದುಕಿಗೆ ಬೇಕಾದಂತಹ ವಾತಾವರಣವನ್ನು ನಿರ್ಮಾಣಗೊಳಿಸುವುದೇ ಶಿಕ್ಷಣ. ಆದರೆ ಇಂದು ಮೊಬೈಲೇ ಬದುಕು, ಮೊಬೈಲೇ ಶಿಕ್ಷಣ ಆಗಿರುವುದು ದುರದೃಷ್ಟಕರ ಸಂಗತಿ.

ಶಿಕ್ಷಣ ಮಕ್ಕಳಲ್ಲಿ ಸಂಸ್ಕಾರವನ್ನು ತಂದುಕೊಡಬೇಕು. ಸಂಸ್ಕಾರ ಶಾಲೆಯ ನಾಲ್ಕು ಗೋಡೆಯ ನಡುವೆ ಸಿಗುವಂಥದ್ದಲ್ಲ; ಬದುಕಿನಲ್ಲಿ ಸಿಗುವಂಥದ್ದು. ಬದುಕೇ ಶಿಕ್ಷಣ. ಅತಿ ಹೆಚ್ಚು ಪಾಠವನ್ನು ಮನೆಯಲ್ಲಿ ಕಲಿಯುತ್ತೇವೆ. ಡಿವಿಜಿಯವರು ಮನೆಯೇ ಶಾಲೆ, ಮಠವಾಗಬೇಕು. ಬಂಧು-ಬಳಗವೇ ಗುರುಗಳು, ಸಮಾಜದ ಒಡನಾಡವೇ ಪಾಠಗಳು ಎನ್ನುವರು. ಅಂಕಗಳಿಕೆಯೇ ಶಿಕ್ಷಣವಲ್ಲ. ಶೇ. ನೂರು ಅಂಕ ಬಂದರೂ ಸಮಾಧಾನವಿಲ್ಲ. 90ಕ್ಕಿಂತ ಹೆಚ್ಚು ಅಂಕ ತೆಗೆದುಕೊಂಡರೂ ಆತ್ಮಹತ್ಯೆಯಂಥ ಘಟನೆಗಳು ನಡೆಯುತ್ತಿರುವುದು ವಿಷಾದದ ಸಂಗತಿ. ಗಾಂಧೀಜಿ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯಬೇಕೆನ್ನುತ್ತಿದ್ದರು. ಶಿಕ್ಷಣ ಅಂಕಗಳ ಮೇಲೆ ನಿರ್ಧಾರವಾಗದೆ ಮೌಲ್ಯಗಳ ಮೇಲೆ ನಿರ್ಧಾರವಾಗಬೇಕು. ಮಕ್ಕಳಲ್ಲಿ ಬುದ್ಧಿವಂತಿಕೆಯ ಗುಣಾಂಕಕ್ಕಿಂತ, ಭಾವನಾತ್ಮಕ ಗುಣಾಂಕಗಳು ಬೆಳೆಯಬೇಕು. ಇದು ಸಂಬಂಧಗಳ ಗುಣಾಂಕದಿಂದ ಬರುವುದು. ಮಕ್ಕಳಲ್ಲಿ ಇನ್ನೊಬ್ಬರ ಬಗೆಗಿನ ಸಿಂಪಥಿಗಿಂತ ಎಂಪಥಿ ಬಹಳ ಮುಖ್ಯ. ಇಂಥ ಮೌಲ್ಯಗಳನ್ನು ಶಿಕ್ಷಣ ಬಿತ್ತುವಂತಾಗಬೇಕು. ಸಹಪಠ್ಯ ಚಟುವಟಿಕೆಗಳು ಬದುಕಿಗೆ ಬಹಳ ಮುಖ್ಯವಾದವು. ಇವು ಮಕ್ಕಳಲ್ಲಿ ಸದಭಿರುಚಿಯನ್ನು ಬೆಳೆಸುವವು. ಇಂಥ ಸದಭಿರುಚಿಯ ಕಾರ್ಯಕ್ರಮಗಳು ಸಾಣೇಹಳ್ಳಿಯ ರಂಗಚಟುವಟಿಕೆಗಳಲ್ಲಿ ಹೇರಳವಾಗಿ ದೊರೆಯುತ್ತಿದೆ. ಈ ಸಂಪತ್ತನ್ನು ಮಕ್ಕಳು ತಮ್ಮದಾಗಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಲೋಕದಲ್ಲಿ ಬದುಕಲು ಏನಾದರೂ ಒಂದು ಕಾಯಕ ಮಾಡಲೇಬೇಕು. ಕಾಯಕವಿಲ್ಲದ ಬದುಕು ಅರ್ಥಪೂರ್ಣವಾಗಲು ಸಾಧ್ಯವಿಲ್ಲ. ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಹೇಡಿಯಾಗದೆ ಧೈರ್ಯದಿಂದ ಅವುಗಳನ್ನು ಎದುರಿಸಬೇಕು. ಇದನ್ನೇ ಶರಣರು ಕಷ್ಟ ಬಂದಾಗ ದೇವರ ಮೊರೆಯೂ ಹೋಗಬೇಡ ಎನ್ನುವರು. ಬದುಕು ತಾಯಿಯ ಗರ್ಭದಿಂದಲೇ ಆರಂಭವಾಗುತ್ತದೆ. ಅಲ್ಲಿಂದಲೇ ಸಂಸ್ಕಾರವನ್ನು ನೀಡಬೇಕು. ಬಾಲ್ಯದಲ್ಲಿ ನೀಡಿದ ಸಂಸ್ಕಾರ ಕೊನೆಯವರೆಗೂ ಇರುವುದು. ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮತೆಯನ್ನು ಕಾಪಾಡಿಕೊಂಡಾಗ ಬದುಕು ಸತ್ವಯುತವಾಗುವುದು. ಜೀವನವನ್ನು ಅದು ಬಂದಂತೆ ಸವಿಯಬೇಕು. ಬದುಕಿನ ಸಮತೋಲನವನ್ನು ನಾವೇ ಕಾಪಾಡಿಕೊಳ್ಳಬೇಕು. ತನ್ನ ಬದುಕನ್ನು ತಾನೇ ಕಟ್ಟಿಕೊಂಡಾಗ ವ್ಯಕ್ತಿತ್ವ ವಿಕಾಸವಾಗುವುದು.

ಶಿಕ್ಷಣ ಹೊರಗಿನಿಂದ ತುಂಬುವುದಲ್ಲ; ಒಳಗಿರುವುದನ್ನು ಪ್ರಕಾಶಗೊಳಿಸುವುದು. ಕೇಳಿದ ಮಾತುಗಳನ್ನು ಲಕ್ಷ್ಯಗೊಟ್ಟು ಕೇಳಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅನ್ಯಾಯವನ್ನು ಖಂಡಿಸುವ ಮನೋಧೋರಣೆ ಬೆಳೆಸಿಕೊಳ್ಳಬೇಕು. ಹಿರಿಯರು, ಶಿಕ್ಷಕರು ಹೇಳುವ ಮಾತುಗಳನ್ನು ಮನಸ್ಸಿನ ಆಳಕ್ಕೆ ಇಳಿಸಿಕೊಳ್ಳಬೇಕು. ಸತ್ವಯುತ ಬದುಕಿಗೆ ಧ್ಯಾನ, ಮೌನ, ಪ್ರಾರ್ಥನೆಗಳಂಥ ಸಂಸ್ಕಾರಗಳು ಬೇಕು. ಬದುಕು ಯಾಂತ್ರಿಕ ಕ್ರಿಯೆಯಾಗಬಾರದು. ತನು, ಮನ, ಬುದ್ಧಿ ಒಂದಾಗುವ ಸಂಸ್ಕಾರ ಬೇಕು. ಧ್ಯಾನ, ಮೌನ, ಪ್ರಾರ್ಥನೆಗಳು ಅಂತಂಗದ ಬೆಳಕನ್ನು ವಿಸ್ತರಿಸುವಂಥವು. ಆದರ್ಶದ ಪಥದಲ್ಲಿ ನಡೆಯುವುದನ್ನು ತೋರಿಸುವಂಥವು. ಕನ್ನಡ ಸೊಗಸಾದ ಭಾಷೆ. ಇದನ್ನು ಉಳಿಸುವ, ಬೆಳೆಸುವ ಸಂಕಲ್ಪ ನಮ್ಮದಾಗಬೇಕು. ಸಕಾರಾತ್ಮಕ ಚಿಂತನೆಗಳಿಂದ ಮನೋವಿಕಾಸವಾಗುವುದು.

ಯಾರೂ ದಡ್ಡರಲ್ಲ; ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಣ ಮಾಡಬೇಕು. ಶಾಲೆಯಲ್ಲಷ್ಟೇ ಅಲ್ಲ; ಮನೆ, ಮಠ, ಸಮಾಜ, ದೇಶದಿಂದ ಶಿಕ್ಷಣ ಸಿಗುವುದು. ಅದನ್ನು ಗ್ರಹಿಸುವ ಸಾಮರ್ಥ್ಯವನ್ನು ಮಗು ಬೆಳೆಸಿಕೊಳ್ಳುವಂತೆ ಮಾಡುವುದೇ ಶಿಕ್ಷಣ. ಶಿಕ್ಷಣ ಸುಧಾರಿಸಿದರೆ ಬದುಕೂ ಸುಧಾರಿಸುವುದರಲ್ಲಿ ಅನುಮಾನವಿಲ್ಲ ಎಂದರು.

Share This Article
1 Comment
  • ಕನ್ನಡ ನಾಡು ,ನಡಿ ,ನೆಲ , ಜಲ, ಕಲೆ ,ಸಾಹಿತ್ಯ ವಚನ , ಸಂಸ್ಕೃತಿ, ಯನ್ನು ರಂಗಭೂಮಿಯ ನಾಟಕಗಳ ಮೂಲಕ ನಾಡಿನ ಜನ ಮಾನಸ ದಲ್ಲಿ ಬಿತ್ತಿ ಬೆಳೆಯುವಲ್ಲಿ ಸದಾ ಮುಂದಾಗಿರುವ ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾಮಠ ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಚಾಪು ಮಾಡಿಸಿ ಇತಿಹಾಸ ಪುಟದಲ್ಲಿ ಬೆಳ್ಳಿ ಚುಕ್ಕೆಯಂತೆ ರಾರಾಜಿಸಲು ಅದರ ಹಿಂದಿ ಶಕ್ತಿ ಯೇ.ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಶಿವಚಾಯ೯ ಸ್ವಾಮಿಜೀಯವರು ಲಿಂಗಾಯಿತ ಧಮ೯ ಸ್ವತಂತ್ರ ಧಮ೯ ಎಂದು ಎಂದು ಹೇಳಿದ ಶ್ರೀಗಳಿಗೆ ವೈದಿಕ ,ವಿಪ್ರ ಮನಸುಗಳು ಅವರ ಮಾತುಗಳನ್ನು ಹರಗಿ ಕೊಳ್ಳಲಾದೆ ಇವರು ಹಿಂದೂ ಧಮ೯ದ ಸನಾಥಿಗಳು ಅವರವರ ಧಮ೯ ಪ್ರಚಾರಕ್ಕೂ ಬಿಡದೆ ಅನೇಕ ಅಪವಾದಗಳನ್ನು ತಂದು ನಿಯಂತ್ರಿಸುವ ಕೆಲಸವನ್ನು ಮಾಡುವ ಮೂಲಕ ಶ್ರೀಗಳ ದನಿ ಅಡಗಿಸುವ ಮಾಡುತ್ತಿರುವುದು ಹೇಯ್ಯ ಕೃತ್ಯ ಇಲ್ಲಿ ಸಂವಿಧಾನವೇ ಹೇಳಿದೆ ಅಭಿವ್ಯಕ್ತಿ ಸ್ವಾತಂತ್ರ ಪ್ರತಿಯೊಬ್ಬ ಪ್ರಜೆಗೂ ಇದೆ ಎಂದು ಇದರ ಆಶಯದಂತೆ 12 ನೇ ಶತಮಾನದ ಬಸವಾದಿ ಶರಣರು ಕಟ್ಟಿದ ಅನುಭವ ಮಂಟಪ ಸವ೯ಧಮಿ೯ಯರಿಗೂ ಸಮಬಾಳು ಸಮಾನತೆ ಇದನ್ನು ನಾಶ ಗೊಳಿದ ಸನಾಥಿಗಳ ಪಳವೊಳಿಕೆಗಳು ಈಗಲೂ ತಮ್ಮ ಕಬಂಧ ಹಾವುಗಳನ್ನು ಚಾಚುತ್ತಲೇ ಇವೆ ಇವೆಲ್ಲಕ್ಕೂ ಜಗ್ಗದೆ ,ಬಗ್ಗದೆ ಇಟ್ಟ ಹೆಜ್ಜೆ ದಿಟ್ಟ ಕ್ರಮ ,ಕಾಯಕವೇ ಕೈಲಾಸ ಶರಣರ ಅಣತಿಯಂತೆ ನಡೆಯುತ್ತಿರುವ ಶ್ರೀಗಳಿಗೆ ಅನಂತ ಅನಂತ ಧನ್ಯವಾದಗಳು.
    ಪೀಲಾಪುರ ಆರ್ ಕಂಠೇಶ್.

Leave a Reply

Your email address will not be published. Required fields are marked *