ನೈತಿಕ, ಸೃಜನಾತ್ಮಕ, ಮಾತೃಭಾಷೆಯಲ್ಲಿನ ಶಿಕ್ಷಣ ನೀಡಿ: ಡಾ. ಸೋಮಶೇಖರಪ್ಪ

ಚನ್ನಗಿರಿ

ಇಲ್ಲಿನ ಜವಳಿ ಸಮುದಾಯ ಭವನದಲ್ಲಿ ನಡೆದ ೩ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಯಾತ್ರೆ ಬುಧವಾರ ಮಧ್ಯಾಹ್ನ ಪಾಂಡೋಮಟ್ಟಿಯಿಂದ ಸಂಜೆ ೬ ಗಂಟೆಗೆ ಚನ್ನಗಿರಿ ತಲುಪಿತು.

ಸಂಜೆಯ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಡಾ. ಎಚ್ ಎಂ ಸೋಮಶೇಖರಪ್ಪ ಮಾತನಾಡಿ ಸರ್ವೋದಯದ ಮೂಲ ಕಲ್ಪನೆ ಗಾಂಧೀಜಿಯವರ ಮೂಲಭೂತ ಶಿಕ್ಷಣವನ್ನು ಜಾರಿಗೆ ತರುವ ಹಿನ್ನಲೆಯದಾಗಿದೆ.

ಪ್ರಾಥಮಿಕ ಶಿಕ್ಷಣ ಸೃಜನಾತ್ಮಕವಾಗಿರಬೇಕು. ರಾಜ್ಯ ಭಾಷೆ ಶಿಕ್ಷಣವನ್ನು ಮಕ್ಕಳಿಗೆ ಕಡ್ಡಾಯಗೊಳಿಸಬೇಕು. ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು. ಅನ್ಯಭಾಷೆಯನ್ನು ಓದಿದರೆ ಅತೀ ಬೇಗ ಹುದ್ದೆ ಸಿಗುತ್ತೆ ಎನ್ನುವ ಭ್ರಮೆಯಲ್ಲಿದ್ದೇವೆ.

ನಮ್ಮ ಶಿಕ್ಷಣದಲ್ಲಿ ಚಾರಿತ್ರ್ಯ ಮತ್ತು ನೈತಿಕ ಶಿಕ್ಷಣವನ್ನು ಮಕ್ಕಳಿಗೆ ಕೂಡ ಕಲಿಕೆಯಲ್ಲಿ ಶಿಕ್ಷಕರು ನೈತಿಕತೆಯನ್ನು ಕಾಪಾಡಿಕೊಳ್ಳಬೇಕು. ಸತ್ಯ, ಅಹಿಂಸೆ, ಶಾಂತಿ ತತ್ವಗಳು ತಿಳಿಸುವ ಕಾರ್ಯ ಆಗಬೇಕು. ಮಕ್ಕಳು ಒತ್ತಾಯದಿಂದ ಕಲಿಕೆಯಲ್ಲಿ ಪಾಲ್ಗೊಳ್ಳಬಾರದು. ಅವರು ಸಂತೋಷದಿಂದ ತೊಡಗಿಕೊಳ್ಳುವಂತಾಗಬೇಕು. ಮಕ್ಕಳಿಗೆ ಕಂಠಪಾಠದ ಪರಿಪಾಠವನ್ನು ಬೆಳೆಸದೇ ಸೃಜನಶೀಲತೆಗೆ ಹೆಚ್ಚು ಗಮನಹರಿಸಬೇಕು. ಒಟ್ಟಾರೆ ಮಕ್ಕಳ ಕೇಂದ್ರೀಕೃತ ಶಿಕ್ಷಣಕ್ಕೆ ಸರಕಾರ ಹೆಚ್ಚು ಒತ್ತುಕೊಡಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ನಾಳೆ ಸಮಾರೋಪ ಸಮಾರಂಭ ಇದೆ. ಪ್ರತಿಯೊಂದು ಮನೆಯಿಂದ ಒಬ್ಬೊಬ್ಬ ಮಹಿಳೆಯರು ಭಾಗವಹಿಸಬೇಕು. ಭಕ್ತರ ಪ್ರೀತಿಗೆ ನಾವು ಬೆಲೆಕಟ್ಟಲಾಗದು. ದಾರಿಯುದ್ದಕ್ಕೂ ತೋರಿದ ಪ್ರೀತಿ ವರ್ಣಿಸಲಸದಳ. ಪಾದಯಾತ್ರೆಯಲ್ಲಿ ಎಲ್ಲ ವರ್ಗ, ಜಾತಿ, ಧರ್ಮ, ಪಕ್ಷದವರು ಭಾಗವಹಿಸುವರು. ಅವರಿಗೆ ಏನು ಅರಿವನ್ನು ಮೂಡಿಸಬೇಕೋ ಅದನ್ನು ಹೇಳುತ್ತಿದ್ದೇವೆ‌. ಪೊರಕೆಯ ಕೆಲಸ ಕಸಗುಡಿಸುವುದು. ಆ ಕಸಗುಡಿಸುವ ಕೆಲಸವನ್ನು ನಾವು ಈ ಪಾದಯಾತ್ರೆಯ ಮೂಲಕ ಮಾಡುತ್ತಾ ಬಂದಿದ್ದೇವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಮಾತನಾಡಿ ಈ ಪಾದಯಾತ್ರೆ ಐದು ಅಂಶಗಳ ಕಡೆ ಗಮನಕೊಟ್ಟು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವಂಥದ್ದು ಈ ಜಾಥಾ ಉದ್ಧೇಶ ಎಂದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಕಲಬುರ್ಗಿಯ ಶರಣ ಸಾಹಿತಿ ಡಾ. ಮೀನಾಕ್ಷಿ ಬಾಳಿ ಮಾತನಾಡಿ; ಇದೊಂದು ಮಹಾನ್ ಸೈದ್ಧಾಂತಿಕ ಸರ್ವೋದಯದ ಪಾದಯಾತ್ರೆ. ಐದು ವಿಷಯಗಳನ್ನಿಟ್ಟುಕೊಂಡು ಪಾದಯಾತ್ರೆಯ ಮೂಲಕ ನಿಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿ ಅನೇಕ ಸ್ವಾಮಿಗಳು ಜೈಕಾರ ಹೊಡೆಸಿಕೊಂಡು ಹೋಗುವಂಥವರ ಮಧ್ಯೆದಲ್ಲಿ ಪಂಡಿತಾರಾಧ್ಯ ಶ್ರೀಗಳು ಸೈದ್ಧಾಂತಿಕ ನಿಲವುಗಳನ್ನಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ.

ಇವತ್ತು ರಾಜಕೀಯ ಹೊಲಸಾಗಿದೆ. ಇಷ್ಟೆಲ್ಲಾ ಪರಿಸರ ಹಾಳಾಗಲಿಕ್ಕೆ ಕಾರಣ ಎಲ್ಲ ಕ್ಷೇತ್ರದಲ್ಲಿನ ನಾಯಕರೆಂದು ಕರೆಸಿಕೊಳ್ಳುವವರಿಂದ, ಭ್ರಷ್ಟಚಾರಿಗಳಿಂದ ಭೌತಿಕ ಪರಿಸರ ಹಾಳಾಗಿದೆ. ಪರಿಸರ ಎಂದರೆ ಬರೀ ನೈಸರ್ಗಿಕ ಪರಸರವಲ್ಲ. ಸಾಮಾಜಿಕ ಪರಿಸರವೂ, ಅದು ಹಾಳಾಗಿದೆ. ರಾಜಕಾರಣ ಹಾಳಾಯಿತು. ಶಿಕ್ಷಣ ದುಬಾರಿಯಾಯಿತು. ಬಂಡವಾಳಶಾಯಿಗಳ ಕಪಿಮುಷ್ಠಿಯಲ್ಲಿ ಇಡೀ ದೇಶ ಸಿಕ್ಕು ನಲುಗುತ್ತಿದೆ. ಈ ಕೋಮುವಾದಿ ಧೋರಣೆಯ ರಾಜಕಾರಣದ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕು.

Share This Article
Leave a comment

Leave a Reply

Your email address will not be published. Required fields are marked *