ಸಾಣೇಹಳ್ಳಿಯಲ್ಲಿ ಸರ್ವೋದಯ ಪಾದಯಾತ್ರೆಯ ಪೂರ್ವಭಾವಿ ಸಭೆ

ಸಾಣೇಹಳ್ಳಿ

ಜನವರಿ 27ರಿಂದ 30ರವರೆಗೆ ಸಾಣೇಹಳ್ಳಿಯಿಂದ ಸಂತೇಬೆನ್ನೂರರವರೆಗೆ ನಡೆಯಲಿರುವ ‘ಸರ್ವೋದಯದೆಡೆಗೆ ನಮ್ಮ ನಡಿಗೆ’ ಪಾದಯಾತ್ರೆಯ ಪೂರ್ವಭಾವಿ ಸಭೆ ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ನಡೆಯಿತು.

ಈ ಸಭೆಯ ಸಾನ್ನಿಧ್ಯವಹಿಸಿ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ;

ಸರ್ವೋದಯ ಎಂದರೆ ಬಸವಣ್ಣನವರು ಹೇಳುವಂತೆ ಸಕಲ ಜೀವಾತ್ಮರ ಒಳಿತು ಬಯಸುವುದು. ಇಂದಿನ ಸಮಾಜದಲ್ಲಿ ಕೋಮು, ಗಲಭೆ, ಹಿಂಸೆ, ಲಿಂಗತಾರತಮ್ಯ, ಅಸಮಾನತೆ, ಭ್ರಷ್ಟಾಚಾರ, ಪರಿಸರ ಮಾಲಿನ್ಯ, ಅನಾರೋಗ್ಯ, ಕನ್ನಡದ ಉಳಿವು-ಅಳಿವು ಇಂಥ ಅನೇಕ ಪಿಡುಗುಗಳು ಅತಿಯಾಗಿ ಮಾನವ ಬದುಕು ನರಕಮಯವಾಗುತ್ತಿದೆ.

ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಸುವರ್ಣ ಮಾರ್ಗವೆಂದರೆ ‘ಸರ್ವೋದಯ’ ತತ್ವಗಳನ್ನು ಜಾರಿಯಲ್ಲಿ ತರುವ ಸಂಕಲ್ಪ ತಳೆಯುವುದು. ಇದಕ್ಕೆ ಬೇಕಾದುದು ಪ್ರೀತಿ, ಕರುಣೆ, ಸ್ವಾತಂತ್ರ್ಯ, ಸಮಾನತೆ, ಸರಳತೆ ಇಂಥ ಹಲವು ಮೌಲ್ಯಗಳು. ಇವುಗಳನ್ನು ಬಳಕೆ ಮಾಡಿಕೊಂಡು ಹದಗೆಟ್ಟಿರುವ, ಹದಗೆಡುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಬೇಕಾಗಿದೆ. ಇದಕ್ಕೆ ಮುಖ್ಯವಾಗಿ ‘ಅರಿವು ಆಧಾರಿತ ಸಾಮೂಹಿಕ ಚಿಂತನೆ ಮತ್ತು ಕಾರ್ಯಾಚರಣೆಯ’ ಅಗತ್ಯವಿದೆ. ಪ್ರಮುಖವಾಗಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕಾಗಿದೆ. ಐದು ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಸದಾಶಯದ ಸರ್ವೋದಯ ಸಂಘಟಕರಾಗಿದ್ದಾಗಿದೆ.

ಇದಕ್ಕೆ ಗಾಂಧೀಜಿ ಅವರ ಉಪ್ಪಿನ ಸತ್ಯಾಗ್ರಹ ಪಾದಯಾತ್ರೆ ನಮಗೆ ದಿಕ್ಸೂಚಿಯಾಗಿದೆ. ಹಾಗಾಗಿ ಸಾಂಕೇತಿಕವಾಗಿ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಿಂದ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನವರೆಗೆ ಪಾದಯಾತ್ರೆಯನ್ನು ಏರ್ಪಡಿಸಲಾಗಿದೆ. ಈ ಪಾದಯಾತ್ರೆಯಲ್ಲಿ ನಾಡಿನ ಮಠಾಧೀಶರು, ಚಿಂತಕರು, ರಾಜಕಾರಣಿಗಳು, ಸಾಹಿತಿಗಳು, ಶಿಕ್ಷಣತಜ್ಞರು, ಪರಿಸರ ಪ್ರೇಮಿಗಳು ಭಾಗವಹಿಸುವರು. ಇದೊಂದು ಹೊಸ ಸಂಚಲನ ಮೂಡಿಸುತ್ತದೆ. ಇದು ಸಂಚಲನವನ್ನುಂಟು ಮಾಡುವುದು ಮುಖ್ಯವಲ್ಲ; ಕಾರ್ಯಕಾರಿಯಾಗಬೇಕು ಎಂದರು.

ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಮಾತನಾಡಿ; ನಮ್ಮ ನಡಿಗೆ ಸರ್ವೋದಯದೆಡೆಗೆ ಈ ಘೋಷವಾಕ್ಯ ಇಟ್ಟುಕೊಂಡಿರುವುದು ಇಡೀ ಸಮಾಜಕ್ಕೆ ಒಂದು ಸಂಚಲನವನ್ನುಂಟು ಮಾಡುವುದು. ಒಳ್ಳೆಯದರ ಕಡೆ ಮನಸ್ಸುಗಳು ಬರುವುದು ತುಂಬ ಕಷ್ಟ. ಕೆಟ್ಟದರ ಕಡೆ ಮನಸ್ಸು ಅತೀ ಬೇಗ ವಾಲುವುದು. ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ ಇದರ ಕಡೆ ಗಮನಹರಿಸುವುದು ತುಂಬಾ ವಿರಳ. ಕೃಷಿಯಿಂದ ಬದುಕಿರುವನು ಋಷಿಯಾಗುವನು. ಪಾದಯಾತ್ರೆಯ ಇದು ಸರಕಾರದ ವಿರುದ್ಧವೂ ಅಲ್ಲ, ಪರವೂ ಅಲ್ಲ. ಇದರ ಉದ್ದೇಶ ಅರಿವು ಮೂಡಿಸುವುದು. ಪ್ರತಿಯೊಂದು ಕ್ಷೇತ್ರಗಳು ಸುಧಾರಣೆಯಾದಾಗಲೇ ಅಂದುಕೊಂಡ ಗುರಿ ಮುಟ್ಟಲಿಕ್ಕೆ ಸಾಧ್ಯ.

ಮಾಜಿ ಶಾಸಕ ಮಹಿಮಾ ಪಟೇಲ ಮಾತನಾಡಿ, ಅನಿವಾರ್ಯತೆಯಿಂದ ಏನೇ ಕೆಲಸ ಮಾಡಿದರೂ ಅದರಿಂದ ಏನೂ ಪ್ರಯೋಜನವಿಲ್ಲ. ಅದನ್ನು ಪ್ರೀತಿಯಿಂದ ಮಾಡಬೇಕು. ಒಳ್ಳೆಯ ರಾಜಕಾರಣ ಎಲ್ಲ ಕಡೆ ಬರಬೇಕಾಗಿದೆ. ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಹಲವು ಕ್ಷೇತ್ರಗಳಲ್ಲಿ ಹದಗೆಟ್ಟ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಸದಾ ಚಿಂತನೆ ಮಾಡುವ ಅಗತ್ಯವಿದೆ. ಕೃಷಿ ಹಣಕ್ಕಾಗಿ ಅಲ್ಲ; ಜೀವನಕ್ಕಾಗಿ ಎನ್ನುವ ಅರಿವು ರೈತರಿಗೆ ಬರಬೇಕು.

ನಮ್ಮ ಪಾದಯಾತ್ರೆ ನಮ್ಮ ಆಡಳಿತದ ಮೇಲೆ ಪರಿಣಾಮ ಬೀರುವಂತಿರಬೇಕು. ಆಡಳಿತದಲ್ಲಿ ಅಧಿಕಾರ ವಿಕೇಂದ್ರಿಕರಣವಾಗಬೇಕೆಂದು ಅನೇಕರು ಚಿಂತನೆ ಮಾಡಿದ್ದರು. ಜನರ ಕೈಯಲ್ಲಿ ಅಧಿಕಾರ ಇರಬೇಕೆಂದು ಚಿಂತನೆ ಮಾಡಬೇಕು. ಅನಿವಾರ್ಯತೆಗಳಿಂದ ಹೊರಬಂದಾಗ ಮಾತ್ರ ಸ್ವತಂತ್ರ ಬದುಕು ಕಾರಲು ಸಾಧ್ಯ. ಸರ್ವೋದಯದ ಪಾದಯಾತ್ರೆ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ, ಸರ್ವರಿಗೂ ಸಂಬಂಧಿಸಿದ್ದು ಎಂದರು.

ಮಾಜಿ ಶಾಸಕ ಡಿ ಎಸ್ ಸುರೇಶ್ ಮಾತನಾಡಿ; ಐದು ವಿಷಯಗಳನ್ನಿಟ್ಟುಕೊಂಡು ಸರ್ವೋದಯದೆಡೆಗೆ ನಮ್ಮ ನಡೆಗೆ ನಡೆಯುವ ನಾಲ್ಕು ದಿನಗಳ ಪಾದ ಯಾತ್ರೆಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ. ಇಡೀ ವ್ಯವಸ್ಥೆ ಸರಿಯಾಗಬೇಕೆಂಬುದು ಪೂಜ್ಯರ ಆಶಯ ನಿಜಕ್ಕೂ ಶ್ಲಾಘನೀಯ. ನಮ್ಮೆಲ್ಲರಿಗೂ ಅನಿವಾರ್ಯ ಎಂದರು.

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ; ಪೂಜ್ಯರು ಚಿಂತನೆ ಮಾಡಿ ಜನರಲ್ಲಿರುವ ದುರ್ಮಾರ್ಗಗಳನ್ನು ದೂರ ಮಾಡಿ ಸನ್ಮಾರ್ಗವನ್ನು ಹೇಗೆ ಕಂಡುಕೊಳ್ಳಬೇಕು ಎನ್ನುವುದನ್ನು ಚಿಂತನೆಯನ್ನು ಮಾಡಿ ಪಾದಯಾತ್ರೆ ಕೈಗೊಳ್ಳುವುದು ಜನರಲ್ಲಿ ಸಂಚಲನವನ್ನುಂಟು ಮಾಡುವುದು. ಇದರಿಂದ ಜನರಲ್ಲಿ ಸದ್ಭಾವನೆ ಮೂಡುವುದರಲ್ಲಿ ಸಂದೇಹವಿಲ್ಲ ಎಂದರು.

ನಾಗರಾಜ್ ಹೆಚ್ ಎಸ್ ಪರಿಸರ ಗೀತೆ ಹಾಗೂ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಪ್ರಾರ್ಥಿಸಿದರು. ಪ್ರಾಸ್ತಾವಿಕವಾಗಿ ಶಿವನಕೆರೆ ಬಸವಲಿಂಗಪ್ಪವರು ಮಾತನಾಡಿದರು. ಎಸ್ ಆರ್ ಚಂದ್ರಶೇಖರಯ್ಯ ಸ್ವಾಗತಿಸಿದರೆ ರಾಜು ನಿರೂಪಿಸಿದರು. ವೇದಿಕೆಯ ಮೇಲೆ ಎ ಸಿ ಚಂದ್ರಪ್ಪ, ಪಾಂಡೋಮಟ್ಟಿಯ ಲೋಕಣ್ಣ. ಪಾದಯಾತ್ರೆಗೆ ಹೋಗುವ ಮಾರ್ಗದ ಗ್ರಾಮಗಳಿಂದ ಹಾಗೂ ಸಾಣೇಹಳ್ಳಿಯ ಸುತ್ತಮುತ್ತ ಗ್ರಾಮಸ್ಥರಿಂದ ಸುಮಾರು 35೦ ಜನ ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *