ಜನವರಿ ೨೭-೩೦: ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ‘ನಮ್ಮ ನಡೆ ಸರ್ವೋದಯದೆಡೆಗೆ’ ಪಾದಯಾತ್ರೆ
ಸಾಣೇಹಳ್ಳಿ
ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಅನೇಕ ಸಮಸ್ಯೆಗಳಿಗೆ ಮನುಷ್ಯ ಒಳಗಾಗಿದ್ದಾನೆ. ಇದರ ಪರಿಣಾಮವಾಗಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ ಈ ಎಲ್ಲ ಕ್ಷೇತ್ರಗಳು ಹದಗೆಟ್ಟು ಹೋಗಿವೆ.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ತತ್ವಗಳ ಹಿನ್ನಲೆಯಲ್ಲಿ ಇವುಗಳನ್ನು ಸ್ವಲ್ಪಮಟ್ಟಿಗಾದರೂ ಮತ್ತೆ ಸುಧಾರಿಸುವ ನೆಲೆಯಲ್ಲಿ ಸರ್ವೋದಯ ಸಂಘಟನೆಯಿಂದ ೨೦೨೫ ಜನವರಿ ೨೭, ೨೮, ೨೯, ೩೦ ಈ ನಾಲ್ಕು ದಿನಗಳ ಕಾಲ “ನಮ್ಮ ನಡೆ ಸರ್ವೋದಯದೆಡೆಗೆ” ಎನ್ನುವಂಥ ಪಾದಯಾತ್ರೆ ನಡೆಯಲಿದೆ.
ಈ ಪಾದಯಾತ್ರೆ ಸಾಂಸ್ಕೃತಿಕ ಕ್ಷೇತ್ರ ಸಾಣೇಹಳ್ಳಿಯಲ್ಲಿ ೨೭ ರಂದು ಪ್ರಾರಂಭವಾಗಿ ೩೦ ರಂದು ಐತಿಹಾಸಿಕ ಕ್ಷೇತ್ರ ಸಂತೇಬೆನ್ನೂರಿನಲ್ಲಿ ಸಮಾರೋಪಗೊಳ್ಳಲಿದೆ. ಪ್ರತಿದಿನ ೨೦ ರಿಂದ ೨೨ ಕಿಲೋಮೀಟರ್ ಪಾದಯಾತ್ರೆ ನಡೆಯುತ್ತದೆ. ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ಸಾರ್ವಜನಿಕ ಕಾರ್ಯಕ್ರಮ, ಕ್ರಾಂತಿಗೀತೆಗಳು ಬೀದಿ ನಾಟಕ ಮತ್ತು ಉಪನ್ಯಾಸ ನಡೆಯಲಿವೆ.
೨೭ ರ ಮಧ್ಯಾಹ್ನ ೧ ಗಂಟೆಗೆ ಬೇಗೂರಿನಲ್ಲಿ ಅಂದು ಸಂಜೆ ೭ ಗಂಟೆಗೆ ಅಜ್ಜಂಪುರದಲ್ಲಿ, ೨೮ ರ ಮಧ್ಯಾಹ್ನ ೧ ಗಂಟೆಗೆ ಬುಕ್ಕಾಂಬುದಿಯಲ್ಲಿ ಅಂದು ಸಂಜೆ ೭ ಗಂಟೆಗೆ ತಾವರಕೆರೆಯಲ್ಲಿ, ೨೯ ರ ಮಧ್ಯಾಹ್ನ ೧ ಗಂಟೆಗೆ ಪಾಂಡೋಮಟ್ಟಿಯಲ್ಲಿ ಅಂದು ಸಂಜೆ ೭ ಗಂಟೆಗೆ ಚನ್ನಗಿರಿಯಲ್ಲಿ, ೩೦ರ ಮಧ್ಯಾಹ್ನ ೧ ಗಂಟೆಗೆ ದೇವರಹಳ್ಳಿಯಲ್ಲಿ ಅಂದು ಸಂಜೆ ೭ ಗಂಟೆಗೆ ಸಂತೇಬೆನ್ನೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಈ ಪಾದಯಾತ್ರೆ ಹಾಗೂ ಕಾರ್ಯಕ್ರಮದ ಮೂಲ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವಂಥದ್ದು. ಇವತ್ತು ಪರಿಸರ ಕಾಳಜಿ ಕಡಿಮೆ ಆಗಿದೆ. ಕೃಷಿ ಬದಲಾವಣೆ ಆಗಿದೆ. ಆರೋಗ್ಯ ಹದಗೆಟ್ಟಿದೆ. ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯಲ್ಲಿವೆ. ರಾಜಕೀಯ ಕ್ಷೇತ್ರ ಕುಲಗೆಟ್ಟು ಹೋಗ್ತಾ ಇದೆ. ಈ ಐದು ಕ್ಷೇತ್ರಗಳಲ್ಲಿ ಜನರನ್ನು ಜಾಗೃತಗೊಳಿಸಿದರೆ ಮತ್ತೆ ಕಲ್ಯಾಣ ರಾಜ್ಯವನ್ನು ನೆಲೆಗೊಳಿಸಲಿಕ್ಕೆ ಸಾಧ್ಯ. ಈ ಈ ನೆಲೆಯಲ್ಲಿ ಇದೊಂದು ವಿಶಿಷ್ಟ, ವಿನೂತನ ಪಾದಯಾತ್ರೆ.
ಈ ಪಾದಯಾತ್ರೆಯಲ್ಲಿ ಸಾರ್ವಜನಿಕರು, ಸಾಹಿತಿಗಳು, ಮಠಾಧೀಶರು ಹೀಗೆ ವಿವಿಧ ವರ್ಗದ ಚಿಂತಕರು ಭಾಗವಹಿಸಲಿದ್ದಾರೆ. ಪಾದಯಾತ್ರೆ ಕೇವಲ ಯಾತ್ರೆಯಲ್ಲ; ಗಾಂಧೀಜಿಯವರು ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಜಾಗೃತಗೊಳಿಸಲಿಕ್ಕೆ ಹೇಗೆ ಪಾದಯಾತ್ರೆಗಳನ್ನು ಮಾಡುತ್ತಿದ್ದರೋ ಅದೇ ಮಾದರಿಯಲ್ಲಿ ಈ ಪಾದಯಾತ್ರೆ ನಡೀತಾ ಇದೆ.
ಇದು ಇಡೀ ಕರ್ನಾಟಕದುದ್ದಕ್ಕೂ ಬೇರೆ ಬೇರೆ ಭಾಗಗಳಲ್ಲಿ ಅಲ್ಲಿಯ ಸಂಘಟಕರು ಮುಂದುವರಿಸಿಕೊಂಡು ಹೋಗಬೇಕು ಎನ್ನುವಂಥದ್ದು ಸರ್ವೋದಯ ಸಂಘಟನೆಯ ಆಶಯ. ಹಾಗಾದಾಗ ನಾಡಿನಲ್ಲಿ ಜಾಗೃತಿಯನ್ನುಂಟು ಮಾಡಿ ನಮ್ಮ ಪರಿಸರವನ್ನು ಉಳಿಸಲಿಕ್ಕೆ, ಸಾವಯವ ಕೃಷಿಯನ್ನು ಬೆಳೆಯಲಿಕ್ಕೆ, ಆರೋಗ್ಯವನ್ನು ಕಾಪಾಡಲಿಕ್ಕೆ, ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲಿಕ್ಕೆ, ಭ್ರಷ್ಟವಾಗುತ್ತಿರುವ ರಾಜಕೀಯವನ್ನು ಭ್ರಷ್ಟರಹಿತವಾಗಿ ಮಾಡಲಿಕ್ಕೆ ಸಾಧ್ಯ ಆಗುತ್ತೆ ಎನ್ನುವ ವಿಶ್ವಾಸ ಎಲ್ಲ ಸಂಘಟಕರದ್ದು.
ಒಂದು ಕತೆ; ಅನೇಕರು ಕೇಳಬಹುದು ಇದು ಸಾಧ್ಯವೇ ಅಂತ? ಖಂಡಿತಾ ಸಾಧ್ಯ. ಮನುಷ್ಯನಿಗೆ ನಿರಾಶಾವಾದಕ್ಕಿಂತ ಆಶಾವಾದ ಇರಬೇಕು. ಕಾಡಿಗೆ ಬೆಂಕಿಬಿದ್ದಾಗ ಕಾಡಿನಲ್ಲಿರುವ ಎಲ್ಲ ಪ್ರಾಣಿಗಳು ಓಡಿ ಹೋದ್ವು. ಒಂದು ಗುಬ್ಬಿ ಮಾತ್ರ ಪಕ್ಕದಲ್ಲಿರುವ ನೀರಿನ ಸೆಲೆಯಲ್ಲಿ ತನ್ನ ಚುಂಚಿನಲ್ಲಿ ನೀರನ್ನು ತಂದು, ಮೈಯನ್ನು ತೋಯಿಸಿಕೊಂಡು ಬಂದು ಆ ನೀರನ್ನು ಬೆಂಕಿಯ ಮೇಲೆ ಹಾಕುತ್ತೆ. ಆಗ ಉಳಿದ ಪ್ರಾಣಿಗಳು ಎಂತಹ ಅಜ್ಞಾನಿ ಇದೀಯಾ. ಇಷ್ಟು ನೀರನ್ನು ತಂದು ಹಾಕಿದರೆ ಬೆಂಕಿ ನಂದಿಸಲಕ್ಕೆ ಸಾಧ್ಯನಾ? ಎಂದು ಕೇಳುತ್ತವೆ. ನನ್ನಿಂದ ನಂದಿಸಲಕ್ಕೆ ಸಾಧ್ಯ ಇಲ್ಲ ಅಂತ ಗೊತ್ತು.
ಆದರೆ ನಾನು ಮಾಡಬೇಕಾದದ್ದನ್ನು ಮಾಡಲೇಬೇಕಾಗಿದೆ. ನನ್ನಂತೆ ನೀವು ಎಲ್ಲರೂ ಮಾಡಿದರೆ ಕಾಡಿನ ಬೆಂಕಿಯನ್ನು ನಂದಿಸುವುದು ಕಷ್ಟವೇನಲ್ಲ ಎಂದು ಗುಬ್ಬಿ ಹೇಳುತ್ತೆ. ಹಾಗೆಯೇ ನಮ್ಮ ನಾಡಿನಲ್ಲಿರುವ ಪ್ರತಿಯೊಬ್ಬ ಪ್ರಜೆಗಳು ಪ್ರಜ್ಞಾವಂತರಾಗಿ ಐದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಆಗ ಹದಗೆಟ್ಟ ವಾತಾವರಣವನ್ನು ಸರಿಪಡಿಸಿ ಎಲ್ಲರೂ ಆನಂದದಿಂದ ಬಾಳಲಿಕ್ಕೆ ಸಾಧ್ಯ ಆಗುತ್ತೆ. ನೆಮ್ಮದಿಯ ಜೀವನ ನಡೆಸಲಿಕ್ಕೆ ಅವಕಾಶ ಆಗುತ್ತೆ. ಅದಕ್ಕೆ ಈ ಪಾದಯಾತ್ರೆ ದಾರಿ ಮಾಡಿಕೊಡುತ್ತೆ ಎನ್ನುವ ಭಾವನೆ ನಮ್ಮ ಸಂಘಟಕರದ್ದಾಗಿದೆ. ಹಾಗಾಗಿ ಸಾರ್ವಜನಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು ಎನ್ನುವಂಥ ಆಶಯವನ್ನು ವ್ಯಕ್ತಪಡಿಸುತ್ತೇವೆ.
ದಿನಾಂಕ ೨೭ ಸೋಮವಾರದ ಬೆಳಗ್ಗೆ ೭ ಗಂಟೆಗೆ ಸಾಣೇಹಳ್ಳಿಯ ಶ್ರೀಮಠದ ಆವರಣದಲ್ಲಿ ಶಿವಧ್ವಜಾರೋಹಣ, ಶಿವಮಂತ್ರ ಲೇಖನ, ಚಿಂತನ ಕಾರ್ಯಕ್ರಮ ನಡೆಯಲಿದೆ. ನಂತರ ಪಾದಯಾತ್ರೆ ಮುಂದುವರಿಯುತ್ತದೆ. ಎಲ್ಲರೂ ಕಾಲಕ್ಕೆ ಸರಿಯಾಗಿ ಸಾಣೇಹಳ್ಳಿಗೆ ಬಂದು ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸೂಚಿಸಿದ್ದಾರೆ.
